
ಕೊಪ್ಪಳ: ‘ಈಗಾಗಲೇ ಬೇಸಿಗೆ ಆರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಅಮೃತ 2.0 ಯೋಜನಾ ಕಾಮಗಾರಿ, ಜಲಜೀವನ ಮಿಷನ್ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
‘ಜಿಲ್ಲೆಯ 7 ತಾಲ್ಲೂಕುಗಳಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ತಾಲ್ಲೂಕು ಪಂಚಾಯಿತಿ ಇಒಗಳು, ಜೆಇಗಳು ಹಾಗೂ ಎಡಬ್ಲ್ಯೂಗಳು ತಮ್ಮ ವ್ಯಾಪ್ತಿಯ ಪಂಚಾಯಿತಿಗಳಿಗೆ ಭೇಟಿ ನೀಡಬೇಕು’ ಎಂದು ಹೇಳಿದರು.
‘ಯಾವ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆಯಾಗಬಹುದು ಎಂದು ಮುಂಚಿತವಾಗಿಯೇ ಗುರುತಿಸಿ ಈಗಿನಿಂದಲೇ ಆಯಾ ತಾಲ್ಲೂಕಿನ ಶಾಸಕರ ಮೂಲಕ ಸಿಇಒ ಅವರಿಗೆ ಮಾಹಿತಿ ನೀಡಬೇಕು. ಈ ಕುರಿತು ಅಧಿವೇಶನದಲ್ಲಿ ಮಾತನಾಡುತ್ತೇನೆ. ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕುಗಳಿಗೆ ಕೃಷ್ಣಾ ನದಿಯಿಂದ ನೀರು ಬರುತ್ತದೆ. ಅಲ್ಲಿ ಕಾಮಗಾರಿ ಸಮರ್ಪಕವಾಗಿ ಆದರೆ ನೀರಿನ ಸಮಸ್ಯೆ ಬರುವದಿಲ್ಲ’ ಎಂದರು.
ಶಾಸಕ ದೊಡ್ಡನಗೌಡ ಪಾಟೀಲ, ಸಂಸದ ಕೆ.ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಭಾಗವಹಿಸಿದ್ದರು.
ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆಯಾದರೆ ಜನ ಜನಪ್ರತಿನಿಧಿಗಳಿಗೆ ಕರೆ ಮಾಡುತ್ತಾರೆ. ಹಾಗಾಗಿ ಜಿಲ್ಲೆಯ ಯಾವ ಒಂದು ಊರಿನಲ್ಲೂ ನೀರಿನ ಸಮಸ್ಯೆಯಾಗಬಾರದು-ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.