
ಕನಕಗಿರಿ: ‘ರಾಜ್ಯದಲ್ಲಿ ಉಸಿರಾಡಲು ಸರ್ಕಾರದ ಅನುಮತಿ ಬೇಕಾ’ ಎಂದು ಶ್ರೀರಾಮಸೇನೆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಪ್ರಶ್ನಿಸಿದರು.
ಹಿಂದೂ ಜಾಗರಣಾ ವೇದಿಕೆ ಹಾಗೂ ಮರಾಠ ಸಮಾಜದ ವತಿಯಿಂದ ಇಲ್ಲಿನ ಕನಕಾಚಲಪತಿ ದೇವಸ್ಥಾನದಲ್ಲಿ ಶನಿವಾರ ಆಯೋಜಿಸಿದ್ದ ಹಿಂದೂ ಸಾಮ್ರಾಜ್ಯೋತ್ಸವ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿಯಲ್ಲಿ ಅವರು ಮಾತನಾಡಿದರು.
‘ಶಿವಾಜಿ ಭಾವಚಿತ್ರದ ಮೆರವಣಿಗೆಯಲ್ಲಿ ಕಲ್ಲು, ಚಪ್ಪಲಿ ಎಸೆಯುವ ಹಾಗೂ ಸೂರ್ಯ ಉದಯವಾಗುವ ಮುಂಚೆ ಆಜಾನ್ ಮಾಡುವ ಮುಸ್ಲಿಮರಿಗೆ ಬೆಂಬಲ ನೀಡುವ ಸರ್ಕಾರ, ದೇಶಭಕ್ತಿ ಮೆರೆಯುವ ಹಿಂದೂಗಳಿಗೆ ತೊಂದರೆ ಕೊಡುತ್ತಿದೆ. ಗೋವುಗಳ ಸಾಗಾಣಿಕೆ, ಗೋಹತ್ಯೆ ತಡೆಯುವ ತಾಕತ್ತು ಸರ್ಕಾರಕ್ಕೆ ಇಲ್ಲ’ ಎಂದು ಟೀಕಿಸಿದರು.
‘ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದಲ್ಲಿಯೂ ಕಾಂಗ್ರೆಸ್ ಮುಸ್ಲಿಮರ ತುಷ್ಟಿಕರಣ ಮಾಡುತ್ತಿದೆ. ವಂದೇಮಾತರಂ, ರಘುಪತಿ ರಾಘವ ರಾಜಾರಾಮ್ ಹಾಡಿಗೆ ಕಾಂಗ್ರೆಸ್ ವಿರೋಧವಿದೆ’ ಎಂದು ಹೇಳಿದರು.
‘ಪಾಕಿಸ್ತಾನ ವಿಭಜನೆ ಸಮಯದಲ್ಲಿ ಪಾಕಿಸ್ತಾನದಲ್ಲಿದ್ದ ಹಿಂದೂಗಳು ಭಾರತಕ್ಕೆ, ಭಾರತದ ಮುಸ್ಲಿಮರು ಪಾಕಿಸ್ತಾನಕ್ಕೆ ಕಳಿಸಬೇಕೆಂಬ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಲಹೆಯನ್ನು ಕಾಂಗ್ರೆಸ್ ನಾಯಕರು ಸ್ವೀಕರಿಸಿಲ್ಲ. ಹೀಗಾಗಿ ದೇಶದಲ್ಲಿ ಗಂಭೀರ ಸಮಸ್ಯೆಗಳು ತಲೆದೋರುತ್ತಿವೆ’ ಎಂದು ಕಿಡಿಕಾರಿದರು.
‘ಕಾಂಗ್ರೆಸ್ ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ರಾಜಕಾರಣ ಮಾಡುತ್ತಿದೆ. ಮುಂದೊಂದು ದಿನ ಅವರೇ ಕಾಂಗ್ರೆಸ್‌ನವರಿಗೆ ಬುದ್ಧಿ ಕಲಿಸುತ್ತಾರೆ’ ಎಂದರು.
‘ನೂರು ವರ್ಷಗಳ ಸಂಭ್ರಮಾಚರಣೆಯಲ್ಲಿರುವ ಆರ್‌ಎಸ್‌ಎಸ್ ದೇಶದ ಸ್ವಾಭಿಮಾನದ ಸಂಕೇತವಾಗಿದೆ. ಕಾಂಗ್ರೆಸ್ ಆರ್‌ಎಸ್‌ಎಸ್ ಅನ್ನು ದೇಶದ್ರೋಹಿ, ಜಾತಿವಾದಿ ಸಂಘಟನೆ ಎಂದು ದೂರುತ್ತಿದೆ. ಇಂಥ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಪ್ರತಿಯೊಬ್ಬರ ಮನೆಯಲ್ಲಿಯೂ ಆರ್‌ಎಸ್‌ಎಸ್ ಬೆಳೆಸಬೇಕು’ ಎಂದು ಹೇಳಿದರು.
‘ಮನೆಯಲ್ಲಿ ಮಾತ್ರ ಆಯಾ ಜಾತಿಯವರು ಅಂತಾ ಹೇಳಿ. ಹೊರಗೆ ಬಂದಾಗ ನಾನೊಬ್ಬ ಹಿಂದೂ ಅಂತ ಎದೆತಟ್ಟಿ ಹೇಳಿ. ಹಿಂದೂ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಪ್ರತಿಯೊಬ್ಬರ ಮನೆ ಮನೆಯಲ್ಲಿ ಶಿವಾಜಿ ಜನಿಸಬೇಕು. ದೇಶ ಪ್ರೇಮಿಯಾಗಬೇಕು’ ಎಂದು ತಿಳಿಸಿದರು.
ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್ ಕೆರೆಹಳ್ಳಿ ಮಾತನಾಡಿ, ‘ಗೋಹತ್ಯೆ ಮಾಡಬಾರದು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ತಿಳಿಸಿದರೂ ಪೊಲೀಸರು ಅದನ್ನೇ ಪಾಲನೆ ಮಾಡುತ್ತಿಲ್ಲ. ಕಾನೂನು ಪಾಲನೆ ಮಾಡಿ ಗೋರಕ್ಷಣೆ ಮಾಡುವ ಹಿಂದೂಗಳ ಮೇಲೆ ಪ್ರಕರಣ ದಾಖಲಿಸುತ್ತಾರೆ’ ಎಂದು ದೂರಿದರು.
ಹೆಬ್ಬಾಳದ ನಾಗಾಭೂಷಣ ಶಿವಾಚಾರ್ಯ, ಶರಣೆಗೌಡ ಯರಡೋಣ ಮಾತನಾಡಿದರು. ಕಾರಟಗಿಯ ಮರುಳಸಿದ್ದಯ್ಯ ಸ್ವಾಮಿ, ಪ್ರಮುಖರಾದ ಹನುಮಂತಪ್ಪ ಮರಾಠಿ, ಗುರುಸಿದ್ದಪ್ಪ ಹಾದಿಮನಿ ಇದ್ದರು.
ಸುರೇಶ ಚವ್ಹಾಣ ಪ್ರಾರ್ಥಿಸಿದರು. ಶರಣಪ್ಪ ಮರಾಠಿ ಸ್ವಾಗತಿಸಿದರು. ಶಿಕ್ಷಕ ವೆಂಕೋಬ ಪೂಜಾರ ನಿರೂಪಿಸಿದರು.
ಅದ್ದೂರಿ ಮೆರವಣಿಗೆ: ಮುಸ್ಲಿಮರಿಂದ ಶಿವಾಜಿಗೆ ನಮನ ಕನಕಗಿರಿ: ಇಲ್ಲಿನ ಕನಕಾಚಲಪತಿ ದೇವಾಲಯದ ಆವರಣದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಮರಾಠ ಸಮಾಜದ ವತಿಯಿಂದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಶಿವಾಜಿ ಹಾಗೂ ಭಾರತ ಮಾತೆಯ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಶಿವಾಜಿ ವೃತ್ತದಿಂದ ಆರಂಭವಾದ ಮೆರವಣಿಗೆ ಇಂದಿರಾನಗರ ಕಾಲೊನಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಶಾಸಕರ ಶಾಲೆ ಮೋಚಿಗೇರ ಭೋವಿ ಕಾಲೊನಿಯಿಂದ ರಾಜಬೀದಿ ಮೂಲಕ ಕನಕಾಚಲಪತಿ ದೇಗುಲದವರೆಗೆ ನಡೆಯಿತು. ತಾಷಮೇಳ ಡಿಜೆ ಹಾಗೂ ಗೊಂಬೆಗಳ ಕುಣಿತ ಮೆರವಣಿಗೆಗೆ ಮೆರುಗು ತಂದವು. ಯುವಕರು ಹೆಣ್ಣುಮಕ್ಕಳು ತಾಷ ಮೇಳಕ್ಕೆ ಕುಣಿದು ಕುಪ್ಪಳಿಸಿದರು.
ನೂರಾನಿ ಮಸೀದಿ ಎದುರು ಶಿವಾಜಿ ಭಾವಚಿತ್ರಕ್ಕೆ ಮುಸ್ಲಿಂ ಸಮಾಜದವರು ಹೂವಿನ ಹಾರ ಹಾಕಿ ನಮನ ಸಲ್ಲಿಸಿದರು. ಪ್ರಮುಖರಾದ ಅಯ್ಯನಗೌಡ ಅರಳಹಳ್ಳಿ ಬಾಜಿರಾವ್ ಹನುಮಂತಪ್ಪ ಮರಾಠಿ ಹನುಮೇಶ ಗಂಗಾಮತ ಪೃಥ್ವಿ ಮ್ಯಾಗೇರಿ ಅಂಬಣ್ಣ ಹೂಗಾರ ನಾಗರಾಜ ಚವ್ಹಾಣ ಹನುಮಂತ ರೆಡ್ಡಿ ಮಹಲಮನಿ ಹನುಮೇಶ ಮಹಿಪತಿ ಸಣ್ಣ ಬುಷಪ್ಪ ದೊಡ್ಡ ನಾಗರಾಜ ಹನುಮೇಶ ಗಾಯಕವಾಡ ದೊಡ್ಡಬಸವರಾಜ ಸಾನಬಾಳ ಸಂಪತಕುಮಾರ ಇದ್ದರು. ಎಸ್‌ಪಿ ಡಾ.ರಾಮ್ ಎಲ್.ಅರಸಿದ್ದಿ ಡಿವೈಎಸ್ಪಿಗಳಾದ ಜೆ.ಎಸ್.ನ್ಯಾಮಗೌಡ ಸಿದ್ದಲಿಂಗಪ್ಪಗೌಡ ಪಾಟೀಲ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು. ಜಯಂತಿ ನಿಮಿತ್ತ ಜಿಲ್ಲಾಧಿಕಾರಿಯವರು ಮದ್ಯ ಮಾರಾಟ ನಿಷೇಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.