
ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ನಗರದಲ್ಲಿ ನಡೆಯುತ್ತಿರುವ ಧರಣಿ ಭಾನುವಾರ 115 ದಿನಗಳನ್ನು ಪೂರ್ಣಗೊಳಿಸಿತು.
2025ರ ಫೆ. 24ರಂದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮುಂದಾಳತ್ವದಲ್ಲಿ ಕೊಪ್ಪಳ ಬಂದ್ ಮಾಡಿ ಕಾರ್ಖಾನೆಗಳ ವಿಸ್ತರಣೆಗೆ ಪ್ರಬಲ ವಿರೋಧ ವ್ಯಕ್ತಪಡಿಸಲಾಗಿತ್ತು. ಅದರ ನೆನಪಿಗಾಗಿ ಈಗ ಫೆ. 24ರಂದೇ ಕೊಪ್ಪಳ ಬಂದ್ ಕರೆ ನೀಡಲಾಗಿದೆ.
ಇದರ ಪೂರ್ವಭಾವಿಯಾಗಿ ಭಾಗ್ಯನಗರದಲ್ಲಿ ಭಾನುವಾರ ಸರಣಿ ಸಭೆಗಳನ್ನು ನಡೆಸಲಾಯಿತು. ಶಂಕರಾಚಾರ್ಯರ ಮಠ, ಕುರುಹಿನಶೆಟ್ಡರ ನೀಲಕಂಠೇಶ್ವರ ದೇವಸ್ಥಾನ ಮತ್ತು ಮರಿಯಮ್ಮನ ಗುಡಿಯಲ್ಲಿ ಸಭೆ ನಡೆಸಿ ಬಂದ್‌ಗೆ ಬೆಂಬಲ ಕೋರಲಾಯಿತು.
ಸಂಘಟಕರ ಜೊತೆಗೆ ಮಾತನಾಡಿದ ಸಂಸದ ಕೆ. ರಾಜಶೇಖರ ಹಿಟ್ನಾಳ ‘ಈಗಾಗಲೇ ಜಂಟಿ ಕ್ರಿಯಾ ವೇದಿಕೆ ನೂರನೇ ದಿನದಲ್ಲಿ ತೆಗೆದುಕೊಂಡ ನಿರ್ಣಯದಂತೆ ಬಲ್ಡೋಟ ಕಂಪನಿ ಹಾಕಿರುವ ಸಿಮೆಂಟ್ ಬೆಂಚ್ ಮತ್ತು ಟ್ರೀ ಗಾರ್ಡ್‌ಗಳನ್ನು ಬಲ್ಡೋಟ ಕಾರ್ಖಾನೆಗೆ ಹಿಂತಿರುಗಿಸುವ ಕಾರ್ಯಾಚರಣೆ ಭಾಗವಾಗಿ ಬಲ್ಡೋಟ ಹೆಸರಿನ ಟ್ರೀಗಾರ್ಡ್, ಸಿಮೆಂಟ್ ಬೆಂಚ್ ತೆಗೆದ ಜಾಗದಲ್ಲಿ ಹೊಸದಾಗಿ ಫಲಕ ಹಾಕಲಾಗುವುದು’ ಎಂದು ಭರವಸೆ ನೀಡಿದರು.
ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಅವರು ಮಾತನಾಡಿ ‘ನಮಗೆ ಬಂದೊದಗಿದ ಸಂಕಟ ದೊಡ್ಡ ಸಮಸ್ಯೆ ಎದುರಾಗುತ್ತದೆ. ಯಾವುದೇ ಸರ್ಕಾರಗಳು ನಮಗೆ ಯಾರದೋ ಕಡೆ ಕೈ ಮಾಡಿ ತೋರಿಸುವುದು ಬೇಡ, ನಮಗೆ ಇರುವ ಆತಂಕವನ್ನು ದೂರ ಮಾಡದೆ ಸಮಯ ವ್ಯರ್ಥ ಮಾಡುವುದು ಬೇಡ’ ಎಂದು ಸರ್ಕಾರವನ್ನು ಕೋರಿದರು.
ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಟರಾಜ ಸವಡಿ, ಶರಣು ಪಾಟೀಲ್, ಸುಭಾನ್ ನೀರಲಗಿ, ಶರಣು ಶೆಟ್ಟರ್, ಬಿ.ಜಿ.ಕರಿಗಾರ, ರವಿ ಕಾಂತನವರ, ಸಂಗನಗೌಡ ಪೋ.ಪಾಟೀಲ್, ವೈ.ಎಚ್. ಹಳ್ಳಿಕೇರಿ, ವೈ. ಸತ್ಯನಾರಾಯಣ, ಶರಣು ಗಡ್ಡಿ, ಎಸ್.ಬಿ.ರಾಜೂರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.