
ಕಾರಟಗಿ: ‘ಪಟ್ಟಣದ ಜನರಿಗೆ ಮೂಲಸೌಕರ್ಯ ಒದಗಿಸಲು ಹಾಗೂ ಅಭಿವೃದ್ಧಿಗೆಂದು ಕೋಟ್ಯಂತರ ಅನುದಾನ ತರಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯವಾಗಿ ಮಾಡಬೇಕಾದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ₹3.93 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಸಾರ್ವಜನಿಕರಿಗೆ ಸಮರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಪಟ್ಟಣದಲ್ಲಿ ನಿರ್ಮಿಸಲಾಗಿರುವ ₹1.93ಕೋಟಿ ವೆಚ್ಚದ ಮೌಲಾನಾ ಆಜಾದ್ ಮಾದರಿ ಶಾಲೆ, ₹72.30 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಬ್ಯಾಡ್ಮಿಂಟನ್ ಕೋರ್ಟ್, ₹90 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳು, ರಾಜೀವ್‍ಗಾಂಧಿ ನಗರದಲ್ಲಿ ನಮ್ಮ ಕ್ಲಿನಿಕ್ ಅನ್ನು ಸಾರ್ಜನಿಕ ಸೇವೆಗೆ ಸಮರ್ಪಿಸಿದ ಸಚಿವ ತಂಗಡಗಿ, ಎಸ್‍ಎಫ್‍ಸಿ ಮುಕ್ತ ನಿಧಿಯಡಿ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದರು. 4ನೇ ವಾರ್ಡ್‌ನಲ್ಲಿ ₹34 ಲಕ್ಷ ವೆಚ್ಚದಲ್ಲಿ ಹುಲಿಗೆಮ್ಮದೇವಿ ದೇವಸ್ಥಾನದ ಡಾಂಬರೀಕರಣ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು.
ಮುಂದಿನ ವಾರದಲ್ಲಿ ಕನಕದಾಸ ಸಮುದಾಯ ಭವನ, ವಾಲ್ಮೀಕಿ ಭವನ ನಿರ್ಮಾಣಕ್ಕೆ ತಲಾ ₹2 ಕೋಟಿ, ಪಂಚಮಸಾಲಿ ಸಮಾಜದ ಸಮುದಾಯ ಭವನ ಹಾಗೂ ಶಾದಿ ಮಹಲ್ ನಿರ್ಮಾಣಕ್ಕೆ ತಲಾ ₹1 ಕೋಟಿ ಅನುದಾನ ನೀಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪಟ್ಟಣದಲ್ಲಿ ಕನಕದಾಸ ಪುತ್ಥಳಿ ಪ್ರತಿಷ್ಠಾಪನೆಗೆ ₹8ಲಕ್ಷ ಅನುದಾನ ಒದಗಿಸಲಾಗಿದೆ. ಇದಲ್ಲದೇ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಟೆಂಡರ್ ಹಂತದಲ್ಲಿದ್ದು, ಶೀಘ್ರದಲ್ಲೇ ಚಾಲನೆ ನೀಡಲಾಗುವುದು’ ಎಂದು ಅವರು ಹೇಳಿದರು.
ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು, ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಈಶಪ್ಪ, ಮುಖ್ಯಾಧಿಕಾರಿ ಸಾಬಣ್ಣ ಕಟ್ಟೀಕಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ನಾಗರಾಜ ಅರಳಿ, ಪ್ರಮುಖರಾದ ಶಿವರೆಡ್ಡಿ ನಾಯಕ, ಶರಣೇಗೌಡ ಮಾಲಿಪಾಟೀಲ್, ಕೆ.ಸಿದ್ದನಗೌಡ, ಅಯ್ಯಪ್ಪ ಉಪ್ಪಾರ, ಗಿರಿಯಪ್ಪ ಬೂದಿ, ಚನ್ನಬಸಪ್ಪ ಸುಂಕದ, ಸೋಮಶೇಖರ ಬೇರ್ಗಿ, ದೊಡ್ಡ ಬಸವರಾಜ್ ಬೂದಿ, ಮಂಜುನಾಥ ಮೇಗೂರು, ಸಂಜೀವಪ್ಪ ಸಾಲೋಣಿ, ಪರಶುರಾಮ್ ಸಾಲೋಣಿ, ಮರಿಯಪ್ಪ ಸಾಲೋಣಿ, ಬಾಪುಗೌಡ, ಬಸವರಾಜ ಗದ್ದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.