
ಪ್ರಾತಿನಿಧಿಕ ಚಿತ್ರ
ಕುಷ್ಟಗಿ: ತಾಲ್ಲೂಕು ಮಟ್ಟದ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಊರಿನ ಆಯ್ಕೆ ವಿಷಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದು ಪರಿಷತ್ತಿನ ನಡೆಗೆ ತಾಲ್ಲೂಕಿನ ಕುರುಬನಾಳ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
13ನೇ ಸಮ್ಮೇಳನ ತಾಲ್ಲೂಕಿನ ಹೂಲಗೇರಿಯಲ್ಲಿ ನಡೆಸಲಾಗಿತ್ತು. ಈ ಬಾರಿ ಕುರುಬನಾಳದಲ್ಲಿ ನಡೆಸುವ ಸಂಬಂಧ ಕೆಲ ದಿನಗಳ ಹಿಂದೆ ಕುರುಬನಾಳ ಗ್ರಾಮಸ್ಥರನ್ನು ಸ್ವತಃ ತಾವೇ ಹುಡುಕಿಕೊಂಡು ಹೋಗಿ ಭೇಟಿ ಮಾಡಿದ್ದ ಪರಿಷತ್ತಿನ ಪದಾಧಿಕಾರಿಗಳು ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವಂತೆ ತಿಳಿಸಿದ್ದರು. ಅದಕ್ಕೆ ಕುರುಬನಾಳ ಗ್ರಾಮಸ್ಥರು ಸಮ್ಮತಿಸಿದ್ದರು. ಅಲ್ಲದೆ ಮೆರವಣಿಗೆ, ಊಟೋಪಚಾರ ಸೇರಿದಂತೆ ಎಲ್ಲ ಅಗತ್ಯಗಳನ್ನು ಸ್ವತಃ ನಿರ್ವಹಿಸುತ್ತೇವೆ. ವೇದಿಕೆ ಕಾರ್ಯಕ್ರಮ ಮಾತ್ರ ಪರಿಷತ್ತು ನೋಡಿಕೊಂಡರೆ ಸಾಕು ಉಳಿದೆಲ್ಲ ಕೆಲಸಗಳನ್ನು ನಾವು ನೋಡಿಕೊಳ್ಳುತ್ತೇವೆ ಎಂದು ತಿಳಿಸಿದ್ದರು.
ತಮ್ಮೂರಿನಲ್ಲಿ ಕನ್ನಡಾಂಬೆಯ ತೇರು ಎಳೆಯುವ ನಿಟ್ಟಿನಲ್ಲಿ ಉತ್ಸಾಹ ತೋರಿದ ಕುರುಬನಾಳ ಗ್ರಾಮಸ್ಥರು ಫೆಬ್ರವರಿ ಅಂತ್ಯದ ವೇಳೆಗೆ ಊರಿನಲ್ಲಿ ಸಮ್ಮೇಳನ ನಡೆಯುವ ಸಂಬಂಧ ಸಿದ್ಧತೆ ನಡೆಸಿದ್ದರು. ಸ್ಥಳ, ಮಾನವ ಸಂಪನ್ಮೂಲ, ಸ್ವಯಂ ಸೇವಕರು, ಆರ್ಥಿಕ ಸಂಪನ್ಮೂಲ ಹೀಗೆ ಎಲ್ಲ ಕೆಲಸಕಾರ್ಯಗಳಿಗೆ ಸಂಬಂಧಿಸಿದಂತೆ ತಯಾರಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸಮ್ಮೇಳನದ ಖರ್ಚುವೆಚ್ಚಗಳಿಗೆ ಸಂಬಂಧಿಸಿದಂತೆ ವಂತಿಗೆ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೂ ಮುಂದಾಗಿದ್ದರು.
ಕೊನೆಗಳಿಗೆಯಲ್ಲಿ ಕೈಕೊಟ್ಟ ಸಾಹಿತ್ಯ ಪರಿಷತ್ತಿನ ಕೆಲ ಪದಾಧಿಕಾರಿಗಳು ಹಟಕ್ಕೆ ಬಿದ್ದವರಂತೆ ಅಧ್ಯಕ್ಷರ ಮೇಲೆ ಒತ್ತಡ ಹೇರಿ ಮುದೇನೂರಿನಲ್ಲಿ ಸಮ್ಮೇಳನ ನಡೆಸುವಂತೆ ನಿರ್ಣಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೊದಲೇ ಗ್ರಾಮಸ್ಥರಿಗೆ ತಿಳಿಸಿದಂತೆ ಈ ಬಾರಿ ಕುರುಬನಾಳದಲ್ಲಿ ಸಮ್ಮೇಳನ ನಡೆಸುವ ಸಂಬಂಧ ಈಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಕೆಲವರು ಧ್ವನಿ ಎತ್ತಿದರಾದರೂ ಇತರೆ ಪದಾಧಿಕಾರಿಗಳು ಮುದೇನೂರು ಸಮ್ಮೇಳನಕ್ಕೆ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ನಂತರ ಮುದೇನೂರಿನಲ್ಲಿ ಸಮ್ಮೇಳನ ನಡೆಸಲು ಸ್ವತಃ ಅಧ್ಯಕ್ಷರೇ ಸಭೆಯಲ್ಲಿ ಅಂತಿಮವಾಗಿ ಘೋಷಣೆ ಮಾಡಿದ್ದರು.
ಈ ನಿರ್ಣಯ ಹೊರಬರುತ್ತಿದ್ದಂತೆ ಅಸಮಾಧಾನಗೊಂಡ ಕುರುಬನಾಳ ಗ್ರಾಮಸ್ಥರು ಪರಿಷತ್ತಿನ ಪದಾಧಿಕಾರಿಗಳ ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದೊಂದಿಗೆ ಆಕ್ಷೇಪ ಹಂಚಿಕೊಂಡ ಕುರುಬನಾಳ ಗ್ರಾಮಸ್ಥರು ಮುದೇನೂರಿನಲ್ಲಿ ಸಮ್ಮೇಳನ ನಡೆಸುವುದಕ್ಕೆ ಬೇಸರ ಇಲ್ಲ. ಆದರೆ ಮೊದಲೇ ನಮ್ಮನ್ನು ನೀವೇ ಸಂಪರ್ಕಿಸಿ ಸಮ್ಮೇಳನ ನಡೆಸುವಂತೆ ಹೇಳಿದ್ದರಿಂದ ಒಪ್ಪಿಕೊಂಡಿದ್ದೇವು. ಇಡೀ ಗ್ರಾಮಸ್ಥರು ಸಿದ್ಧತೆಯಲ್ಲಿ ತೊಡಗಿದ್ದರು. ಆದರೆ ಈಗ ನಮ್ಮೂರನ್ನು ತಿರಸ್ಕರಿಸಿರುವುದಕ್ಕೆ ಮಾತ್ರ ನಮ್ಮ ಆಕ್ಷೇಪವಿದೆ. ಕೆಲವೇ ಪಟ್ಟಭದ್ರ ಪದಾಧಿಕಾರಿಗಳ ಮಾತಿಗೆ ಮಣೆಹಾಕಿರುವುದು ಎಷ್ಟು ಸರಿ? ಈ ಬಗ್ಗೆ ಚರ್ಚೆ ನಡೆಯಬೇಕು. ಅಲ್ಲದೆ ಯಾವ ಕಾರಣಕ್ಕೆ ನಮ್ಮೂರನ್ನು ಕೈಬಿಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ.
ಈ ವಿಷಯ ಕುರಿತು ‘ಪ್ರಜಾವಾಣಿ’ ಬಳಿ ತಮ್ಮ ಅಸಮಾಧಾನ ಹೊರಹಾಕಿದ ಕುರುಬನಾಳ ಗ್ರಾಮಸ್ಥರು, ‘ಸಮ್ಮೇಳನ ನಡೆಯುವ ಸ್ಥಳ ಆಯ್ಕೆಯಲ್ಲಿ ಪರಿಷತ್ತಿನ ಪದಾಧಿಕಾರಿಗಳೇ ವಿವಾದ ಸೃಷ್ಟಿಸಿದ್ದಾರೆ. ಪರಿಷತ್ತನ್ನು ಗುತ್ತಿಗೆ ಹಿಡಿದಿರುವಂತೆ ವರ್ತಿಸುತ್ತಿರುವ ಕೆಲ ವ್ಯಕ್ತಿಗಳೇ ತಮ್ಮ ಮೂಗಿನ ನೇರಕ್ಕೆ ನಡೆದುಕೊಳ್ಳುತ್ತಿದ್ದು ಈ ಬಗ್ಗೆ ನಮ್ಮ ಗ್ರಾಮಕ್ಕೆ ಬಂದು ಸಭೆ ನಡೆಸಿ ಸ್ಥಳ ಆಯ್ಕೆಯಲ್ಲಿನ ಗೊಂದಲ ನಿವಾರಿಸಬೇಕು’ ಎಂದು ಪರಿಷತ್ತಿನ ಅಧ್ಯಕ್ಷರನ್ನು ಗ್ರಾಮಸ್ಥರಾದ ಶರಣಪ್ಪ ಪವಾಡೆಪ್ಪನವರ, ಮಲ್ಲಣ್ಣ ಪರಪ್ಪನವರ, ರಮೇಶ ಕುರುಬನಾಳ, ಶರಣಪ್ಪ ತಳವಾರ, ನಿಂಗಪ್ಪ ಬೆಣಕಲ್ಲ, ಮಲ್ಲಪ್ಪ ಗುಮಗೇರಿ, ಭೀಮಪ್ಪ ಪಡೆಪ್ಪನವರ, ನಾಗರಾಜ್ ತರಲಕಟ್ಟಿ ಇತರರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.