
ಕೊಪ್ಪಳ ನಗರಸಭೆಯಲ್ಲಿ ಆಡಳಿತಾಧಿಕಾರಿಗಳ ನಾಮಫಲಕ ಹಾಕಿರುವುದು
ಕೊಪ್ಪಳ: ಆಡಳಿತಾವಧಿ ಪೂರ್ಣಗೊಂಡಿದೆ ಎನ್ನುವ ಕಾರಣ ನೀಡಿ ಕೊಪ್ಪಳ ಹಾಗೂ ಗಂಗಾವತಿ ನಗರಸಭೆಗೆ ಆಡಳಿತಾಧಿಕಾರಿಯನ್ನು ನೇಮಿಸಿ ಒಂದೆಡೆ ರಾಜ್ಯಪತ್ರ ಹೊರಡಿಸಲಾಗಿದ್ದು, ಇನ್ನೊಂದೆಡೆ ಆಡಳಿತಾಧಿಕಾರಿ ನೇಮಕಕ್ಕೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಇಲ್ಲಿನ ನಗರಸಭೆ ಅಧ್ಯಕ್ಷರು ಜಿಲ್ಲಾಧಿಕಾರಿಗೆ ಪತ್ರ ಕೊಟ್ಟಿದ್ದಾರೆ.
ಈ ಗೊಂದಲ ಉಂಟಾಗಿರುವ ಕಾರಣ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಸ್ಪಷ್ಟನೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಅಲ್ಲಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಶುಕ್ರವಾರ ಜಿಲ್ಲಾಧಿಕಾರಿಗೆ ಪತ್ರ ಸಲ್ಲಿಸಿದ್ದು ‘ನಗರಸಭೆಗೆ ಆಡಳಿತಾಧಿಕಾರಿ ನೇಮಕಕ್ಕೆ ತಡೆಯಾಜ್ಞೆ ನೀಡುವಂತೆ ದಾವೆ ಸಲ್ಲಿಸಲಾಗಿದ್ದು, ಅ. 28ರಂದು ನ್ಯಾಯಾಲಯ ತಡೆಯಾಜ್ಞೆ ನೀಡಿ ಇದನ್ನು ನ. 19ರ ತನಕ ಮುಂದುವರಿಸಿದೆ’ ಎಂದು ಹೇಳಿದ್ದಾರೆ. ಇಲ್ಲಿನ ಸ್ಥಳೀಯ ಸಂಸ್ಥೆಗೆ 2021ರ ಏಪ್ರಿಲ್ 27ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟಿಸಲಾಗಿತ್ತು.
ತೆರವು: ರಾಜ್ಯಪತ್ರ ಪ್ರಕಟವಾದ ಬೆನ್ನಲ್ಲೇ ಇಲ್ಲಿನ ನಗರಸಭೆಯಲ್ಲಿದ್ದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಇನ್ನಿತರ ಹೆಸರಿನಲ್ಲಿದ್ದ ಫಲಕಗಳನ್ನು ಮುಚ್ಚಲಾಗಿದೆ. ಅಧ್ಯಕ್ಷರ ಫಲಕದ ಜಾಗದಲ್ಲಿ ಆಡಳಿತಾಧಿಕಾರಿ ಎನ್ನುವ ಫಲಕ ಹಾಕಲಾಗಿತ್ತು.
ರಾಜ್ಯಪತ್ರದ ಪ್ರಕಾರ ಕೊಪ್ಪಳ ನಗರಸಭೆಗೆ ಅ. 30ರಿಂದ ಹಾಗೂ ಗಂಗಾವತಿಗೆ (ನ. 3ರಿಂದ ಪೂರ್ವಾನ್ವಯ), ಜಿಲ್ಲಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಕುಷ್ಟಗಿ (ಅ. 28) ಪುರಸಭೆಗೆ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರನ್ನು, ಯಲಬುರ್ಗಾ ಪಟ್ಟಣ ಪಂಚಾಯಿತಿಗೆ (ಅ. 24) ಅಲ್ಲಿನ ತಹಶೀಲ್ದಾರ್ ಆಡಳಿತಾಧಿಕಾರಿಯಾಗಿದ್ದಾರೆ. ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗೆ ಅಧಿಕಾರ ವಹಿಸಿಕೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಆಡಳಿತಾಧಿಕಾರಿ ನೇಮಿಸಿ ಸರ್ಕಾರದ ಆದೇಶ ಪ್ರಕಟವಾಗಿರುವ ಕಾರಣ ಅದರ ಅನ್ವಯ ನಗರಸಭೆಯಲ್ಲಿ ಫಲಕ ತೆರವು ಮಾಡಲಾಗಿದೆ. ಆಡಳಿತಾಧಿಕಾರಿ ಫಲಕ ಅಳವಡಿಸಲಾಗಿದೆ.–ವೆಂಕಟೇಶ ನಾಗನೂರು, ನಗರಸಭೆ ಪೌರಾಯುಕ್ತ, ಕೊಪ್ಪಳ
ಗಂಗಾವತಿ ಹಾಗೂ ಕೊಪ್ಪಳ ನಗರಸಭೆ ಸದಸ್ಯರ ಅವಧಿ ವಿಸ್ತರಣೆ ಕುರಿತು ನ್ಯಾಯಾಲಯದ ಮೊರೆ ಹೋಗಿರುವ ಮಾಹಿತಿ ಬಂದಿದೆ. ಸ್ಪಷ್ಟನೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ.–ಡಾ. ಸುರೇಶ ಇಟ್ನಾಳ, ಜಿಲ್ಲಾಧಿಕಾರಿ
ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಆಡಳಿತಾಧಿಕಾರಿಯನ್ನು ನೇಮಿಸಿ ರಾಜ್ಯಪತ್ರ ಹೊರಡಿಸಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ. ನ್ಯಾಯಾಲಯದಲ್ಲಿ ಪ್ರಶ್ನಿಸುವೆ.–ಅಮ್ಜದ್ ಪಟೇಲ್, ನಗರಸಭೆ ಅಧ್ಯಕ್ಷ, ಕೊಪ್ಪಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.