ಅಳವಂಡಿ: ಇಲ್ಲಿಗೆ ಸಮೀಪದ ಕರ್ಕಿಹಳ್ಳಿಹಲ್ಲಿರುವ ಮೃತ್ಯುಂಜಯೇಶ್ವರ (ಶಿವಚಿದಂಬರೇಶ್ವರ) ಕ್ಷೇತ್ರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಗುರುವಾರ 21ನೇ ವರ್ಷದ ಮಹಾರಥೋತ್ಸವ ಸಂಭ್ರಮದಿಂದ ನೆರವೇರಿತು.
ರಥೋತ್ಸವಕ್ಕೂ ಮೊದಲು ನಡೆದ ಹೋಮದ ಪೂರ್ಣಾಹುತಿಯ ಬಳಿಕ ಆಶೀರ್ವಚನ ನಿಡಿದ ಕ್ಷೇತ್ರದ ಗುರುಗಳಾದ ಸುರೇಶ ಪಾಟೀಲ್ ‘ಕರ್ಕಿಹಳ್ಳಿ ಸಿದ್ಧಿಕ್ಷೇತ್ರವಾಗಿದೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವೆ ಶಕ್ತಿಯಿದೆ. ಭಕ್ತರು ಪಾದಯತ್ರೆ ಮೂಲಕ ಬಂದಿದ್ದಾರೆ. ಅಖಂಡ ವೀಣಾ ಪಾರಾಯಣದಲ್ಲಿ ಪಾಲ್ಗೊಂಡಿದ್ದ ಭಕ್ತರು ಅದೃಷ್ಟವಂತರು’ ಎಂದರು.
‘ಭಗವಂತನ ಸೇವೆ ಮಾಡುವುದು ಎಲ್ಲರಿಗೂ ಲಭಿಸುವುದಿಲ್ಲ. ಕೆಲವರಿಗೆ ಮಾತ್ರ ಈ ಅವಕಾಶವಿರುತ್ತದೆ. ದೇವರ ನಾಮಸ್ಮರಣೆಯಿಂದ ಸಕಲ ಕಷ್ಟಗಳಿಗೂ ಪರಿಹಾರ ಲಭಿಸುತ್ತದೆ’ ಎಂದು ಹೇಳಿದರು. ಶೇಷಚಲ ಭಟ್ ವಣಗೇರಿ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಭಕ್ತರು ಬಂದಿದ್ದರು.
ರಥೋತ್ಸವಕ್ಕೂ ನಾಲ್ಕು ದಿನಗಳ ಮೊದಲು ಧಾರಣಸರಸ್ವತಿ ಹೋಮ, ಮಹಾಲಕ್ಷ್ಮಿ ಹೋಮ, ಆಷಾಢ ಏಕಾದಶಿಯ ಅಂಗವಾಗಿ ಕ್ಷೀರಾಭಿಷೇಕ, ತುಳಸಿ ಆರ್ಚನೆ, ಸತ್ಯನಾರಾಯಣ ವೃತ, ಮಹಾವಿಷ್ಣುಯಾಗ, ದತ್ತ ಮೂಲ ಮಂತ್ರದಿಂದ ದತ್ತಾತ್ರೇಯ ಹೋಮ, ಸಪ್ತಶತಿ ಪಾರಾಯಣ, ನವಚಂಡಿಹೋಮ ಮೃತ್ಯುಂಜೇಶ್ವರ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಅಖಂಡ ವೀಣಾಮಂಗಳ, ಮಹಾರಥೋತ್ಸವದ ರಥಾಂಗ ಹೋಮ, ಆರತಿ, ನೈವೇದ್ಯ, ಅನ್ನಸಂತರ್ಪಣೆ ಮತ್ತು ಸಿಡಿಮದ್ದಿನ ಚಿತ್ತಾರ ಸಂಭ್ರಮದಿಂದ ಜರುಗಿತು. ಶುಕ್ರವಾರ ಬುತ್ತಿಪೂಜೆ ಆಚರಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.