
ಕೊಪ್ಪಳ: ತಾಲ್ಲೂಕಿನ ಕಿನ್ನಾಳ ಗ್ರಾಮ ಪಂಚಾಯಿತಿಯು 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.
ಸೋಮವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಇಲಾಖಾ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಿನ್ನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ರಾಘವೇಂದ್ರ ಡಂಬಳ ಮತ್ತು ಪಿಡಿಒ ಪರಮೇಶ್ವರಯ್ಯ ತೆಳಗಡೆಮಠ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಉತ್ತಮ ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರವನ್ನು ನೀಡಲಾಗುತ್ತದೆ. ಗ್ರಾ.ಪಂ. ಆಡಳಿತ, ಅಭಿವೃದ್ಧಿ ಕಾರ್ಯಗಳ ಅನುಷ್ಠಾನ, ಹಣಕಾಸಿನ ಸದ್ಬಳಕೆ, ಗ್ರಾಮ ನೈರ್ಮಲ್ಯ, ಗ್ರಾಮ ಸಭೆಗಳ ಅಭಿವೃದ್ದಿ ಯೋಜನೆ, ಜನರಿಗೆ ಯೋಜನೆಗಳನ್ನು ತಲುಪಿಸುವುದು, ಕುಡಿಯುವ ನೀರು ಸರಬರಾಜು, ಘನತ್ಯಾಜ್ಯ ವಿಲೇವಾರಿ, ನರೇಗಾ ಯೋಜನೆ, ಆರೋಗ್ಯ ಸೇವೆಗಳು, ಲಿಂಗಾನುಪಾತ, ಬಾಲ್ಯ ವಿವಾಹ ತಡೆ ಸೇರಿದಂತೆ ಹಲವು ಮಾನದಂಡಗಳನ್ನು ಪರಿಗಣಿಸಲಾಗುತ್ತದೆ. ಪ್ರಶಸ್ತಿಯು ಫಲಕ ಹಾಗೂ ₹5 ಲಕ್ಷ ಪುರಸ್ಕಾರ ಹೊಂದಿದೆ.
ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತೀಚೆಗೆ ಕಿನ್ನಾಳ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಇಲ್ಲಿನ ಕಾರ್ಯವೈಖರಿ ಪರಿಶೀಲಿಸಿದರು.
ಕಿನ್ನಾಳ ಗ್ರಾಮ ಪಂಚಾಯಿತಿಯಿಂದ ಗ್ರಾಮಕ್ಕೆ ಅನೇಕ ಮೂಲ ಸೌಲಭ್ಯ ಒದಗಿಸಿರುವದರಿಂದ ಗ್ರಾಮಸ್ಥರ ಜೀವನ ಸುಧಾರಣೆಯಾಗಿ ಮಾನವ ಅಭಿವೃದ್ದಿ ಸೂಚ್ಯಂಕ ಹೆಚ್ಚಳವಾಗಿದೆ.ದುಂಡಪ್ಪ ತುರಾದಿ ಕೊಪ್ಪಳ ತಾಲ್ಲೂಕು ಪಂಚಾಯಿತಿ ಇಒ
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮನ್ವಯದಿಂದ ಅನೇಕ ಅಭಿವೃದ್ದಿ ಕೆಲಸಗಳು ಆಗಿರುವದರಿಂದ ಪ್ರಶಸ್ತಿಗೆ ಶಿಫಾರಸು ಮಾಡಲಾಗಿತ್ತು. ಕಿನ್ನಾಳ ಗ್ರಾ.ಪಂ. ಮಾದರಿಯಾಗಿದೆ.ಟಿ.ಕೃಷ್ಣಮೂರ್ತಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.