ADVERTISEMENT

ಕೊಪ್ಪಳ | ಹೊಸಬರಿಗೆ ಮಣೆ ಹಾಕಲಿದೆಯೇ ಬಿಜೆಪಿ?

ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಅಂತಿಮವಾಗದ ಅಭ್ಯರ್ಥಿಗಳು, ಟಿಕೆಟ್‌ ಗಿಟ್ಟಿಸಲು ತೆರೆಮರೆಯ ಪ್ರಯತ್ನ ಜೋರು

ಪ್ರಮೋದ
Published 31 ಮಾರ್ಚ್ 2023, 7:18 IST
Last Updated 31 ಮಾರ್ಚ್ 2023, 7:18 IST
   

ಕೊಪ್ಪಳ: ಚುನಾವಣಾ ಆಯೋಗ ಮತದಾನದ ದಿನಾಂಕ ಘೋಷಿಸುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಒಟ್ಟು ಐದು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಿಗೆ ಕಾಂಗ್ರೆಸ್‌ ಈಗಾಗಲೇ ಟಿಕೆಟ್‌ ಘೋಷಿಸಿದ್ದು, ಯಾವ ಕ್ಷೇತ್ರಗಳಿಗೂ ಬಿಜೆಪಿ ಟಿಕೆಟ್‌ ಪ್ರಕಟವಾಗಿಲ್ಲ.

ಹಾಲಿ ಶಾಸಕರು, ಸಚಿವರು ಹಾಗೂ ಆಕಾಂಕ್ಷಿಗಳು ’ಟಿಕೆಟ್ ನನಗೆ ಸಿಗುವುದು ನಿಶ್ಚಿತ’ ಎಂದು ಹೇಳುತ್ತಿದ್ದಾರೆಯಾದರೂ ಅವರ ಜೊತೆಯಲ್ಲಿಯೇ ಅನೇಕರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ಈ ಬಾರಿ ಬಿಜೆಪಿ ಹೊಸಬರಿಗೆ ಮಣೆ ಹಾಕುತ್ತದೆಯೋ? ಹಳಬರಿಗೆ ಟಿಕೆಟ್‌ ಕೊಡುತ್ತದೆಯೋ? ಎನ್ನುವ ಚರ್ಚೆ ನಡೆಯುತ್ತಿದೆ.

2013ರಿಂದ ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಾಘವೇಂದ್ರ ಹಿಟ್ನಾಳ ಶಾಸಕರಾಗಿದ್ದಾರೆ. ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಈಗಾಗಲೇ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. 2018ರ ಚುನಾವಣೆಯಲ್ಲಿ ಚಂದ್ರಶೇಖರ್‌ ಅವರಿಗೆ ಟಿಕೆಟ್‌ ಘೋಷಿಸಿ ಅಂತಿಮವಾಗಿ ಸಂಸದ ಸಂಗಣ್ಣ ಕರಡಿ ಪುತ್ರ ಅಮರೇಶ ಕರಡಿಗೆ ಬಿ ಫಾರ್ಮ್‌ ನೀಡಲಾಗಿತ್ತು. ಈ ಬಾರಿ ಸಂಗಣ್ಣ ಕರಡಿಯವರೇ ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆಯಿದೆ. ಈ ಎಲ್ಲಾ ಲೆಕ್ಕಾಚಾರಗಳನ್ನೆಲ್ಲ ಮೀರಿ ಹೊಸ ಮುಖಗಳಿಗೆ ಮಣೆ ಹಾಕಿ ಅಚ್ಚರಿ ಮೂಡಿಸುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.

ADVERTISEMENT

ಗಂಗಾವತಿ ಕ್ಷೇತ್ರದಲ್ಲಿ ಪ್ರಸ್ತುತ ಬಿಜೆಪಿಯ ಪರಣ್ಣ ಮುನವಳ್ಳಿ ಶಾಸಕರಿದ್ದಾರೆ. ಈ ಕ್ಷೇತ್ರಕ್ಕೆ ಯಾರೇ ಅಭ್ಯರ್ಥಿಯಾದರೂ ಬಿಜೆಪಿ, ಕಾಂಗ್ರೆಸ್‌ ಮತ್ತು ಕಲ್ಯಾಣ ಕರ್ನಾಟಕ ಜನತಾ ಪಕ್ಷದಿಂದ ಸ್ಪರ್ಧೆ ಮಾಡುವುದಾಗಿ ಹೇಳಿರುವ ಜನಾರ್ದನ ರೆಡ್ಡಿ ನಡುವೆ ಸ್ಪರ್ಧೆ ಏರ್ಪಡುವುದು ನಿಶ್ಚಿತ. ಪರಣ್ಣ 2008 ಮತ್ತು 2018ರ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದು ’ನನ್ನ ಅಧಿಕಾರವಧಿಯಲ್ಲಿ ಮಾಡಿರುವ ಕೆಲಸಗಳನ್ನು ಪಕ್ಷ ಮೆಚ್ಚಿಕೊಂಡಿದೆ. ನನಗೇ ಟಿಕೆಟ್‌ ನಿಶ್ಚಿತ’ ಎನ್ನುತ್ತಿದ್ದಾರೆ. ಶಿಕ್ಷಣ ಕೇಂದ್ರಗಳ ಮೂಲಕ ಹೆಸರು ಮಾಡಿರುವ ನೆಕ್ಕಂಟಿ ಸೂರಿಬಾಬು ಆಕಾಂಕ್ಷಿಯಾಗಿದ್ದಾರೆ. ಇಷ್ಟು ದಿನ ಎಚ್‌.ಆರ್‌. ಚನ್ನಕೇಶವ ಹೆಸರು ಚಾಲ್ತಿಯಲ್ಲಿತ್ತು. ಆದರೆ, ಅವರು ಗುರುವಾರ ಬಿಜೆಪಿ ಬಿಟ್ಟು ಜೆಡಿಎಸ್‌ ಸೇರ್ಪಡೆಯಾದರು.

ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಎಚ್‌. ಪಾಟೀಲ ಆಕಾಂಕ್ಷಿಯಾಗಿದ್ದು, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಹಳ್ಳೂರ ಕೂಡ ಮುಖ್ಯಮಂತ್ರಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಬಿ.ಎಲ್‌. ಸಂತೋಷ ಹೀಗೆ ಪ್ರಮುಖರನ್ನು ಭೇಟಿಯಾಗಿ ಟಿಕೆಟ್ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ.

ಯಲಬುರ್ಗಾ ಕ್ಷೇತ್ರದಲ್ಲಿ ಹಾಲಪ್ಪ ಆಚಾರ್‌ 1999ರಲ್ಲಿ ಜೆಡಿಯುನಿಂದ ಮತ್ತು 2013ರಲ್ಲಿ ಬಿಜೆಪಿಯಿಂದ ಸೋತಿದ್ದರು. ಮೂರನೇ ಅವಕಾಶದಲ್ಲಿ ಗೆಲುವು ಪಡೆದು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಹೀಗಾಗಿ ಪಕ್ಷ ಮತ್ತೊಂದು ಬಾರಿ ಟಿಕೆಟ್‌ ನೀಡಲಿದೆ ಎನ್ನುವ ವಿಶ್ವಾಸ ಹೊಂದಿದ್ದಾರೆ. ಮಾಜಿ ಶಾಸಕ ಈಶಣ್ಣ ಗುಳಗಣ್ಣನವರ ಅವರ ಪುತ್ರ ನವೀನ್ ಗುಳಗಣ್ಣನವರ ಮತ್ತು ಕೃಷಿ ಇಲಾಖೆಯ ಮಾಜಿ ಅಧಿಕಾರಿ ಶರಣಪ್ಪ ಗುಂಗಾಡಿ ಆಕಾಂಕ್ಷಿಗಳಾಗಿದ್ದಾರೆ.

ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಕನಕಗಿರಿಯಲ್ಲಿ ಬಿಜೆಪಿಯ ಬಸವರಾಜ ದಢೇಸೂಗೂರು ಹಾಲಿ ಶಾಸಕರಿದ್ದು, ಮತ್ತೊಮ್ಮೆ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಅವರ ಜೊತೆಗೆ ಗಾಯಿತ್ರಿ ತಿಮ್ಮಾರೆಡ್ಡಿ, ಈಶಪ್ಪ ಹಿರೇಮನಿ, ಲಂಕೇಶ ಗುಳದಾಳ, ಪಿ.ವಿ.ರಾಜಗೋಪಾಲ, ಡಿ.ಎಂ. ಧರ್ಮಣ್ಣ, ಮಿಥಲೇಶ್ವರ, ಪುಷ್ಪಾಂಜಲಿ ಗುನ್ನಾಳ ಟಿಕೆಟ್‌ ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದಾರೆ.

ಪ್ರಮುಖರ ಮಹತ್ವದ ಸಭೆ ಇಂದು

ಜಿಲ್ಲೆಯ ಐದೂ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಪಕ್ಷದ ಪ್ರಮುಖರ ಅಭಿಪ್ರಾಯ ಸಂಗ್ರಹಿಸಲು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಕೊಪ್ಪಳದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸಭೆ ನಿಗದಿಯಾಗಿದೆ.

ಕೇಂದ್ರ ಸಚಿವ ಭಗವಂತ್‌ ಖುಬಾ, ಪಕ್ಷದ ಮುಖಂಡ ಅಮರನಾಥ ಪಾಟೀಲ್‌ ಸೇರಿದಂತೆ ಹಲವು ಪ್ರಮುಖ ನಾಯಕರು ಬರಲಿದ್ದಾರೆ.

ವಿವಿಧ ಪ್ರಕೋಷ್ಠಗಳ ಮುಖ್ಯಸ್ಥರು, ಆಕಾಂಕ್ಷಿಗಳು, ಪೇಜ್‌ ಪ್ರಮುಖರು, ಶಕ್ತಿಕೇಂದ್ರದ ಪ್ರಮುಖರು, ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಜಿಲ್ಲೆಯ ಪದಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು, ಹಾಲಿ ಶಾಸಕರು ಹಾಗೂ ಮಾಜಿ ಶಾಸಕರು ಸಭೆಯಲ್ಲಿ ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.