ADVERTISEMENT

ಕಾರಟಗಿ ಪುರಸಭೆ: ಮೇಗೂರು ಅಧ್ಯಕ್ಷ, ಸುಜಾತಾ ಉಪಾಧ್ಯಕ್ಷೆ

ಬಿಜೆಪಿಯ 3 ಸದಸ್ಯರು ಗೈರು, ಕಾಂಗ್ರೆಸ್‌ಗೆ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:49 IST
Last Updated 17 ಜನವರಿ 2026, 6:49 IST
ಕಾರಟಗಿ ಪುರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಕಾಂಗ್ರೆಸ್‌ ಪಕ್ಷದವರು ಆಯ್ಕೆಯಾಗಿದ್ದು ಶುಕ್ರವಾರ ವಿಜಯೋತ್ಸವ ಆಚರಿಸಲಾಯಿತು
ಕಾರಟಗಿ ಪುರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಕಾಂಗ್ರೆಸ್‌ ಪಕ್ಷದವರು ಆಯ್ಕೆಯಾಗಿದ್ದು ಶುಕ್ರವಾರ ವಿಜಯೋತ್ಸವ ಆಚರಿಸಲಾಯಿತು   

ಕಾರಟಗಿ: ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ಮಂಜುನಾಥ ಮೇಗೂರು, ಉಪಾಧ್ಯಕ್ಷರಾಗಿ ಸುಜಾತ ನಾಗರಾಜ ಭಜಂತ್ರಿ ಶುಕ್ರವಾರ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನಿಂದ ಮಂಜುನಾಥ ಮೇಗೂರು ಹಾಗೂ ಬಿಜೆಪಿಯಿಂದ ಮೋನಿಕಾ ಧನಂಜಯ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನಿಂದ ಸುಜಾತಾ ಭಜಂತ್ರಿ ಹಾಗೂ ಬಿಜೆಪಿಯ ಆನಂದ ಮ್ಯಾಗಳಮನಿ ನಾಮಪತ್ರ ಸಲ್ಲಿಸಿದ್ದರು.

ಚುನಾವಣೆಯಲ್ಲಿ ಮಂಜುನಾಥ ಮೇಗೂರು, ಸುಜಾತಾ ಭಜಂತ್ರಿ ತಲಾ 13 ಮತಗಳನ್ನು ವಿಜೇತರಾದರು. ಜೆಡಿಎಸ್‍ನ ಸಂಗನಗೌಡ ಸೇರಿ 8 ಬಿಜೆಪಿ ಸದಸ್ಯರು ಮತ ಚಲಾಯಿಸಿದ್ದರಿಂದ ಬಿಜೆಪಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಿದ್ದ ಮೋನಿಕಾ, ಆನಂದ ತಲಾ 9 ಮತಗಳನ್ನು ಪಡೆದರು.

ADVERTISEMENT

ಕಾಂಗ್ರೆಸ್ ಅಭ್ಯರ್ಥಿ ಪರ ಸಚಿವ ಶಿವರಾಜ ತಂಗಡಗಿ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಮತ ಚಲಾಯಿಸಿದರೆ, ಬಿಜೆಪಿಯ 3 ಸದಸ್ಯರು ಗೈರು ಹಾಜರಿಯಾಗಿದ್ದರು.

ತಹಶೀಲ್ದಾರ್‌, ಚುಣಾವಣಾಧಿಕಾರಿ ಎಂ. ಕುಮಾರಸ್ವಾಮಿ ವಿಜೇತ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಹೆಸರುಗಳನ್ನು ಘೋಷಣೆ ಮಾಡುತ್ತಿದ್ದಂತೆ ಪುರಸಭೆ ಮುಂದೆ ಜಮಾಯಿಸಿದ್ದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾರಿ ಪ್ರಮಾಣದ ಪಟಾಕಿ ಸಿಡಿಸಿ, ಬಣ್ಣ ಎರಚಿ ಸಂಭ್ರಮಿಸಿದರು.

ಅಧಿಕ ಅನುದಾನದ ಭರವಸೆ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯಿಸಿ, ‘ಪಟ್ಟಣ ಮತ್ತಷ್ಟು ಅಭಿವೃದ್ದಿ ಪಥದತ್ತ ಸಾಗಬೇಕಿದೆ. ಕಳೆದ ಅವಧಿಯಲ್ಲಿ ಅನುದಾನದ ಕೊರತೆಯಿಂದ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಲಿಲ್ಲ. ಪಟ್ಟಣದ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡುತ್ತೇವೆ. ಕುಡಿಯುವ ನೀರು, ರಸ್ತೆಗಳ ಅಗಲೀಕರಣ, ಸ್ವಚ್ಛತೆ, ಸೌಂಧರ್ಯ ಹೆಚ್ಚಿಸಲು ಅಧಿಕ ಅನುದಾನ ತರುತ್ತೇನೆ’ ಎಂದು ಭರವಸೆ ನೀಡಿದರು.

ನೂತನ ಅಧ್ಯಕ್ಷ ಮಂಜುನಾಥ ಮೇಗೂರು ಮಾತನಾಡಿ, ‘ಕಿರಿಯ ವಯಸ್ಸಿನ ಕಾರ್ಯಕರ್ತನಿಗೆ ಸದಸ್ಯನಾಗುವ ಅವಕಾಶ ನೀಡಿ, ಇದೀಗ ಅಧ್ಯಕ್ಷನಾಗುವ ಅವಕಾಶ ಕಲ್ಪಿಸಿದ ಸಚಿವ ಶಿವರಾಜ ತಂಗಡಗಿ, ಬೆಂಬಲಿಸಿರುವ ಸಂಸದ ರಾಜಶೇಖರ ಹಿಟ್ನಾಳ ಹಾಗೂ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವ ಜತೆಗೆ ವಿಶ್ವಾಸಕ್ಕೆ ಬದ್ದನಾಗಿ ಪಟ್ಟಣದಲ್ಲಿ ಅಗತ್ಯ ಸೌಲಭ್ಯಗಳ ಜತೆಗೆ ಅಭಿವೃದ್ದಿಗೆ ಮುಂದಾಗುವೆ’ ಎಂದರು.

ಇನ್‌ಸ್ಪೆಕ್ಟರ್‌ ಸುಧೀರಕುಮಾರ ಬೆಂಕಿ ನೇತೃತ್ವದಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಕಾಂಗ್ರೆಸ್‌ ಸಮಿತಿ ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ನಗರ ಘಟಕದ ಅಧ್ಯಕ್ಷ ಅಯ್ಯಪ್ಪ ಉಪ್ಪಾರ ಪ್ರಮುಖರಾದ ಶಿವರೆಡ್ಡಿ ನಾಯಕ, ಕೆ. ಸಿದ್ದನಗೌಡ, ಶಶಿಧರಗೌಡ ಪಾಟೀಲ್, ರೆಡ್ಡಿ ಶ್ರೀನಿವಾಸ, ನಾಗರಾಜ ಅರಳಿ, ಶರಣಪ್ಪ ಪರಕಿ, ಚನ್ನಬಸಪ್ಪ ಸುಂಕದ, ಬೂದಿ ಗಿರಿಯಪ್ಪ, ಉದಯ ಇಡಿಗೇರ, ಬಿ. ಶರಣಯ್ಯಸ್ವಾಮಿ, ದೇವಪ್ಪ ಭಾವಿಕಟ್ಟಿ, ಸಂಜೀವಪ್ಪ ಸಾಲೋಣಿ, ಮಹೇಶ ಕಂದಗಲ್, ರವಿ ನಂದಿಹಳ್ಳಿ, ಯಮನಪ್ಪ ಮೂಲಿಮನಿ, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.