
ಕೊಪ್ಪಳ ಸಮೀಪದ ಬೆಳವಿನಾಳದಲ್ಲಿರುವ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಮೊಬೈಲ್ ಬೆಳಕಿನಲ್ಲಿ ನಡೆದ ವಹಿವಾಟಿನ ಚಿತ್ರಣಪ್ರಜಾವಾಣಿ ಚಿತ್ರಗಳು/ಭರತ್ ಕಂದಕೂರ
ಕೊಪ್ಪಳ: ಪೂರ್ಣ ಡಾಂಬಾರು ಅಲ್ಲದ, ಮಣ್ಣಿನ ರಸ್ತೆಯೂ ಅಲ್ಲದ ಹೆಜ್ಜೆಗೊಂದು ಗುಂಡಿ ಕಂಡು ಎದೆ ಝಲ್ ಎನಿಸುವಂತೆ ಮಾಡುವ ದುರ್ಗಮ ರಸ್ತೆಯಲ್ಲಿ ಬೆಳಕು ಇರುವ ಹೊತ್ತಿನಲ್ಲಿಯೇ ಸಾಗುವುದೇ ದೊಡ್ಡ ಸಾಹಸ. ವಾಹನದಲ್ಲಿ ತರಕಾರಿ ತುಂಬಿಕೊಂಡು ಹೋಗುವಾಗ ಎಲ್ಲಿ ಬಿದ್ದು ಹೋಗುತ್ತವೆಯೋ ಎನ್ನುವ ಆತಂಕ ಕಾಡುತ್ತಲೇ ಇರುತ್ತದೆ. ಇಂಥ ಕೆಟ್ಟು ಹೋದ ಮಾರ್ಗದಲ್ಲಿ ಸೂರ್ಯೋದಯಕ್ಕೂ ಮೊದಲೇ ರೈತರು, ವ್ಯಾಪಾರಿಗಳು ಹಾಗೂ ಗ್ರಾಹಕರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕು.
ಜಿಲ್ಲಾಕೇಂದ್ರದಿಂದ ಎರಡ್ಮೂರು ಕಿ.ಮೀ. ದೂರದಲ್ಲಿರುವ ಬೆಳವಿನಾಳ ಗ್ರಾಮದ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಹೋಗುವಾಗ ಈ ಚಿತ್ರಣ ಕಂಡುಬರುತ್ತದೆ. ಅಲ್ಲಿಗೆ ತೆರಳುವ ರಸ್ತೆಯದು ಒಂದು ಕೆಟ್ಟ ಅನುಭವವಾದರೆ ಬೆಳವಿನಾಳ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವುದು ಕೂಡ ರೈತರಿಗೆ ಮತ್ತೊಂದು ಸಮಸ್ಯೆ ತಂದೊಡ್ಡುತ್ತದೆ. ಕೆಟ್ಟ ರಸ್ತೆಯೇ ಸವಾರರಿಗೆ ಪ್ರಹಾರ ಮಾಡುವಂತೆ ಭಾಸವಾಗುತ್ತದೆ.
ಹಗಲಿರುಳು ಶ್ರಮಪಟ್ಟು ಬೆಳೆದ ಫಸಲಿಗೆ ಒಂದಷ್ಟು ಲಾಭ ಪಡೆದುಕೊಳ್ಳಬೇಕು ಎನ್ನುವ ಉಮೇದಿಯೊಂದಿಗೆ ಬರುವ ರೈತರಿಗೆ ಕಮಿಷನ್ ಹಾವಳಿ ವ್ಯಾಪಕವಾಗಿ ಕಾಡುತ್ತದೆ. ಶೇ. 10ರಷ್ಟು ಕಮಿಷನ್ ನೀಡಬೇಕು ಎನ್ನುವ ಅಲಿಖಿತ ನಿಯಮ ಜಾರಿಯಲ್ಲಿದೆ. ಇತ್ತೀಚೆಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಎಪಿಎಂಸಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಚಾಟಿ ಬೀಸಿದ ಬಳಿಕವೂ ಕಮಿಷನ್ ವಿಚಾರದಲ್ಲಿ ಸುಧಾರಣೆ ಕಂಡುಬಂದಿಲ್ಲ.
ಬೆಳವಿನಾಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ ವಹಿವಾಟು ಮಾಡುವಾಗ ಮೊಬೈಲ್ ಬ್ಯಾಟರಿಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ. ದೊಡ್ಡ ದೊಡ್ಡ ವಿದ್ಯುತ್ ಕಂಬಗಳಿದ್ದರೂ ಪ್ರಕಾಶಮಾನವಾಗಿ ಕಾಣುವಷ್ಟು ಬೆಳಕಿನ ಸೌಲಭ್ಯವಿಲ್ಲ. ಎಜೆಂಟರು ರಸೀತಿ ಕೊಡುವಾಗ ಬಿಳಿ ಹಾಳೆ ಮೇಲೆ ಕಮಿಷನ್ ಲೆಕ್ಕ ಬರೆದುಕೊಡುತ್ತಾರೆ ಎಂದು ರೈತರು ಆರೋಪಿಸುತ್ತಾರೆ.
ಸುಗಮವಾಗಿ ವಹಿವಾಟು ನಡೆಸಲು ಮಳಿಗೆಗಳ ಸೌಲಭ್ಯಗಳಿದ್ದರೂ ಯಾವ ವ್ಯಾಪಾರಿಗಳೂ ನಿಗದಿತ ಸ್ಥಳದಲ್ಲಿ ವ್ಯಾಪಾರ ಮಾಡದೆ ರಸ್ತೆಯನ್ನೇ ಆಕ್ರಮಿಸಿಕೊಳ್ಳುತ್ತಾರೆ. ಹೀಗಾಗಿ ಜನರಿಗೆ ಸುಗಮ ಓಡಾಟಕ್ಕೆ ತೊಂದರೆಯಾಗುತ್ತದೆ. ಮಾರುಕಟ್ಟೆಯ ಇನ್ನೊಂದು ಭಾಗದಲ್ಲಿರುವ ಮಣ್ಣಿನ ರಸ್ತೆಯಲ್ಲಿಯೂ ಸಂಚಾರ ದುಸ್ತರವಾಗುತ್ತದೆ. ಬೆಳವಿನಾಳ ಗ್ರಾಮದ ಒಳಗಿನಿಂದಲೇ ಮಾರುಕಟ್ಟೆಗೆ ರಸ್ತೆಯಿರುವ ಕಾರಣ ಗ್ರಾಮಸ್ಥರಿಗೂ ಬೆಳಗಿನ ಜಾವದ ವಾಹನಗಳ ಓಡಾಟ ಕಿರಿಕಿರಿ ಎನಿಸುತ್ತದೆ. ಮಳೆಬಂದರಂತೂ ಮಾರುಕಟ್ಟೆಗೆ ತಲುಪಲು ಸಾಧ್ಯವಾಗದ ಸ್ಥಿತಿ ಹಿಂದೆ ಅನೇಕ ಬಾರಿ ನಿರ್ಮಾಣವಾಗಿದೆ ಎಂದು ರೈತರು ನೆನಪಿಸಿಕೊಳ್ಳುತ್ತಾರೆ.
ಇಲ್ಲಿನ ಗಂಜ್ ವೃತ್ತದ ಬಳಿಯಿರುವ ಇನ್ನೊಂದು ಎಪಿಎಂಸಿಯಲ್ಲಿಯೂ ಸಾಕಷ್ಟು ಸಮಸ್ಯೆಗಳು ಇದ್ದು, ಅಲ್ಲಿನ ನಿವೇಶನಗಳನ್ನು ಬೇರೆಯವರಿಗೆ ನೀಡಿರುವ ಕುರಿತು ವಿವಾದವಿದೆ. ರೈತ ಭವನದ ಕೊರತೆ ಒಂದೆಡೆಯಾದರೆ, ರೈತರಿಗಾಗಿಯೇ ಮೀಸಲಾಗಬೇಕಿದ್ದ ಎಪಿಎಂಸಿ ಶೌಚಾಲಯಗಳು ಈ ಆವರಣದ ಹೊರಗಡೆ ಇರುವುದರಿಂದ ರೈತರಿಗಿಂತ ಬೇರೆಯವರ ಹೆಚ್ಚು ಬಳಕೆಯಾಗುತ್ತಿದೆ.
‘ಉಪಲೋಕಾಯುಕ್ತರು ಬೆಳವಿನಾಳ ಮಾರುಕಟ್ಟೆಗೆ ಭೇಟಿ ನೀಡಿದ ಬಳಿಕ ಎಪಿಎಂಸಿಯಲ್ಲಿ ಅಲ್ಪ ಬದಲಾವಣೆ ಕಾಣುತ್ತಿದೆ. ಶೌಚಾಲಯದ ಹೊರಗೆ ಬೆಳಕು ಕಾಣುತ್ತಿದೆ, ನೀರಿನ ವ್ಯವಸ್ಥೆಯಾಗಿದೆ. ಆದ ಕೆಲಸಗಳಿಗಿಂತ ಆಗಬೇಕಾದ ಕೆಲಸಗಳು ಸಾಕಷ್ಟಿವೆ. ದೊಡ್ಡ ಮಾರುಕಟ್ಟೆಯಾಗಿರುವ ಕಾರಣ ಸೌಲಭ್ಯಗಳೂ ಹೆಚ್ಚಾಗಬೇಕು. ಮೊದಲು ಕಮಿಷನ್ ಹಾವಳಿ ತೊಲಗಬೇಕು’ ಎಂದು ವ್ಯಾಪಾರಕ್ಕೆ ಹಾಲವರ್ತಿ ಹಾಗೂ ಗಬ್ಬೂರು ಗ್ರಾಮದಿಂದ ಬಂದಿದ್ದ ಲಕ್ಷ್ಮಣ ಹಾಗೂ ಉದಯ್ ಹೇಳಿದರು.
ಶೇ. 10ರಷ್ಟು ಕಮಿಷನ್ ಪಾವತಿಸಿದರೆ ನಮಗೆ ಲಾಭ ಉಳಿಯುವುದಾದರೂ ಎಲ್ಲಿಂದ. ರೈತರ ಮೇಲೆ ಯಾಕಿಷ್ಟು ಶೋಷಣೆ ಮಾಡಲಾಗುತ್ತಿದೆ. ಅಧಿಕಾರಿಗಳು ಕ್ರಮ ವಹಿಸಬೇಕು.ಗವಿಸಿದ್ದಪ್ಪ ಹಾಲವರ್ತಿ ವ್ಯಾಪಾರಿ
ಹೈಮಾಸ್ಕ್ ದೀಪದ ವ್ಯವಸ್ಥೆಯಿದ್ದರೂ ಚೆನ್ನಾಗಿ ಬೆಳಕು ಬೀಳುವುದಿಲ್ಲ. ಎಪಿಎಂಸಿಗೆ ಬರುವ ಮಾರುಕಟ್ಟೆಗೆ ಉತ್ತಮ ಸಂಪರ್ಕ ರಸ್ತೆ ಕಲ್ಪಿಸಬೇಕು. ರೈತರಿಗೆ ಆಗುವ ಸಮಸ್ಯೆ ತಪ್ಪಿಸಬೇಕು.ನಾಗರಾಜ ನಾಯಕ ಇರಕಲ್ಲಗಡ ಗ್ರಾಮದ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.