ADVERTISEMENT

ಕೊಪ್ಪಳದಲ್ಲಿ ಮೈಸೂರು ಮಾದರಿ ದಸರಾಕ್ಕೆ ಸಿದ್ಧತೆ

ಜಿಲ್ಲೆಯ ದೇವಸ್ಥಾನಗಳಲ್ಲಿ ಹಲವು ಕಾರ್ಯಕ್ರಮಗಳು, ಶೃಂಗಾರಗೊಂಡ ಬನ್ನಿಕಟ್ಟೆಗಳು

ಪ್ರಮೋದ ಕುಲಕರ್ಣಿ
Published 22 ಸೆಪ್ಟೆಂಬರ್ 2025, 5:16 IST
Last Updated 22 ಸೆಪ್ಟೆಂಬರ್ 2025, 5:16 IST
ಕೊಪ್ಪಳದಲ್ಲಿ ಕಲಾವಿದರೊಬ್ಬರು ದೇವಿ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದ ಚಿತ್ರಣ
ಕೊಪ್ಪಳದಲ್ಲಿ ಕಲಾವಿದರೊಬ್ಬರು ದೇವಿ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದ ಚಿತ್ರಣ   

ಕೊಪ್ಪಳ: ಕಣ್ಣು ಹಾಯಿಸಿದಷ್ಟೂ ದೂರ ಬಣ್ಣಬಣ್ಣಗಳ ವಿದ್ಯುತ್‌ ದೀಪಗಳ ಅಲಂಕಾರ, ತಳಿರು ತೋರಣಗಳಿಂದ ಶೃಂಗಾರಗೊಂಡ ಬನ್ನಿಕಟ್ಟಿಗಳು, ಮೈಸೂರು ಮಾದರಿಯಲ್ಲಿ ಪ್ರತಿವರ್ಷ ಗಂಗಾವತಿ ತಾಲ್ಲೂಕಿನ ಹೇಮಗುಡ್ಡದಲ್ಲಿ ನಡೆಯುವ ದಸರಾ ವೈಭವ, ಶಕ್ತಿ ದೇವತೆಯ ಪೀಠವಾದ ಹುಲಿಗಿಯಲ್ಲಿ ವಿಶೇಷ ಪೂಜೆಗೆ ತಯಾರಿ.

ನಾಡಹಬ್ಬ ಎಂದೇ ಹೆಸರಾದ ದಸರಾವನ್ನು ಸ್ವಾಗತಿಸಲು ಜಿಲ್ಲೆಯಲ್ಲಿ ಮಾಡಿಕೊಂಡಿರುವ ಸಿದ್ಧತೆ ಇದು. ಪಕ್ಷ ಮಾಸ ಪೂರ್ಣಗೊಂಡ ಮರುದಿನವಾದ ಸೋಮವಾರ (ಇಂದಿನಿಂದ) ದಸರಾ ವೈಭವ ಆರಂಭವಾಗಲಿದ್ದು, ಜನರಲ್ಲಿ ಹಬ್ಬದ ಸಡಗರ ಮನೆ ಮಾಡಿದೆ.  

ಮೈಸೂರು ಮಾದರಿ: ಮೈಸೂರಿನ ದಸರಾ ಮಾದರಿಯಲ್ಲಿಯೇ ಹೇಮಗುಡ್ಡದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಒಂಬತ್ತು ದಿನ ವಿವಿಧ ಕಾರ್ಯಕ್ರಮಗಳು ಇರುತ್ತವೆ. ಈ ಅವಧಿಯಲ್ಲಿ ಗಣಪತಿ ಹೋಮ, ಪಾರಾಯಣ, ಮಹಾಸುದರ್ಶನ ಹೋಮ, ಸಪ್ತಶತಿ ಪಾರಾಯಣ, ಸಾಮೂಹಿಕ ವಿವಾಹ ಜರುಗಲಿವೆ. ಅ. 1ರಂದು ಸಂಜೆ 5 ಗಂಟೆಗೆ ನಡೆಯುವ ಆನೆಯ ಮೇಲೆ ಅಂಬಾರಿಯಲ್ಲಿ ದುರ್ಗಾದೇವಿ ಮೆರವಣಿಗೆ ನೋಡಲು ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಅ. 2ರಂದು ಬನ್ನಿಮುಡಿಯುವುದು, ಮಹಾರಥೋತ್ಸವ ಜರುಗಲಿದೆ.

ADVERTISEMENT

ಆನೆಗೊಂದಿಯ ಆದಿಶಕ್ತಿ ದೇವಸ್ಥಾನದಲ್ಲಿಯೂ ಅದ್ದೂರಿಯಾಗಿ ದಸರಾ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ನಿತ್ಯವೂ ಒಂದೊಂದು ಬಣ್ಣದ ಸೀರೆ ತೊಡಿಸಿ ಅಲಂಕಾರ ಮಾಡಲಾಗುತ್ತದೆ.

ಕೊಪ್ಪಳದ ಜವಾಹರ ರಸ್ತೆಯಲ್ಲಿರುವ ಪಲ್ಲೇದವರ ಓಣಿ, ಗಡಿಯಾರ ಕಂಬದ ಬಳಿ, ದುರ್ಗಾದೇವಿ ಮಿತ್ರ ಮಂಡಳಿ, ಗೋವಿಂದರಾಯನ ಗುಡಿ ಆವರಣದಲ್ಲಿ, ಪಶು ಆಸ್ಪತ್ರೆ ಆವರಣ ಸಮೀಪ, ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಿತ್ಯ ಒಂದೊಂದು ರೂಪಕಗಳ ಅಲಂಕಾರ ಮಾಡಲಾಗುತ್ತಿದೆ. ಪಟೇಲ್‌ ಸಮುದಾಯದವರು ಶಾರದಾ ಟಾಕೀಸ್‌ ಹಿಂಭಾಗದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ದಾಂಡಿಯಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುತ್ತಾರೆ.

ದೇವಿಗೆ ನಿತ್ಯ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರಸಾದ ವ್ಯವಸ್ಥೆ ಇರುತ್ತವೆ. ರಸ್ತೆಗಳಲ್ಲಿಯೂ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿತ್ತು. ಸೋಮವಾರ ಮೆರವಣಿಗೆ ಮೂಲಕ ದೇವಿಯ ಮೂರ್ತಿ ತಂದು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಾರೆ. ಗೌರಿ ಅಂಗಳದಲ್ಲಿರುವ ನಗರದ ಪುರಾತನ ದ್ಯಾಮವ್ವ ದೇವಿ ಜಾತ್ರೆ ಈ ಬಾರಿ ದಸರಾ ಸಂದರ್ಭದಲ್ಲಿಯೇ ಬಂದಿದ್ದು ಭಕ್ತರ ಖುಷಿ ಇಮ್ಮಡಿಸಿದೆ. ಶಿವಗಂಗಾ ನಗರ ಸೇರಿದಂತೆ ವಿವಿಧೆಡೆ ಬನ್ನಿಕಟ್ಟಿಗೆ ಹೊಸರೂಪ ನೀಡಲಾಗಿದೆ. ಕಲಾವಿದರು ದೇವಿಮೂರ್ತಿಗೆ ಅಂತಿಮ ಸ್ಪರ್ಶ ನೀಡುವ ಕೆಲಸ ಭಾನುವಾರ ರಾತ್ರಿಯೂ ಚುರುಕುಪಡೆದುಕೊಂಡಿತ್ತು.

ಹುಲಿಗಿಯಲ್ಲಿಯೂ ಸಿದ್ಧತೆ ಜೋರು

ಮುನಿರಾಬಾದ್: ದಸರಾದ ಪ್ರಮುಖ ಆಕರ್ಷಣೆಯಾಗಿರುವ ಇಲ್ಲಿಗೆ ಸಮೀಪದ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ ಮುಂಭಾಗದಲ್ಲಿ ರಂಗೋಲಿ ಸ್ಪರ್ಧೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.  ದಸರಾ ಉತ್ಸವ ಹುಲಿಗಿಯಲ್ಲಿ ಜರುಗಲಿದ್ದು ಸೋಮವಾರ ಮಹಿಳೆಯರಿಗೆ ದೇವಸ್ಥಾನದ ಆವರಣದಲ್ಲಿ ರಂಗೋಲಿ ಸ್ಪರ್ಧೆ ಸೆ. 24 ಹಾಗೂ 25ರಂದು ಕೊಪ್ಪಳ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ಕಬಡ್ಡಿ ಟೂರ್ನಿ 27 ಹಾಗೂ 28ರಂದು ಪುರುಷರ ಹಾಗೂ ಮಹಿಳೆಯರ ಮುಕ್ತ ಆಹ್ವಾನಿತ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಯ ಪಂದ್ಯಗಳು ತುಂಗಭದ್ರಾ ಪ್ರೌಢಶಾಲೆ ಹಳೆಯ ಮೈದಾನದಲ್ಲಿ ಆಯೋಜನೆಯಾಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.