ADVERTISEMENT

ಕೊಪ್ಪಳ | ಮಾಜಿ ನೌಕರನ ಬಳಿ 24 ಮನೆ!: ನಿಬ್ಬೆರಗಾದ ಲೋಕಾಯುಕ್ತ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 14:11 IST
Last Updated 31 ಜುಲೈ 2025, 14:11 IST
<div class="paragraphs"><p>ಕಳಕಪ್ಪ ನಿಡಗುಂದಿ</p></div>

ಕಳಕಪ್ಪ ನಿಡಗುಂದಿ

   

ಕೊಪ್ಪಳ: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ (ಕೆಆರ್‌ಐಡಿಎಲ್‌) ಹೊರಗುತ್ತಿಗೆ ಆಧಾರದ ಮೇಲೆ ಕಚೇರಿ ಸಹಾಯಕರಾಗಿ ಕೆಲಸ ಮಾಡಿ ಆರು ತಿಂಗಳ ಹಿಂದೆ ವಜಾಗೊಂಡಿದ್ದ ಕಳಕಪ್ಪ ನಿಡಗುಂದಿ ಎಂಬುವರ ಮನೆ, ಕಚೇರಿ ಮೇಲೆ ಗುರುವಾರ ಇಲ್ಲಿನ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು 24 ಮನೆ ಮತ್ತು ನಾಲ್ಕು ನಿವೇಶನಗಳ ದಾಖಲೆಗಳು ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ.

ಕೊಪ್ಪಳ ಲೋಕಾಯುಕ್ತ ಡಿವೈಎಸ್‌ಪಿ ವಸಂತಕುಮಾರ್‌ ನೇತೃತ್ವದಲ್ಲಿ ಪೊಲೀಸ್‌ ಇನ್‌ಸ್ಟೆಕ್ಟರ್‌ ಸುನೀಲ್ ಮ್ಯಾಗಿನಮನಿ, ಚಂದ್ರಪ್ಪ, ವಿಜಯಕುಮಾರ, ನಾಗರತ್ನ, ಶೈಲಾ ಪಾಟೇಕರ್ ಮತ್ತು ಸಿಬ್ಬಂದಿ ಬೆಳಗಿನ ಜಾವದಿಂದಲೇ ದಾಖಲೆಗಳ ಪರಿಶೀಲಿಸಿದಾಗ ಮನೆ, ನಿವೇಶನಗಳ ಜೊತೆ 40 ಎಕರೆ ಕೃಷಿ ಜಮೀನು, 350 ಗ್ರಾಂ ಚಿನ್ನಾಭರಣ, ಒಂದೂವರೆ ಕೆ.ಜಿ. ಬೆಳ್ಳಿಯ ಆಭರಣಗಳು, ಎರಡು ಬೈಕ್‌ ಮತ್ತು ಎರಡು ಕಾರುಗಳ ದಾಖಲೆಗಳು ಲಭಿಸಿವೆ.

ADVERTISEMENT

ಆಭರಣಗಳು

ಚಿಂಚೋಳಿಕರ್ ಆಪ್ತ: ಇಲ್ಲಿ ಕೆಆರ್‌ಐಡಿಎಲ್‌ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದ ಝರಣಪ್ಪ ಎಂ. ಚಿಂಚೋಳಿಕರ್ ಅವರ ಆಪ್ತ ಕಳಕಪ್ಪ 2023-24 ಹಾಗೂ 2024–25ರಲ್ಲಿ ಜಿಲ್ಲೆಯಲ್ಲಿ ಮೂಲ ಸೌಕರ್ಯ ಕಲ್ಪಿಸುವ 108 ಕಾಮಗಾರಿಗಳಲ್ಲಿ ಕ್ರಿಯಾ ಯೋಜನೆ ರೂಪಿಸದೇ ಅನುಷ್ಠಾನ ಮಾಡಿದ್ದರು. ಇನ್ನೂ ಕೆಲ ಕೆಲಸಗಳನ್ನು ಮಾಡದೆ ನಕಲಿ ಬಿಲ್‌ ಸೃಷ್ಟಿಸಿ ಜಿಲ್ಲಾ ಪಂಚಾಯಿತಿ ಸಿಇಒ ಅವರ ಸಹಿಯನ್ನೇ ನಕಲಿ ಮಾಡಿ ₹72 ಕೋಟಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದರು.

ಇಲಾಖೆಯ ಅನುಮತಿ ಪಡೆಯದೆ ಕೋಟ್ಯಂತರ ರೂಪಾಯಿ ಮೊತ್ತವನ್ನು ಹಣ ಪಡೆದುಕೊಂಡಿದ್ದ ಬಗ್ಗೆ ಕೊಪ್ಪಳ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳೆದ ವರ್ಷ ಚಿಂಚೋಳಕರ್‌ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.

ಈ ಪ್ರಕರಣದ ಎರಡನೆ ಆರೋಪಿ ಕಳಕಪ್ಪ ಮನೆ ಶೋಧಿಸಿದಾಗ ಅವರ ಪತ್ನಿ ಹೆಸರಿನಲ್ಲಿ ಆರು ಮನೆ, ಎರಡು ನಿವೇಶನ ಲಭಿಸಿವೆ. ಬೇನಾಮಿಯಾಗಿ ಹೆಂಡತಿಯ ತಮ್ಮ ಹಾಗೂ ಇತರರ ಹೆಸರಿನಲ್ಲಿ ಆಸ್ತಿ ನೋಂದಾಯಿಸಿದ್ದಾರೆ. ಚಿಂಚೋಳಿಕರ್‌ ಅವಧಿಯಲ್ಲಿ ಹಿಂದೆ ನಡೆದ ಆರೋಪವಿರುವ 108 ಕಾಮಗಾರಿಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಮನೆ

ವಜಾ ಗೊಂಡಾಗ ₹15 ಸಾವಿರ ವೇತನ

ಭ್ರಷ್ಟಾಚಾರದ ಆರೋಪದ ಕಾರಣಕ್ಕೆ ಹೊರಗುತ್ತಿಗೆ ಕೆಲಸದಿಂದ ಕಳಕಪ್ಪ ವಜಾಗೊಂಡಾಗ ವೇತನ ₹15 ಸಾವಿರ ಮಾತ್ರ ಇತ್ತು.   

ಯಲಬುರ್ಗಾ ತಾಲ್ಲೂಕಿನ ಬಂಡಿಹಾಳದ ಕಳಕಪ್ಪ 20 ವರ್ಷಗಳಿಂದ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡಿದ್ದರು. ಈಗ ಅವರ ಬಳಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು ಲೋಕಾಯುಕ್ತ ಅಧಿಕಾರಿಗಳಲ್ಲಿಯೇ ಅಚ್ಚರಿ ಮೂಡಿಸಿದ್ದು, ಶುಕ್ರವಾರವೂ ಶೋಧ ಕಾರ್ಯ ಮುಂದುವರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.