ADVERTISEMENT

ಕಾರಟಗಿ: ಸ್ವಚ್ಛತಾ ಕಾರ್ಮಿಕರಿಂದ ಅನಿರ್ಧಿಷ್ಟಾವಧಿ ಧರಣಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 4:49 IST
Last Updated 22 ಜುಲೈ 2025, 4:49 IST
ಕಾರಟಗಿಯ ಪುರಸಭೆ ಮುಂಭಾಗದಲ್ಲಿ ಸ್ವಚ್ಛತಾ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿ ಧರಣಿ ಆರಂಭಿಸಿದರು
ಕಾರಟಗಿಯ ಪುರಸಭೆ ಮುಂಭಾಗದಲ್ಲಿ ಸ್ವಚ್ಛತಾ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿ ಧರಣಿ ಆರಂಭಿಸಿದರು   

ಕಾರಟಗಿ: ಪುರಸಭೆಯ ಸ್ವಚ್ಚತಾ ಕಾರ್ಮಿಕರಿಗೆ ಕನಿಷ್ಟ ವೇತನ ನೀಡಬೇಕು, ನೇರ ವೇತನ ಪಾವತಿಗೆ ತುರ್ತು ಕ್ರಮ ಕೈಗೊಳ್ಳಬೇಕು, ಅಧಿಕಾರಿಗಳು ತಾರತಮ್ಯ ಮಾಡುತ್ತಿರುವುದನ್ನು ಖಂಡಿಸಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿಯ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಅನಿರ್ದಿಷ್ಟಾವಧಿ ಧರಣಿಯನ್ನು ಸೋಮವಾರದಿಂದ ಆರಂಭಿಸಿದರು.

ಪುರಸಭೆಯಲ್ಲಿ 2016ರಿಂದ ಇಲ್ಲಿಯವರೆಗೆ 17 ಪೌರ ಕಾರ್ಮಿಕರು ಸ್ವಚ್ಚತಾ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ನೇರಪಾವತಿಯಿಂದ ವಂಚಿತರಾಗಿದ್ದಾರೆ ಈ ಬಗ್ಗೆ ಪುರಸಭೆ, ಮಾಜಿ ಶಾಸಕರು, ಹಾಲಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಯೋಜನಾ ನಿರ್ದೇಶಕರುಗಳಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ದೊರೆಯುತ್ತಿಲ್ಲ. ಅಧಿಕಾರಿಗಳು ಮತ್ತು ರಾಜಕಾರಣಿಗಳ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯ ಸಣ್ಣ ಹನುಮಂತಪ್ಪ ಹುಲಿಹೈದರ್‌ ಪ್ರತಿಕ್ರಿಯಿಸಿದರು.

ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿಸಬೇಕು ಎಂದು ಘೋಷಿಸಿದೆ. ಆದರೆ ಪುರಸಭೆ ಅಧಿಕಾರಿಗಳು 17 ಕಾರ್ಮಿಕರಿಗೆ ಕನಿಷ್ಟ ವೇತನ ನೀಡದೇ, ಕೇವಲ ₹2,500 ನೀಡುತ್ತಿದ್ದಾರೆ. ಇಎಸ್‌ಐ, ಪಿಎಫ್‌, ವಾರದ ರಜೆ, ಹಬ್ಬಗಳ ರಜೆ, ಅನಾರೋಗ್ಯದ ರಜೆಗಳ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದವರು ಹೇಳಿದರು.

ADVERTISEMENT

ಶ್ರೀಪಾಲ್ ಎಂಟರ್‌ಪ್ರೈಸಸ್, ಸೆಕ್ಯೂರಿಟಿ ಮತ್ತು ಸರ್ವಿಸಸ್‌ನಿಂದ ಕೆಲಸ ಮಾಡುವ 15 ಸೇರಿದಂತೆ ಒಟ್ಟು 17 ಕಾರ್ಮಿಕರನ್ನು ನೇರ ಪಾವತಿಗೆ ಪರಿಗಣಿಸಬೇಕು ಎಂದು ಹಲವಾರು ಮನವಿ ಪತ್ರಗಳನ್ನು ಸಲ್ಲಿಸಿದ್ದರೂ, ಹೊಸಬರಿಗೆ ಅವಕಾಶ ನೀಡಲು ಪುರಸಭೆ ಮುಂದಾಗಿರುವುದು ದುರಂತ. ನ್ಯಾಯ ದೊರಕುವವರೆಗೆ ಅನಿರ್ದಿಷ್ಟಾವಧಿ ದರಣಿ ಮುಂದುವರೆಯಲಿದೆ ಎಂದು ಪ್ರತಿಭಟನಾ ನಿರತರು ತಿಳಿಸಿದರು.

ಸಂಘಟನೆಯ ಶೇಖರಪ್ಪ, ಜ್ಯೋತಿ, ಹುಲಿಗೆಮ್ಮ, ಜಲಾಲೆಮ್ಮ, ಹನುಮಂತಿ, ಹುಲಿಗೆಮ್ಮ, ಲಕ್ಷ್ಮೀ, ಹನುಮಂತಿ ಸ್ವಚ್ಛತಾ ಕಾರ್ಮಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.