ADVERTISEMENT

ಕನಕಗಿರಿಯಲ್ಲಿ ಉಪನೊಂದಣಿ ಕಚೇರಿ ಶೀಘ್ರ ಆರಂಭ : ಸಚಿವ ಶಿವರಾಜ ತಂಗಡಗಿ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:40 IST
Last Updated 15 ಸೆಪ್ಟೆಂಬರ್ 2025, 5:40 IST
<div class="paragraphs"><p>ಕನಕಗಿರಿ ಸಮೀಪದ ಗೌರಿಪುರ ಗ್ರಾಮದ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭಾನುವಾರ ಭೇಟಿ ನೀಡಿದರು.</p></div>

ಕನಕಗಿರಿ ಸಮೀಪದ ಗೌರಿಪುರ ಗ್ರಾಮದ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭಾನುವಾರ ಭೇಟಿ ನೀಡಿದರು.

   

ಕನಕಗಿರಿ: ‘ಉಪನೋಂದಣಿ ಕಚೇರಿ ತೆರೆಯಲು ಅಡ್ಡಿಯಾಗಿದ್ದ ತಾಂತ್ರಿಕ ತೊಂದರೆ ನಿವಾರಣೆಯಾಗಿದ್ದು ಶೀಘ್ರದಲ್ಲಿ ಆರಂಭಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ತಾಲ್ಲೂಕಿನ ಗೌರಿಪುರ ಗ್ರಾಮದ ಕೆರೆಯನ್ನು ಭಾನುವಾರ ವೀಕ್ಷಿಸಿ ಅವರು ಮಾತನಾಡಿದರು. ಕೃಷ್ಣಾ ಬಿ ಸ್ಕೀಂ ಹಾಗೂ ತುಂಗಾಭದ್ರ ಜಲಾಶಯದಿಂದ ತಾಲ್ಲೂಕಿನ ಲಾಯದುಣಸಿ, ಗೌರಿಪುರ, ಹುಲಸನಹಟ್ಟಿ, ಲಕ್ಷ್ಮೀ ದೇವಿ ಕೆರೆ, ಕಾಟಾಪುರ, ಇಂಗಳದಾಳ ಇತರೆ ಗ್ರಾಮದ ಕೆರೆಗಳಿಗೆ ನೀರು ಹರಿದು ಬರುತ್ತಿದ್ದು ಲಾಯದುಣಸಿ ಹೊರತುಪಡಿಸಿ ಉಳಿದ ಕೆರೆಗಳು ಭರ್ತಿಯಾಗುವ ಹಂತದಲ್ಲಿವೆ ಡಿಸೆಂಬರ್‌ನಲ್ಲಿ ಕೆರೆಗಳಿಗೆ ಬಾಗಿನ ಅರ್ಪಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಪದೆಪದೇ ಪೈಪ್‌ಗಳು ಒಡೆಯುತ್ತಿರುವ ಹಿನ್ನೆಲೆಯಲ್ಲಿ ಲಾಯದುಣಸಿ ಗ್ರಾಮದ ಕೆರೆಗೆ ನೀರು ಬರುತ್ತಿಲ್ಲ, ಅದನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಕೆಕೆಆರ್‌ಡಿಬಿಯಿಂದ ₹150 ಕೋಟಿ, ಯೋಜನಾ ಇಲಾಖೆಯಿಂದ ₹60 ಕೋಟಿ, ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ₹50‌ ಕೋಟಿ ಮಂಜೂರಾಗಿದ್ದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಸಮುದಾಯ ಭವನ, ದೇವಸ್ಥಾನ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ₹7‌ಕೋಟಿ ರೂಪಾಯಿ ನೀಡಲಾಗಿದೆ ಎಂದರು.

ಪಟ್ಟಣದ ಎಪಿಎಂಸಿಯ ಶ್ರಮಿಕರ ಭವನದಲ್ಲಿ ನ್ಯಾಯಾಲಯ ತೆರೆದು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ ಪಟ್ಟಣದಲ್ಲಿ ಉಪ ಅಂಚೆ ಕಚೇರಿ ಕಟ್ಟಡ ಕಾಮಗಾರಿಗೆ ₹50 ಲಕ್ಷ ಬಿಡುಗಡೆಯಾಗಿದ್ದು ಕಟ್ಟಡ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದೆ ಎಂದರು.

ಇದಕ್ಕೂ ಮುನ್ನ ಸಚಿವರು ಗೌರಿಪುರ ಗ್ರಾಮದಲ್ಲಿ ನೂತನ ರಾಜೀವಗಾಂಧಿ ಸೇವಾ ಕೇಂದ್ರ, ಅಂಗನವಾಡಿ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿದರು. ಇದೇ ಸಮಯದಲ್ಲಿ ಸೋಮಸಾಗರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದರು.

ಗ್ಯಾರಂಟಿ ಅನುಷ್ಠಾನ‌ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರೆಡ್ಡಿಶ್ರೀನಿವಾಸ,‌ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಗಂಗಾಧರಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ‌ ನಾಯಕ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ ನೀರ್ಲೂಟಿ, ಜಿ.ಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ತಾ.ಪಂ ಪ್ರಭಾರ‌ ಇಒ ಕೆ.‌ರಾಜಶೇಖರ, ಸಿಡಿಪಿಒ ವಿರೂಪಾಕ್ಷಿ, ತಾ.ಪಂ ಮಾಜಿ ಅಧ್ಯಕ್ಷ ಬಸಂತಗೌಡ ಪಾಟೀಲ, ಮಲ್ಲಿಕಾರ್ಜುನಗೌಡ, ಗ್ರಾ.ಪಂ ಅಧ್ಯಕ್ಷರಾದ ವೆಂಕಟೇಶ ತೊಗರಿ, ಮಹೇಶ‌ ಬೇವೂರು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.