ADVERTISEMENT

ಕೊಪ್ಪಳ: ಅಂಗನವಾಡಿ ಕೇಂದ್ರ ಖಾಲಿ, ದಾಖಲೆಯಲ್ಲಿ ಹಾಜರು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ಲಕ್ಷ್ಯ

ನಾರಾಯಣರಾವ ಕುಲಕರ್ಣಿ
Published 30 ಆಗಸ್ಟ್ 2025, 6:51 IST
Last Updated 30 ಆಗಸ್ಟ್ 2025, 6:51 IST
ಕುಷ್ಟಗಿ ಡಂಬರ ಓಣಿಯಲ್ಲಿನ ಅಂಗನವಾಡಿ ಸುತ್ತ ಕೊಳಚೆ ಅವರಿಸಿರುವುದು
ಕುಷ್ಟಗಿ ಡಂಬರ ಓಣಿಯಲ್ಲಿನ ಅಂಗನವಾಡಿ ಸುತ್ತ ಕೊಳಚೆ ಅವರಿಸಿರುವುದು   

ಕುಷ್ಟಗಿ: ಪಟ್ಟಣದ ಡಂಬರ ಓಣಿಯಲ್ಲಿರುವ ಅಂಗನವಾಡಿ ಕೇಂದ್ರ–9ರಲ್ಲಿ ದಾಖಲೆಗಳಲ್ಲಿ ಪೂರ್ಣ ಹಾಜರಾತಿಯಿದೆ. ಆದರೆ ಕೇಂದ್ರ ಮಾತ್ರ ಖಾಲಿಖಾಲಿಯಾಗಿದೆ. ಜತೆಗೆ ಆಹಾರ ಸಾಮಗ್ರಿ, ಆಟಿಕೆ ಸಾಮಾನು, ವಿಟಮಿನ್‌ ಮಾತ್ರೆ, ಔಷಧ ಪೂರೈಕೆ ಪೂರ್ಣ ಪ್ರಮಾಣದಲ್ಲಿದೆ.

ಮಕ್ಕಳಿಗಾಗಿ ಸರ್ಕಾರ ಲಕ್ಷಾಂತರ ಹಣದಲ್ಲಿ ಮಿಟಮಿನ್‌, ಔಷಧ ಸಾಮಗ್ರಿಗಳು ವರ್ಷದಿಂದಲೂ ಕೊಳೆಯುತ್ತಿವೆ. ಮಕ್ಕಳಿಗಾಗಿ ಬಂದಿರುವ ಆಟಿಕೆಗಳ ಸಾಮಾನುಗಳ ಡಬ್ಬಗಳನ್ನು ಇಲಿಗಳು ಹಾಳು ಮಾಡಿವೆ. ಕೇಂದ್ರದ ಅಂಗಣ ಕೆಸರು ಮಯವಾಗಿದೆ.

ಬಹುತೇಕ ದಿನಗಳಲ್ಲಿ ಬಾಗಿಲನ್ನು ತೆರೆದ ಕೇಂದ್ರದ ದಾಖಲೆಗಳಲ್ಲಿ ಮಾತ್ರ ಎಲ್ಲ ಮಾಹಿತಿ ಅಪ್‌ಡೇಟ್‌ ಆಗಿರುತ್ತದೆ. ಪ್ರತಿ ತಿಂಗಳೂ ಪರಿಶೀಲನೆಗೆ ಬಂದು ಹೋಗುವ ಮೇಲ್ವಿಚಾರಕಿಯರು ಸಹಿ ಮಾಡಿ ಹೋಗಿದ್ದಾರೆ. ಸಮೀಪದಲ್ಲಿಯೇ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿದೆ. ಆದರೆ ಅಂಗನವಾಡಿ ಕೇಂದ್ರದಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸುವ ಗೋಜಿಗೆ ಹೋಗಿಲ್ಲ.

ADVERTISEMENT

ದಾಖಲಾತಿ ಪ್ರಕಾರ 20 ಮಕ್ಕಳಿವೆ. ವರ್ಷದುದ್ದಕ್ಕೂ ಮಕ್ಕಳ ಹಾಜರಾತಿ ಪರಿಶೀಲಿಸಿದರೆ, ಒಂದು ಮಗುವೂ ಗೈರಾಗಿಲ್ಲ. ಪ್ರತಿ ತಿಂಗಳೂ ಮಕ್ಕಳು ಮತ್ತು ಗರ್ಭಿಣಿಯರು, ಬಾಣಂತಿಯರ ಹಾಜರಿಗೆ ಅನುಗುಣವಾಗಿ ಅಕ್ಕಿ, ರವೆ, ಪೌಷ್ಠಿಕ ವಸ್ತುಗಳು, ಬೇಳೆ, ಎಣ್ಣೆ, ಬೆಲ್ಲ, ಹಾಲಿನಪುಡಿ, ಆಹಾರ ಸಾಮಗ್ರಿ, ಮೊಟ್ಟೆ, ಇತರೆ ಸಲಕರಣೆಗಳನ್ನು ಮಾತ್ರ ಕೇಂದ್ರಕ್ಕೆ ಅಚ್ಚುಕಟ್ಟಾಗಿ ಪೂರೈಕೆ ಮಾಡಲಾಗಿದೆ. ಮಕ್ಕಳೇ ಇಲ್ಲ. ಹಾಗಿದ್ದೂ ಇಲ್ಲಿಗೆ ಲಕ್ಷಾಂತರ ಹಣದ ಖರ್ಚಿನಲ್ಲಿ ಪೂರೈಕೆ ಆಗಿರುವ ಸಾಮಗ್ರಿಗಳು ಹೋಗುತ್ತಿರುವುದೆಲ್ಲಿಗೆ ಎಂಬುದನ್ನು ಅಧಿಕಾರಿಗಳು ಹೇಳಬೇಕು ಎಂದು ವಾರ್ಡ್‌ನ ನಿವಾಸಿಗಳು ಹೇಳಿದರು.

ಕೊಳೆಯುತ್ತಿವೆ ವಿಟಮಿನ್ ಸಾಮಗ್ರಿಗಳು: ಹಳೆಯ ಸ್ವಂತ ಕಟ್ಟಡ ಇದ್ದು, ಸುತ್ತಲೂ ಮಳೆ ನೀರು ಮಡುಗಟ್ಟಿ ಕೆಸರು ಸಂಗ್ರಹವಾಗಿದೆ. ವಾಹನಗಳು ಅಡ್ಡಲಾಗಿ ನಿಂತಿರುತ್ತವೆ. ಹಾಳಾಗಿರುವ ಶೌಚಾಲಯವಿದೆ. ಕೇಂದ್ರದ ಒಳಗೆ ಹೋದರೆ ದುರ್ನಾತ. ಹತ್ತು ಮಕ್ಕಳು ಕುಳಿತುಕೊಳ್ಳುವುದಕ್ಕೂ ಜಾಗವಿಲ್ಲ. ಸತ್ತ ಇಲಿಗಳ ವಾಸನೆ ವಾಕರಿಕೆ ಬರಿಸುತ್ತದೆ. 2024ರಲ್ಲಿ ಪೂರೈಕೆಯಾಗಿರುವ ಮಲ್ಟಿವಿಟಮಿನ್‌, ಜ್ವರ ಇತರೆ ಔಷಧಗಳು, ಮಕ್ಕಳ ಆಟಿಕೆಗಳ ಡಬ್ಬದ ಕಟ್ಟನ್ನೂ ಬಿಚ್ಚಿಲ್ಲ. ಮಕ್ಕಳಿಲ್ಲವೆಂದರೆ ಮೇಲೆ ಅವುಗಳ ಅಗತ್ಯವೆನಿದೆ. ಪಟ್ಟಣದಲ್ಲಿರುವ ಅಂಗನವಾಡಿಯ ಸ್ಥಿತಿಯೇ ಹೀಗಿದೆ. ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಿದು ಎಂದು ಜನರು ಆಕ್ರೋಶ ಹೊರಹಾಕಿದರು.

ತೆರೆಯದ ಬಾಕ್ಸ್‌ಗಳಲ್ಲಿ ಮಕ್ಕಳ ಆಟಿಕೆಗಳನ್ನು ಇಲಿಗಳು ಹಾಳು ಮಾಡಿರುವುದು
ಮೇಲ್ವಿಚಾರಕಿಯರು ಅಂಗನವಾಡಿ ಸಮಸ್ಯೆ ಬಗೆಹರಿಸಿದ್ದಾರೆ ಪರಿಸ್ಥಿತಿ ಸುಧಾರಿಸಿದೆ ಎಂಬ ಮಾಹಿತಿಯಿತ್ತು. ಈ ಸಂಬಂಧ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ.
–ಯಲ್ಲಮ್ಮ ಹಂಡಿ ಸಿಡಿಪಿಒ
ಮಕ್ಕಳಿಗೆ ನೀಡಬೇಕಿದ್ದ ವಿಟಮಿನ್‌ ಇತರೆ ಔಷಧ ಬಾಟಲಿಗಳು ವರ್ಷದಿಂದಲೂ ಬಾಕ್ಸ್‌ಗಳಲ್ಲೇ ಉಳಿದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.