ADVERTISEMENT

ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚನೆ

ತಾ.ಪಂ ಪ್ರಗತಿ ಪರಿಶೀಲನಾ ಸಭೆ: ಗೈರು ಹಾಜರಿಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 3:25 IST
Last Updated 22 ಜುಲೈ 2021, 3:25 IST
ಕಾರಟಗಿಯ ವಿಶೇಷ ಎಪಿಎಂಸಿ ಸಭಾಂಗಣದಲ್ಲಿ ಕಾರಟಗಿ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ ನಡೆಯಿತು
ಕಾರಟಗಿಯ ವಿಶೇಷ ಎಪಿಎಂಸಿ ಸಭಾಂಗಣದಲ್ಲಿ ಕಾರಟಗಿ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ ನಡೆಯಿತು   

ಕಾರಟಗಿ: ವಿವಿಧ ಇಲಾಖೆಗಳ ಅಧಿಕಾರಿಗಳ ಗೈರು. ಭತ್ತದ ಬೆಳೆಗೆ ಕಣೆ ಹುಳು ಕಾಟ.....

ಪಟ್ಟಣದ ವಿಶೇಷ ಎಪಿಎಂಸಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಚರ್ಚೆಯಾದ ಮುಖ್ಯ ವಿಷಯಗಳಿವು.

ಕನಕಗಿರಿ ಹಾಗೂ ಕಾರಟಗಿಯ ಸಭೆಗೆ ಗೈರಾಗಿದ್ದ ಸಿಡಿಪಿಒ ಶ್ವೇತಾ ಅವರ ಕುರಿತು ಆಕ್ರೋಶ ವ್ಯಕ್ತವಾಯಿತು. ಅವರ ಪರವಾಗಿ ಆಗಮಿಸಿದ್ದ ಅವರ ಪ್ರತಿನಿಧಿಗೆ ಈ ಬಗ್ಗೆ ಖಾರವಾಗಿ ಪ್ರಶ್ನಿಸಲಾಯಿತು.

ADVERTISEMENT

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಯೂ ಆಗಿರುವ ಇಲ್ಲಿಯ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಅಮೀನಸಾಬ ಅವರು ಸಿಡಿಪಿಒ ಸಹಿತ ಅಧಿಕಾರಿಗ ಗೈರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಒಗೆ ಶಿಫಾರಸ್ಸು ಮಾಡುವಂತೆ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಭತ್ತದ ಬೆಳೆಗೆ ಕಾಣಿಸಿಕೊಂಡಿರುವ ಕಣೆ ಹುಳು ರೋಗದ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಕೃಷಿ ಇಲಾಖೆ ಅಧಿಕಾರಿಗಳು ರೈತರ ನೆರವಿಗೆ ಬರಬೇಕು ಎಂದು ಸೂಚಿಸಲಾಯಿತು.

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅಮೀನಸಾಬ, ರಾಜ್ಯ ಸರ್ಕಾರ ಕೃಷಿಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಬೀಜ, ಗೊಬ್ಬರ, ಕೃಷಿ ಯಂತ್ರಗಳ ಕುರಿತು ಮಾಹಿತಿ ನೀಡಿ ಯೋಜನೆಗಳ ಲಾಭ ಪಡೆದುಕೊಳ್ಳಲು ನೆರವಾಗಬೇಕು ಎಂದು ಹೇಳಿದರು.

ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳ ಕಟ್ಟಡ, ಆವರಣಗೋಡೆ, ಅಡುಗೆ ಕೋಣೆ, ಕೈ ತೋಟ, ಆಟದ ಮೈದಾನ ಅಭಿವೃದ್ಧಿ ಮಾಡಲು ನರೇಗಾ ಯೋಜನೆ ಹಾಗೂ ನಿರ್ಮಿತಿ ಕೇಂದ್ರದಲ್ಲಿ ಅನುದಾನ ಇದೆ. ಅದರ ಸದುಪಯೋಗಕ್ಕೆ ಮುಂದಾಗಬೇಕು ಎಂದು ಸೂಚಿಸಲಾಯಿತು.

ತಾಲ್ಲೂಕಿನಲ್ಲಿ ಪರಿಶಿಷ್ಟರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಸಮಾಜ ಕಲ್ಯಾಣಾಧಿಕಾರಿ ತುಗ್ಗಲೆಪ್ಪ ದೇಸಾಯಿ ಪ್ರತಿಕ್ರಿಯಿಸಿ,‘ ಗಂಭೀರ ಸಮಸ್ಯೆಗಳಿದ್ದರೆ ಸ್ಥಳಕ್ಕೆ ತೆರಳಿ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುತ್ತೇವೆ’ ಎಂದರು.

ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಬಿಸಿಎಂ ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಯಿತು. ಸ್ವಂತ ಕಟ್ಟಡ ನಿರ್ಮಾಣಕ್ಕೆ ಶಾಸಕರಿಂದ ಅನುದಾನ ಪಡೆಯಲು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ನಿರ್ದೇಶಕ ನರಸಪ್ಪ, ಯೋಜನಾಧಿಕಾರಿ ರಾಘವೇಂದ್ರ, ಅಧಿಕಾರಿಗಳಾದ ಹರ್ಷವರ್ಧನ್, ಹಿಮಾಲಯಪ್ಪ, ಡಾ. ಮಹೇಶ ಹಾಗೂ ಗಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.