ADVERTISEMENT

ವ್ಯವಹಾರಕ್ಕೆ ಆರ್ಥಿಕ ಜ್ಞಾನ ಅಗತ್ಯ: ಪ್ರಾಧ್ಯಾಪಕ ವೆಂಕಟರಮಣ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 7:21 IST
Last Updated 26 ಫೆಬ್ರುವರಿ 2026, 7:21 IST
ಕನಕಗಿರಿಯ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಹಾಗೂ ಸಹಾಯಕ ಪ್ರಾಧ್ಯಾಪಕ ವೆಂಕಟರಮಣ ಅವರನ್ನು ಸನ್ಮಾನಿಸಲಾಯಿತು
ಕನಕಗಿರಿಯ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಹಾಗೂ ಸಹಾಯಕ ಪ್ರಾಧ್ಯಾಪಕ ವೆಂಕಟರಮಣ ಅವರನ್ನು ಸನ್ಮಾನಿಸಲಾಯಿತು   

ಕನಕಗಿರಿ: ‘ಪ್ರತಿಯೊಬ್ಬರ ದಿನ ನಿತ್ಯದ ಜೀವನದಲ್ಲಿ ಹಣಕಾಸು ವ್ಯವಹಾರ ಸಾಮಾನ್ಯವಾಗಿದೆ. ಮನುಷ್ಯನ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಅವಶ್ಯವಾಗಿ ಎಲ್ಲರಿಗೂ ಹಣ ಬೇಕು. ಹಣ ಗಳಿಸುವುದರ ಜತೆಗೆ ಉಳಿಸಿಕೊಂಡರೆ ಜೀವನದಲ್ಲಿ ಆರ್ಥಿಕವಾಗಿ ಪ್ರಗತಿ ಹೊಂದಲು ಸಾಧ್ಯ’ ಎಂದು ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವೆಂಕಟರಮಣ ಹೇಳಿದರು.

ಪಟ್ಟಣದ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಹಾಗೂ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಯಾವುದಕ್ಕೆ ಹಣ ಖರ್ಚು ಮಾಡಬೇಕು ಅಥವಾ ಖರ್ಚು ಮಾಡಬಾರದು. ಖರ್ಚುಗಳನ್ನು ಹೇಗೆ ನಿಭಾಯಿಸಬೇಕು ಮತ್ತು ಉಳಿತಾಯವನ್ನು ಹೇಗೆ ಮಾಡಬೇಕು ಎಂಬುದರ ಕುರಿತಾಗಿ ಇರುವ ಜ್ಞಾನವೇ ಪ್ರತಿಯೊಬ್ಬರನ್ನು ಆರ್ಥಿಕವಾಗಿ ಯಶಸ್ವಿಗೊಳಿಸುತ್ತದೆ’ ಎಂದರು.

ADVERTISEMENT

‘ಹಣ ಖರ್ಚು ಮಾಡುವುದರಲ್ಲಿ ಅಥವಾ ವಸ್ತು ಸೇವೆಗಳನ್ನು ಪಡೆಯುವಲ್ಲಿಯೂ ಕ್ರಮದ ಜತೆಗೆ ಶಿಸ್ತು ಇದೆ. ಹಣ ಗಳಿಕೆ ಮಾಡುವವರು ಯಾರೇ ಆದರೂ ಅವರು ಮೊದಲು ತಮ್ಮ ಅವಶ್ಯಕತೆಗಳಿಗೆ ಖರ್ಚು ಮಾಡಬೇಕು. ಆನಂತರ ಐಷಾರಾಮಿಗಳಿಗೆ ಖರ್ಚು ಮಾಡಬೇಕು’ ಎಂದು ಹೇಳಿದರು.

ಐಕ್ಯೂಎಸಿ ಸಂಚಾಲಕ ಹಾಗೂ ಇಂಗ್ಲಿಷ್ ವಿಭಾಗದ ಮುಖ್ಯಸ್ಥರೂ ಆದ ರಕ್ಷಿತ್.ಎ ಮಾತನಾಡಿ‌,‘
ಬೌದ್ಧಿಕ ಮಟ್ಟ ಹೆಚ್ಚಿಸುವುದು ಮಾತ್ರವಲ್ಲದೆ ಸಾಮಾನ್ಯ ವ್ಯವಹಾರ ಜ್ಞಾನವನ್ನು ಕಲಿಸುವಲ್ಲಿಯೂ ಈ ಉಪನ್ಯಾಸ ಸಹಕಾರಿಯಾಗಿದೆ’ ಎಂದರು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ವೀರೇಶ್ ಕೆಂಗಲ್, ಶರಣಪ್ಪ ಸಾಸಲಮರ್ಡಿ, ಬೋರಯ್ಯ ಹಾಗೂ ಪತ್ರಿಕೋದ್ಯಮ ವಿಭಾಗದ ವಿಜಯ ಸರೋದೆ, ಬಸವರಾಜ.ಎಲ್.ಚಿಗರಿ ಇದ್ದರು. ವಿದ್ಯಾರ್ಥಿನಿ ಚೈತ್ರಾ ಪ್ರಾರ್ಥಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಸಂಗಮೇಶ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.