ADVERTISEMENT

ಅಳವಂಡಿ: ವರ್ಷ ಕಳೆಯುವುದರಲ್ಲಿಯೇ ರಸ್ತೆ ಹಾಳು

ಲೋಕೋಪಯೋಗಿ ಇಲಾಖೆಯ ನಿರ್ಮಾಣ ಮಾಡಿದ 3 ಕಿ.ಮೀ ರಸ್ತೆ ಸಂಪೂರ್ಣ ಹಾಳು

ಜುನಸಾಬ ವಡ್ಡಟ್ಟಿ
Published 10 ಸೆಪ್ಟೆಂಬರ್ 2025, 6:22 IST
Last Updated 10 ಸೆಪ್ಟೆಂಬರ್ 2025, 6:22 IST
ಅಳವಂಡಿ ಸಮೀಪದ ಕವಲೂರು ಗ್ರಾಮದಿಂದ ಮುರ್ಲಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದೆ
ಅಳವಂಡಿ ಸಮೀಪದ ಕವಲೂರು ಗ್ರಾಮದಿಂದ ಮುರ್ಲಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದೆ   

ಅಳವಂಡಿ: ಕೊಪ್ಪಳ ತಾಲ್ಲೂಕಿನ ಕವಲೂರು ಗ್ರಾಮದಿಂದ ಮುರ್ಲಾಪುರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ವರ್ಷ ಕಳೆಯುವುದರಲ್ಲಿ ಎಲ್ಲೆಂದರಲ್ಲಿ ಅಲ್ಲಿ ಕಿತ್ತು ಹೋಗುತ್ತಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಕೊಪ್ಪಳ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಎಂಟು ತಿಂಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ಕವಲೂರುದಿಂದ ಮುರ್ಲಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 3 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗುತ್ತಿದೆ. ಗ್ರಾಮೀಣ ಪ್ರದೇಶದ ರಸ್ತೆ ಸುಧಾರಣೆಗೆ ಸರ್ಕಾರ ಕೋಟಿಗಟ್ಟಲೆ ಅನುದಾನ ನೀಡಿದರೂ, ಗುತ್ತಿಗೆದಾರರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿಗಳು ಸಮರ್ಪಕವಾಗಿ ಅನುಷ್ಠಾನ ಗೊಳ್ಳುತ್ತಿಲ್ಲ. ಡಾಂಬರೀಕರಣ ಕಾಮಗಾರಿ ಮುಗಿದ ಕೆಲವೇ ತಿಂಗಳಲ್ಲಿ ರಸ್ತೆಗಳು ಕಿತ್ತು ಹೋಗುತ್ತಿರುವುದು ಗುಣಮಟ್ಟದ ಕುರಿತು ಅನುಮಾನ ಮೂಡುವಂತೆ ಮಾಡಿದೆ.

ಕವಲೂರು ಗ್ರಾಮಸ್ಥರು ಹಾಗೂ ವಿವಿಧ ಸಂಘಗಳು ರಸ್ತೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಮಾಡಿದ್ದರು. ಇದನ್ನು ಮನಗಂಡ ಶಾಸಕರು ಹಾಗೂ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದರು. ಇದನ್ನು ಕಂಡು ಸಾರ್ವಜನಿಕರು ಹರ್ಷವನ್ನು ವ್ಯಕ್ತಪಡಿಸಿದ್ದರು. ಆದರೆ ಇದೀಗ ಕವಲೂರು–ಮುರ್ಲಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಡಾಂಬರೀಕರಣ ಮಾಡಿದ ರಸ್ತೆಯ ಬಹುತೇಕ ಕಡೆಯಲ್ಲಿ ಡಾಂಬರು ಕಿತ್ತು ಬರುತ್ತಿದ್ದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.

ADVERTISEMENT

ಕೋಟಿಗಟ್ಟಲೆ ಅನುದಾನದಲ್ಲಿ ಗುಣಮಟ್ಟದ ಕೆಲಸ ಮಾಡಿದರೆ ವರ್ಷಗಳ ಕಾಲ ರಸ್ತೆ ಗಟ್ಟಿಮುಟ್ಟಾಗಿರಬೇಕು. ಆದರೆ ವರ್ಷ ಕಳೆಯುವುದರೊಳಗೆ ಅವಧಿಯಲ್ಲಿ ಹಾಳಾಗುತ್ತಿರುವುದು ಜನರು ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಮೇಲಧಿಕಾರಿಗಳು, ಶಾಸಕರು, ಸಚಿವರು ಗಮನಹರಿಸಿ ಗುತ್ತಿಗೆದಾರರ ಮತ್ತು ಲೋಕೋಪಯೋಗಿ ಇಲಾಖೆಯ ಎಇಇ, ಜೆಇ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಕಳಪೆ ಕಾಮಗಾರಿ ಸರಿಪಡಿಸಿ ಮರು ಡಾಂಬರೀಕರಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಡಾಂಬರ್ ಕಿತ್ತು ಹೋಗಿರುವುದು

ಕರೆ ಸ್ವೀಕರಿಸಿದ ಎಇಇ

ರಸ್ತೆಯ ಕಳಪೆ ಕಾಮಗಾರಿಯ ಕುರಿತು ಮಾಹಿತಿ ಪಡೆಯಲು ಕೊಪ್ಪಳ ಲೋಕೋಪಯೋಗಿ ಇಲಾಖೆ ಎಇಇ ವೆಂಕಟೇಶ ಅವರಿಗೆ ಹಲವಾರು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ರಸ್ತೆ ಕಾಮಗಾರಿ ಪೂರ್ಣಗೊಂಡ ಕೆಲವೇ ತಿಂಗಳಲ್ಲಿ ಡಾಂಬರು ಕಿತ್ತು ಹೋಗುತ್ತಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ. ಗುತ್ತಿಗೆದಾರರ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾಮಗಾರಿ ಮಾಡುವ ವಿಚಾರದಲ್ಲಿ ತೋರಿದ ನಿರ್ಲಕ್ಷ್ಯದಿಂದ ಸರ್ಕಾರದ ಅನುದಾನ ಪೋಲಾದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.