
ಕನಕಗಿರಿ: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಶನಿವಾರ ಚುನಾವಣೆ ನಿಗದಿಯಾಗಿದ್ದು, ಅಧ್ಯಕ್ಷರಾಗಿ 14ನೇ ವಾರ್ಡ್ ಸದಸ್ಯೆ ತನುಶ್ರೀ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯೇ ಹೆಚ್ಚಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಒಟ್ಟು 17 ಜನ ಸದಸ್ಯರಲ್ಲಿ 12 ಜನ ಕಾಂಗ್ರೆಸ್ ಹಾಗೂ ಉಳಿದವರು ಬಿಜೆಪಿಗರಿದ್ದಾರೆ. 2024ರಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಘೋಷಣೆಯಾದಾಗ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಅ ಮಹಿಳೆಗೆ ಬಂದಿತ್ತು. ಇದೇ ಮೀಸಲಾತಿಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿರುವ ಮೊದಲ ವಾರ್ಡ್ ಸದಸ್ಯೆ ಹುಸೇನಬೀ ಚಳ್ಳಮರದ, 6ನೇ ವಾರ್ಡ್‌ನ ಸೈನಾಜಬೇಗ್ಂ ಗುಡಿಹಿಂದಲ, 14ನೇ ವಾರ್ಡ್‌ನ ತನುಶ್ರೀ ಟಿಜೆ ರಾಮಚಂದ್ರ ಹಾಗೂ 16ನೇ ವಾರ್ಡ್ ಸದಸ್ಯೆ ಹುಸೇನಬೀ ಸಂತ್ರಾಸ್ ಸ್ಪರ್ಧೆಯಲ್ಲಿದ್ದರು.
ನಾಲ್ಕೂ ಜನ ತಮ್ಮನ್ನೇ ಅಧ್ಯಕ್ಷೆಯನ್ನಾಗಿ ಮಾಡುವಂತೆ ತಮ್ಮ ಬೆಂಬಲಿಗರು, ಹಿತೈಷಿಗಳು ಹಾಗೂ ಸಮಾಜದವರ ಮೂಲಕ ವಿವಿಧ ಕಸರತ್ತು ನಡೆಸಿದ್ದರು. ಹೀಗಾಗಿ ಅಧ್ಯಕ್ಷ ಹುದ್ದೆ ಯಾರು ಅಲಂಕರಿಸುತ್ತಾರೆ ಎಂಬುದು ಕುತೂಹಲವಾಗಿಯೇ ಉಳಿದಿತ್ತು.
ಕೊನೆ ಗಳಿಗೆಯಲ್ಲಿ ಸಚಿವ ಶಿವರಾಜ ತಂಗಡಗಿ ಅವರು ಹುಸೇನಬೀ ಚಳ್ಳಮರದ ಹಾಗೂ ತನುಶ್ರೀ ಟಿಜೆ ರಾಮಚಂದ್ರ ಇಬ್ಬರ ಮಧ್ಯೆ ತಲಾ 15 ತಿಂಗಳ ಕಾಲ ಅಧಿಕಾರ ಹಂಚಿಕೆ ಮಾಡಿ ಮೊದಲಿಗೆ ಹುಸೇನಬೀ ಚಳ್ಳಮರದ ಆನಂತರ ತನುಶ್ರೀ ಅಧ್ಯಕ್ಷರು ಎಂದು ಘೋಷಣೆ ಮಾಡಿದ್ದು ಈಗ ಇತಿಹಾಸ.
ಕಗ್ಗಂಟು: ಕಾಂಗ್ರೆಸ್‌ನಲ್ಲಿ ಎರಡು ಬಣಗಳಿರುವುದರಿಂದ ಚುನಾವಣೆ ಅಲ್ಪ ಕಾವು ಪಡೆದುಕೊಂಡಿದ್ದು ಗಂಗಾವತಿಯಲ್ಲಿ ಶನಿವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಸಭೆ ನಡೆಸಿ ಕಾವು ತಂಪಾಗಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
2021ರಲ್ಲಿ ಪಟ್ಟಣ ಪಂಚಾಯಿತಿಯ 17 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುವ ಸಮಯದಲ್ಲಿದ್ದ ಮುಖಂಡರು ಹಾಗೂ ಸದಸ್ಯರ ನಡುವಿನ ಅನ್ಯೋನ್ಯತೆ ಕಳೆದ ಕೆಲ ವರ್ಷಗಳ ಹಿಂದೆ ಮುನಿಸಿಗೆ ಕಾರಣವಾಗಿತ್ತು.
ತಮ್ಮ ಮಾತು ಕೇಳುವ ಸದಸ್ಯರಿಗೆ ಅಧ್ಯಕ್ಷ ಸ್ಥಾನದ ಪಟ್ಟ ಕಟ್ಟಬೇಕೆಂದು ಮುಖಂಡರು ತೆರೆಮರೆಯಲ್ಲಿ ಕೆಲಸ ಮಾಡಿ ಮೊದಲ ಅವಧಿಯಲ್ಲಿಯೆ ಯಶಸ್ಸು ಕಂಡು ಈಗ ಉಳಿದ 13 ಅವಧಿಗೂ ಇದೇ ಮಾನದಂಡ ಅನುಸರಿಸುತ್ತಿರುವುದು ಸುಲಭ ಆಯ್ಕೆಗೆ ಕಗ್ಗಂಟಾದ ಪರಿಣಾಮ ಸಚಿವರು ಸಭೆ ನಡೆಸಿದರು ಎಂದು ಮೂಲಗಳು ತಿಳಿಸಿದ್ದು, ವಿಪ್ ಜಾರಿ ಮಾಡುವ ಮೂಲಕ ತನುಶ್ರೀ ಅವರ ಹೆಸರು ಪ್ರಕಟಿಸಿದರು ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.