ADVERTISEMENT

ಕೊಪ್ಪಳ | ‘ಆಯುರ್ವೇದಕ್ಕೆ ವೈಜ್ಞಾನಿಕ ತಳಹದಿ’

ಗವಿದೀಪ್ತಿ-ಕೌಶಲ ಭಾರತಿ 2.0 ಅಂತರರಾಷ್ಟ್ರೀಯ ಆಯುರ್ವೇದ ವಿಚಾರ ಸಂಕಿರಣ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 5:58 IST
Last Updated 11 ಅಕ್ಟೋಬರ್ 2025, 5:58 IST
ಕೊಪ್ಪಳದಲ್ಲಿ ಶುಕ್ರವಾರ ಆರಂಭವಾದ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅತಿಥಿಗಳು ಆಯುರ್ವೇದ ಕುರಿತಾದ ತತ್ವಚಿಂತನಾ ಕಿರುಹೊತ್ತಿಗೆ ಬಿಡುಗಡೆ ಮಾಡಿದರು
ಕೊಪ್ಪಳದಲ್ಲಿ ಶುಕ್ರವಾರ ಆರಂಭವಾದ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅತಿಥಿಗಳು ಆಯುರ್ವೇದ ಕುರಿತಾದ ತತ್ವಚಿಂತನಾ ಕಿರುಹೊತ್ತಿಗೆ ಬಿಡುಗಡೆ ಮಾಡಿದರು   

ಕೊಪ್ಪಳ: ‘ಪರಂಪರಾಗತವಾಗಿ ಬಂದ ಆಯುರ್ವೇದಕ್ಕೆ ವೈಜ್ಞಾನಿಕ ಅಧ್ಯಯನಗಳ ತಳಹದಿ ಆಧಾರವಾಗಿದ್ದು, ಆಯುರ್ವೇದ ವಿಜ್ಞಾನವನ್ನು ಕರಗತ ಮಾಡಿಕೊಂಡರೆ ಉತ್ತಮ ಆರೋಗ್ಯ ಮತ್ತು ಜ್ಞಾನ ಪಡೆದುಕೊಳ್ಳಬಹುದು’ ಎಂದು ಆರೋಗ್ಯ ಭಾರತಿ ಸಂಸ್ಥೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ.ಅಶೋಕ ಕುಮಾರ ವಿ. ಹೇಳಿದರು.

ಇಲ್ಲಿನ ಗವಿಸಿದ್ಧೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಆರೋಗ್ಯ ಭಾರತಿ ಕರ್ನಾಟಕ ಉತ್ತರ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ನಗರದಲ್ಲಿ ಆರಂಭವಾದ ಎರಡು ದಿನಗಳ ಗವಿದೀಪ್ತಿ 2K25 ಕೌಶಲ ಭಾರತಿ 2.0 ಅಂತರರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಕೋವಿಡ್‌ ಹಾಗೂ ಆಧುನಿಕತೆಯ ಕೆಟ್ಟ ಜೀವನ ಶೈಲಿಯಿಂದಾಗಿ ಆರೋಗ್ಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ಅನಾರೋಗ್ಯದಿಂದ ಆರೋಗ್ಯ, ಆರೋಗ್ಯದಿಂದ ಸಂತೋಷ ಎನ್ನುವ ಸೂತ್ರವನ್ನು ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಆರೋಗ್ಯ ಭಾರತಿ ಸಾಮಾಜಿಕ ಸಂಘಟನೆಯಾಗಿದ್ದು, ಕೇಂದ್ರ ಸರ್ಕಾರದ ಆಯುಷ್‌ ಮಂತ್ರಾಲಯ ಆಯುರ್ವೇದ ಕ್ಷೇತ್ರದಲ್ಲಿನ ಹೊಸ ಸಂಶೋಧನೆಗಳಿಗೆ ಪ್ರೇರಣೆ ನೀಡುತ್ತಿದೆ. ಆಯುರ್ವೇದ ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ವಿಚಾರ ಸಂಕಿರಣ ವೇದಿಕೆಯಾಗಿದೆ’ ಎಂದು ಆಯುಷ್‌ ಮಂತ್ರಾಲಯದ ಸಲಹೆಗಾರರೂ ಆದ ಅಶೋಕ ಕುಮಾರ್‌ ತಿಳಿಸಿದರು.

ಎಸ್‌ಡಿಎಂ ಇನ್‌ಸ್ಟಿಟ್ಯೂಟ್‌ ಆಫ್‌ ಆಯುರ್ವೇದ ನಿರ್ದೇಶಕ ಡಾ.ಪ್ರಸನ್ನ ನರಸಿಂಹರಾವ್‌ ಮಾತನಾಡಿ ‘ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಮಾತ್ರ ಅಲೋಪಥಿ ಚಿಕಿತ್ಸೆ ಬೇಕು. ಗರ್ಭಕೋಶ ತೊಂದರೆಯಾದರೆ ಗರ್ಭಕೋಶವನ್ನೇ ತೆಗೆಯಬೇಕು ಎಂಬುದು ಆಧುನಿಕ ವೈದ್ಯಕೀಯ ಪದ್ಧತಿಯ ಕ್ರಮ; ಆದರೆ, ಆಯುರ್ವೇದ ಭಿನ್ನವಾಗಿದೆ. ಹಾನಿಗೆ ಒಳಗಾದ ಅಂಗಾಂಗವನ್ನು ಉಳಿಸಿಕೊಂಡೇ ಅವುಗಳಲ್ಲಿರುವ ಉರಿಊತ ಸಂಪೂರ್ಣ ಗುಣಮುಖ ಮಾಡುವ ಪರಿಪೂರ್ಣ ಚಿಕಿತ್ಸೆಯೇ ಆಯುರ್ವೇದವಾಗಿದೆ’ ಎಂದು ಪ್ರತಿಪಾದಿಸಿದರು.

‘ಆಯುರ್ವೇದಕ್ಕೆ ಒಂದೆಡೆ ಸರ್ಕಾರ ಆದ್ಯತೆ ಕೊಡುತ್ತಿದ್ದರೆ, ಇನ್ನೊಂದೆಡೆ ಮಠಗಳು ಕೂಡ ಪ್ರಾಮುಖ್ಯತೆ ನೀಡುತ್ತಿವೆ. ಹತ್ತು ವರ್ಷಗಳಲ್ಲಿ ಆಯುರ್ವೇದ ಜನಸಾಮಾನ್ಯರ ಚಿಕಿತ್ಸಾ ಪದ್ಧತಿಯಾಗಿ ಬದಲಾಗಲಿದೆ. ವಿದೇಶಗಳಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಸಂಬಂಧಿಸಿದ ಕೋರ್ಸ್‌ಗಳು ಆರಂಭವಾಗಿವೆ’ ಎಂದು ಹೇಳಿದರು.

ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ಎಸ್.ಪ್ರಶಾಂತ, ಶಾರದಮ್ಮ ಕೊತಬಾಳ ಕಾಲೇಜಿನ ನಿರ್ದೇಶಕ ಮಹೇಶ ಮುದುಗಲ್, ವೈದ್ಯರಾದ ಗಿರೀಶ.ಕೆ.ಜೆ, ಕರುಣಾತಿಲಕೆ, ಪ್ರತಿಮಾ ನಾಗೇಶ, ಅನುಪಮಾ, ರವಿರಾಜ ಕಡ್ಲೆ, ಹೇಮಂತ ತೋಷಿಕಾನೆ ವಿಶೇಷ ಉಪನ್ಯಾಸ ನೀಡಿದರು. 

ಆರೋಗ್ಯ ಭಾಗ್ಯ ಕರ್ನಾಟಕ ಉತ್ತರದ ಅಧ್ಯಕ್ಷ ಡಾ.ಸಿದ್ದನಗೌಡ ಪಾಟೀಲ, ಉಪಪ್ರಾಚಾರ್ಯ ಸುರೇಶ ಹಕ್ಕಂಡಿ, ಕೆ.ಬಿ. ಹಿರೇಮಠ, ಜಿ.ಜಿ. ಪಾಟೀಲ, ಎಸ್.ಕೆ.ಬನ್ನಿಗೋಳ, ಗವಿಸಿದ್ದನಗೌಡ ಪಾಟೀಲ, ಶ್ರೀಧರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಎರಡು ದಿನಗಳ ವಿಚಾರ ಸಂಕಿರಣ ಆರಂಭ ವಿವಿಧ ರಾಜ್ಯಗಳಿಂದ ಬಂದಿರುವ ಆಯುರ್ವೇದ ವಿದ್ಯಾರ್ಥಿಗಳು ಶನಿವಾರ ಸಂಜೆ 4.30ಕ್ಕೆ ಸಮಾರೋಪ ಕಾರ್ಯಕ್ರಮ

ಗವಿಸಿದ್ಧೇಶ್ವರ ಮಠ ಶಿಕ್ಷಣಕ್ಕೆ ಹಾಗೂ ಬಡಮಕ್ಕಳ ಓದಿಗೆ ದೊಡ್ಡ ಕೊಡುಗೆ ನೀಡುತ್ತಿದೆ. ಆಯುರ್ವೇದ ಕಲಿಕೆಗೂ ಪ್ರೋತ್ಸಾಹ ಒದಗಿಸುತ್ತಿದೆ 
ಸಂಜಯ ಕೊತಬಾಳ ಗವಿಸಿದ್ದೇಶ್ವರ ಆಯುರ್ವೇದ ಕಾಲೇಜಿನ ಕಾರ್ಯಾಧ್ಯಕ್ಷ
ಆಯುರ್ವೇದದ ಸಂಪೂರ್ಣ ಜ್ಞಾನ ಪಡೆದುಕೊಳ್ಳುವ ಜೊತೆಗೆ ಕೌಶಲವನ್ನೂ ರೂಢಿಸಿಕೊಂಡರೆ ವೈದ್ಯ ವೃತ್ತಿಯಲ್ಲಿ ಯಶಸ್ಸು ಕಾಣಬಹುದು
ಡಾ. ಮಹಾಂತೇಶ ಸಾಲಿಮಠ ಗವಿಸಿದ್ಧೇಶ್ವರ ಆಯುರ್ವೇ ಕಾಲೇಜಿನ ಪ್ರಾಚಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.