ಕನಕಗಿರಿ: ‘ಮಾತೃಭಾಷೆ ನೀಡಿದಷ್ಟು ಖುಷಿ ಬೇರೆ ಯಾವ ಭಾಷೆ ಕೊಡುವುದಿಲ್ಲ. ಕನ್ನಡಿಗರು ಪರ ಭಾಷೆಯ ವ್ಯಾಮೋಹಕ್ಕೆ ಒಳಗಾಗದೆ ಅನ್ಯ ಭಾಷಿಕರಿಗೆ ಕನ್ನಡ ಭಾಷೆಯನ್ನು ಕಲಿಸಲು ಮುಂದಾಗಬೇಕು’ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಗುರುವಾರ ಆಯೋಜಿಸಿದ್ದ ಶಾಲಾ ಕಾಲೇಜಿಗೊಂದು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ತಾಯಿ ಭಾಷೆಯ ಪ್ರೇಮ ಬಣ್ಣಿಸಲು ಅಸಾಧ್ಯ. ಕನ್ನಡದ ನೆಲ, ಜಲ, ಭಾಷೆಯ ರಕ್ಷಣೆಗೆ ಯುವ ಸಮುದಾಯ ಕಂಕಣ ಬದ್ದರಾಗಿ ದುಡಿಯಬೇಕು. ವಿದ್ಯಾರ್ಥಿಗಳು ಗುರಿ ಸಾಧನೆಗಾಗಿ ಸತತ ಅಧ್ಯಯನ, ಕಠಿಣ ಶ್ರಮ ವಹಿಸಬೇಕು’ ಎಂದು ಸಲಹೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಡಾ. ದೊಡ್ಡಯ್ಯಸ್ವಾಮಿ ಅರವಟಗಿಮಠ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿ ಮಧ್ಯೆ ಅವಿನಾಭವ ಸಂಬಂಧ ಇದೆ. ಸರ್ಕಾರಗಳು ಆಯಾ ಪ್ರಾದೇಶಿಕ ಭಾಷೆಯ ಉಳಿವಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಮಾಜಿ ನಿರ್ದೇಶಕ ವಾಗೀಶ ಹಿರೇಮಠ, ಉಪ ಪ್ರಾಂಶುಪಾಲ ಜಗದೀಶ ಹಾದಿಮನಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮೆಹಬೂಬ ಹುಸೇನ ಮಾತನಾಡಿದರು.
ಕಲಾವಿದ ಮೆಹಬೂಬ ಕಿಲ್ಲೇದಾರ ಅವರು ಜನಪದ ಗೀತೆ ಹಾಡಿ ರಂಜಿಸಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿರುಮಲಮ್ಮ, ಸದಸ್ಯರಾದ ಹುಲಗಪ್ಪ ವಾಲೇಕಾರ, ಶರಣಬಸಪ್ಪ ಭತ್ತದ, ಮಂಜುನಾಥ ಗಡಾದ, ಖಾಜಸಾಬ ಗುರಿಕಾರ, ಪಾಷ ಮುಲ್ಲಾರ, ಮುಖ್ಯಶಿಕ್ಷಕ ಈಶಪ್ಪ ಇಟಗಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ಸಮಗಂಡಿ, ಕಸಾಪ ಮಾಧ್ಯಮ ಸಮಿತಿ ಸದಸ್ಯ ಪ್ರವೀಣಕುಮಾರ ಕೋರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಬಸಂತಗೌಡ, ಪ್ರಮುಖರಾದ ಸಿದ್ದಪ್ಪ ನೀರ್ಲೂಟಿ, ಡಾ. ದೇವರಾಜ, ನಿಜಗುಣ ಗಡ್ಡಿ, ಮಂಜುನಾಥ, ಕಸಾಪ ಕೋಶಾಧ್ಯಕ್ಷ ತಿಪ್ಪಣ್ಣ ಮಡಿವಾಳರ, ನವಲಿ ಘಟಕದ ಅಧ್ಯಕ್ಷ ವಿರುಪಣ್ಣ ಕಲ್ಲೂರು, ಕನಕರಡ್ಡಿ, ಕಾಂತಮ್ಮ ಇದ್ದರು.
ಕರ ವಸೂಲಿಗಾರ ಕನಕಪ್ಪ ನಾಯಕ, ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅಂಬಿಕಾ, ರಕ್ಷಿತಾ, ವಿಜಯಲಕ್ಷ್ಮಿ ಹಾಗೂ ಮಾರ್ಗದರ್ಶಕರಾದ ಶ್ರೀಧರ ನೆಕ್ಕಂಟಿ, ಶಿವರಡ್ಡಿ ಮಣ್ಣೂರು ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.