ADVERTISEMENT

ಕೋಮು ಪ್ರಚೋದನೆಗೆ ಬುನಾದಿ ಹಾಕಿದ್ದೇ ಸಿದ್ದರಾಮಯ್ಯ: ಸಚಿವೆ ಶೋಭಾ 

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 6:30 IST
Last Updated 22 ಫೆಬ್ರುವರಿ 2023, 6:30 IST
ಸಿದ್ದರಾಮಯ್ಯ ಮತ್ತು ಶೋಭಾ ಕರಂದ್ಲಾಜೆ
ಸಿದ್ದರಾಮಯ್ಯ ಮತ್ತು ಶೋಭಾ ಕರಂದ್ಲಾಜೆ    

ಕೊಪ್ಪಳ: ಮುಖ್ಯಮಂತ್ರಿ ಆದ ಬಳಿಕ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡುವ ಮೂಲಕ‌ ರಾಜ್ಯದಲ್ಲಿ ಕೋಮುಗಲಭೆ ಪ್ರಚೋದನೆಗೆ ಬುನಾದಿ ಹಾಕಿದರು. ಮುಸ್ಲಿಂ ‌ಸಮುದಾಯದಲ್ಲಿ ವ್ಯಕ್ತಿ ಪೂಜೆ ಇಲ್ಲದಿದ್ದರೂ ಮತ ಬ್ಯಾಂಕ್ ರಾಜಕಾರಣಕ್ಕೆ ಟಿಪ್ಪು ಜಯಂತಿ ಆಚರಿಸಿದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಯಾವ ಮುಸ್ಲಿಮರೂ ಟಿಪ್ಪು ಜಯಂತಿ ಮಾಡುವಂತೆ ಕೇಳಿರಲಿಲ್ಲ. ಆದರೂ ಜಯಂತಿ ಮಾಡಿದರು. ವೀರಶೈವ ಲಿಂಗಾಯತರನ್ನು ಒಡೆಯಲು ಯತ್ನಿಸಿದರು. ಶಾಲಾ ಮಕ್ಕಳಲ್ಲಿ ಜಾತಿಯ ವಿಷಬೀಜ ಬಿತ್ತಿದರು. ಒಂದು ವರ್ಗಕ್ಕೆ ಮಾತ್ರ ಶಾದಿ ಭಾಗ್ಯ ಕೊಟ್ಟಿದ್ದು ಯಾಕೆ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಸಮುದಾಯದವರಲ್ಲಿ ಬಡ ಜನರು ಇಲ್ಲವಾ ? ಅವರಿಗೇಕೆ ಭಾಗ್ಯಗಳನ್ನು ನೀಡಲಿಲ್ಲ. ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿದ್ದ ಪಿಎಫ್ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿಸಿದರು. ಮತಕ್ಕಾಗಿ ಓಲೈಕೆ ರಾಜಕಾರಣ ಮಾಡಿದರು ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು‌.

ADVERTISEMENT

ಎಲ್ಲ ಪಕ್ಷಗಳಿಗೆ ಅವರದ್ದೇ ಆದ ತತ್ವ ಹಾಗೂ ಸಿದ್ಧಾಂತಗಳಿವೆ. ಅದಕ್ಕೆ ತಕ್ಕಂತೆ ಮಾತನಾಡಬೇಕು. ಯಾರೇ ಆಗಲಿ ಕೊಲ್ಲುವ ಬಗ್ಗೆ ಮಾತಾಡಬಾರದು. ಅದನ್ನು ಒಪ್ಪುವುದಿಲ್ಲ. ಆಶ್ವತ್ಥ ನಾರಾಯಣ ಅವರು ಸಿದ್ದರಾಮಯ್ಯ ಅವರನ್ನು ಟಿಪ್ಪು ಕೊಂದಂತೆಯೇ ಕೊಲೆ‌ಮಾಡಬೇಕು ಎಂದು ನೀಡಿದ ಹೇಳಿಕೆ ಸರಿಯಲ್ಲ. ಇದು ನಮ್ಮಪಕ್ಷದ ಸಿದ್ದಾಂತ ಅಲ್ಲ. ಆಶ್ವತ್ಥನಾರಾಯಣ ಹೇಳಿಕೆ ತಪ್ಪು ಎಂದರು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಸರಿಡುವ ವಿಷಯ ವಿನಾಕಾರಣ ವಿವಾದ ಆಗಬಾರದು. ಅಭಿವೃದ್ಧಿ ಬಗ್ಗೆ ಚರ್ಚಿಸೋಣ. ಈ ಕುರಿತು ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು‌.

ಡಬಲ್ ಎಂಜಿನ್ ಸರ್ಕಾರದ ಗುರಿಯೇ ದೇಶದ ಅಭಿವೃದ್ಧಿ . ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ರಾಜ್ಯದ ವಿಧಾನಸಭಾ ಚುನಾವಣೆ ಎದುರಿಸಲಾಗುವುದು ಎಂದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.