ಕಾರಟಗಿ: ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಕೆಲಸದಿಂದ ಶಿಕ್ಷಕರನ್ನು ಕೈಬಿಡಬೇಕು ಎಂದು ಆಗ್ರಹಿಸಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ಬುಧವಾರ ಉಪ ತಹಶೀಲ್ದಾರ್ ಜಗದೀಶಕುಮಾರಗೆ ಸಲ್ಲಿಸಿದರು.
ಸಂಘದ ತಾಲ್ಲೂಕು ಅಧ್ಯಕ್ಷ ವಿಠ್ಠಲ್ ಜೀರಗಾಳಿ ಮಾತನಾಡಿ,‘ಶಿಕ್ಷಕರಿಗೆ ಶಾಲೆಯಲ್ಲೇ ಹೆಚ್ಚುವರಿ ಕೆಲಸಗಳಿವೆ. ಚುನಾವಣಾ ಕಾರ್ಯ ಮತ್ತು ಗುರುತಿನ ಚೀಟಿಗಳ ದಾಖಲಾತಿ ಕೆಲಸಕ್ಕೆ ಶಿಕ್ಷಕರನ್ನು ಬಿಎಲ್‍ಒಗಳನ್ನಾಗಿ ನೇಮಕ ಮಾಡುವುದರಿಂದ ಶಾಲಾ ಕರ್ತವ್ಯ ನಿರ್ವಹಿಸಲು ಅಡ್ಡಿಯಾಗುವುದಲ್ಲದೇ, ಶೈಕ್ಷಣಿಕ ಪ್ರಗತಿ ಕುಂಠಿತವಾಗುವುದು. ಬಿಎಲ್‍ಒ ಕಾರ್ಯದಿಂದ ಶಿಕ್ಷಕರನ್ನು ಬಿಡುಗಡೆಗೊಳಿಸಬೇಕು’ ಎಂದು ಆಗ್ರಹಿಸಿದರು.
ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಬಸವರಾಜ್ ರ್‍ಯಾವಳದ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಚನ್ನಬಸಪ್ಪ ವಕ್ಕಳದ ಮಾತನಾಡಿ, ಶಿಕ್ಷಕರನ್ನು ಬೋಧನಾ ಕಾರ್ಯ ಹಾಗೂ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಮಾಡಬೇಕು. ಸೇವಾ ನಿವೃತ್ತಿ ಅಂಚಿನಲ್ಲಿರುವ 55 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಶಿಕ್ಷಕರನ್ನು ಬಿಎಲ್‍ಒ ಕಾರ್ಯದಿಂದ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಮಕ್ಕಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು’ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ ಮಾತನಾಡಿದರು.
ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ದ್ಯಾಮಣ್ಣ ಬೆನಕಟ್ಟಿ, ಉಪಾಧ್ಯಕ್ಷರಾದ ಹೋಮಣ್ಣ, ಅನುಸೂಯ ಕಂಚಿಮಠ, ಮಹಾಂತಮ್ಮ ಮೇಟಿ, ಸಂಘಟನಾ ಕಾರ್ಯದರ್ಶಿ ಭೀಮಣ್ಣ ಕರಡಿ, ಸಹ ಕಾರ್ಯದರ್ಶಿ ಸುಮಾ ನಾಯಕ, ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರಾದ ಮಹಮ್ಮದ್ ಅಲಿ, ಜಟಿಂಗರಾಯ ದಳವಾಯಿ, ಉಪಾಧ್ಯಕ್ಷ ತಿಮ್ಮಣ್ಣ ನಾಯಕ ಕಾರ್ಲಕುಂಟಿ, ನಿರ್ದೇಶಕಿ ಮಂಗಳಾ ಅಶೋಕ ಹೊಸಮನಿ, ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘದ ಗೌರವಾಧ್ಯಕ್ಷೆ ಅನುಸೂಯ ಹಂಚಿನಾಳ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಣ್ಣ ಯಮನಪ್ಪ, ಶಿಕ್ಷಕರಾದ ಜಂಬುನಾಥ ತುರಾಯದ, ಹನುಮೇಶ, ಯೂಸುಫ್, ಯಂಕಪ್ಪ, ಕರಿಯಪ್ಪ, ಗಂಗಮ್ಮ, ನಿರ್ಮಲಾ, ಚೈತ್ರಾಂಜಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.