ಕನಕಗಿರಿ: ಪಟ್ಟಣವೂ ಸೇರಿ ತಾಲ್ಲೂಕಿನ ಗ್ರಾಮಗಳ ರಸ್ತೆಗಳು ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ. ಸಣ್ಣ ಮಳೆ ಬಂದರೂ ಪಟ್ಟಣದ ಬಹುತೇಕ ರಸ್ತೆಗಳ ಸ್ಥಿತಿ ಹೇಳತೀರದು.
ಕಳೆದ ಎರಡು ದಶಕಗಳ ಹಿಂದೆ ಶಿವಾಜಿ ಹಾಗೂ ವಾಲ್ಮೀಕಿ ನಗರ, ಮೆಹಬೂಬನಗರ, ಇತರೆ ಪ್ರದೇಶಗಳು ಹೊಸ ಬಡಾವಣೆಗಳಾಗಿ ರೂಪಗೊಂಡಿದ್ದು, ನಿವೇಶನಗಳ ಮಾಲೀಕರು ರಸ್ತೆಗಳನ್ನು ಅಭಿವೃದ್ಧಿ ಪಡಿಸದೆ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ. ಇಲ್ಲಿವರೆಗೂ ಯಾವ ಬಡಾವಣೆಗ ರಸ್ತೆಗಳೂ ಡಾಂಬರು ಅಥವಾ ಸಿಮೆಂಟ್ ಕಾಂಕ್ರಿಟ್ ಕಂಡಿಲ್ಲ.
ಮಳೆಗಾಲದಲ್ಲಿ ಸಾರ್ವಜನಿಕರು, ದ್ವಿಚಕ್ರ ವಾಹನ ಸವಾರರ ಗೋಳು ಕೇಳುವವರು ಇಲ್ಲವಾಗಿದ್ದಾರೆ. 4ನೇ ವಾರ್ಡ್ ವ್ಯಾಪ್ತಿಯ ವೀರೇಶ ಅಂಬಿಗೇರ ಮನೆ ಪರಿಸರ, ಟಿ.ಸಂಗಪ್ಪ ಅವರ ಮನೆಗಳ ಮುಂದೆ, ಐದನೇಯ ವಾರ್ಡ್ ಬೆಸ್ಟ್ ಕಾಲೇಜು ರಸ್ತೆಯಿಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯ ರಸ್ತೆಗಳು ಅಕ್ಷರಶಃ ಕೆರೆ ಪ್ರದೇಶವಾಗಿದೆ. ಈ ರಸ್ತೆಗಳಲ್ಲಿ ಓಡಾಡದಂತ ವಾತಾವರಣ ಇದೆ ಎಂದು ಸ್ಥಳೀಯರು ತಿಳಿಸುತ್ತಾರೆ.
ಪಟ್ಟಣದ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗಿದ್ದರೂ ರಸ್ತೆಗೆ ಅನುದಾನ ಬಳಸದಂತೆ ನಿರ್ಬಂಧ ಹೇರಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪಟ್ಟಣ ಪಂಚಾಯಿತಿ ಚುನಾವಣೆ ನಡೆದು ಇಲ್ಲಿಗೆ ನಾಲ್ಕು ವರ್ಷಗಳು ಸಂದಿದೆ. ಯಾವುದೇ ವಾರ್ಡ್‌ನಲ್ಲಿಯೂ ಸಿ.ಸಿ ರಸ್ತೆಯಾಗಲಿ, ಡಾಂಬರೀಕರಣದ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ವಾರ್ಡ್‌ಗಳಲ್ಲಿ ಸಿ.ಸಿ ರಸ್ತೆ ನಿರ್ಮಾಣ ಮಾಡುವುದು ಬೇಡ ಎಂದು ಅಧಿಕಾರಿಗಳು ನಿರ್ಬಂಧ ಹಾಕಿರುವುದಕ್ಕೆ ಸದಸ್ಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ವಾಲ್ಮೀಕಿ ವೃತ್ತದಿಂದ ಕಾಟಾಪುರ ಗ್ರಾಮದ ತಿರುವಿನ ವರೆಗೆ, ನೀರ್ಲೂಟಿಯಿಂದ ಚಿಕ್ಕಖೇಡ, ಹಿರೇಖೇಡ, ಗುಡದೂರು, ಉಮಳಿ ಕಾಟಾಪುರ, ಕೆ. ಮಲ್ಲಾಪುರ, ಕರಡೋಣ ರಸ್ತೆಗಳು ತೀರ ಹದಗೆಟ್ಟಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಕನಕಗಿರಿಯಿಂದ ಬಂಕಾಪುರ, ಬಸರಿಹಾಳದಿಂದ ಗೌರಿಪುರ, ವಡಕಿ ಕ್ರಾಸ್ ನಿಂದ ಚಿರ್ಚನಗುಡ್ಡ, ನವಲಿಯಿಂದ ಕರಡೋಣ, ಯತ್ನಟ್ಟಿ, ಬುನ್ನಟ್ಟಿ ರಸ್ತೆಗಳೂ ಸುಗಮ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿವೆ.
ಪ್ರಸಕ್ತ ವರ್ಷದಲ್ಲಿ ತಾಲ್ಲೂಕಿನಲ್ಲಿ ಉತ್ತಮ ಮಳೆ ಸುರಿದಿದ್ದು, ರಸ್ತೆಗಳಲ್ಲಿ ನೀರು ನಿಂತು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಈ ಪ್ರದೇಶದ ರಸ್ತೆಗಳಲ್ಲಿ ಮರಳು ಅಕ್ರಮ ಸಾಗಾಣಿಕೆಯ ಟ್ರ್ಯಾಕ್ಟರ್, ಲಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಓಡಾಡುತ್ತಿರುವುದರಿಂದ ಡಾಂಬರೀಕರಣ ಕಿತ್ತಿ ಕೊಂಡುಹೋಗಿದೆ. ರಸ್ತೆಗೆ ಹಾಕಿದ ಕಂಕರ್ ಮೇಲೆ ಬಂದಿದ್ದು ತಗ್ಗುಗಳು ರಾರಾಜಿಸುತ್ತಿವೆ. ಕಳೆದ ಆರೇಳು ವರ್ಷಗಳ ಹಿಂದೆ ಈ ರಸ್ತೆಗಳು ಡಾಂಬರೀಕರಣಗೊಂಡಿದ್ದವು. ಈಗ ರಸ್ತೆಗಳು ಹಾಳಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
‘ಜೀರಾಳದಿಂದ ಜೀರಾಳ ಕಲ್ಗುಡಿ, ಮಲ್ಲಿಗೆವಾಡ ಗ್ರಾಮಗಳ ಡಾಂಬರೀಕರಣ ಕಾಮಗಾರಿ ಕಳಪೆಯಾಗಿದೆ ಎಂಬ ಮಾಹಿತಿ ಇದ್ದು ಅದನ್ನು ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಆಗುವವರೆಗೆ ರಸ್ತೆ ಮಾಡದಂತೆ ಜಿಲ್ಲಾಧಿಕಾರಿ ಹಾಗೂ ಯೋಜನಾ ನಿರ್ದೇಶಕರು ಆದೇಶದಿಂದಾಗಿ ಸಿ.ಸಿ ರಸ್ತೆ ಮಾಡುತ್ತಿಲ್ಲ. ಬದಲಾಗಿ ಫೇವರ್ಸ್ ಹಾಗೂ ಡಾಂಬರೀಕರಣಕ್ಕೆ ಆದ್ಯತೆ ಕೊಡಲಾಗಿದೆಹುಸೇನಬೀ ಚಳ್ಳಮರದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ
‘ಡಾಂಬರೀಕರಣಕ್ಕೆ ₹150 ಕೋಟಿ ಅನುದಾನ ಬಿಡುಗಡೆ’
‘ಯೋಜನಾ ಇಲಾಖೆ ಹಾಗೂ ಕೆಕೆಆರ್‌ಡಿಬಿ ಮತ್ತು ವಿವಿಧ ಇಲಾಖೆಗಳ ವತಿಯಿಂದ ತಾಲ್ಲೂಕು ವ್ಯಾಪ್ತಿಯ ರಸ್ತೆಗಳ ಡಾಂಬರೀಕರಣಕ್ಕೆ ₹150 ಕೋಟಿ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಮೇಲೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.