ADVERTISEMENT

ಪಾಳುಬಿದ್ದ ಕ್ರೀಡಾಂಗಣ; ಕ್ರೀಡಾಪಟುಗಳಿಗೆ ಸಿಗದ ಪ್ರೋತ್ಸಾಹ

ಮೂಲಸೌಕರ್ಯ ವಂಚಿತ ತಾಲ್ಲೂಕು ಕ್ರೀಡಾಂಗಣ

ಶಿವಕುಮಾರ್ ಕೆ
Published 17 ನವೆಂಬರ್ 2019, 19:30 IST
Last Updated 17 ನವೆಂಬರ್ 2019, 19:30 IST
ಬಾಗಿಲು ತೆರೆಯದ ವ್ಯಾಯಾಮ ಶಾಲೆ
ಬಾಗಿಲು ತೆರೆಯದ ವ್ಯಾಯಾಮ ಶಾಲೆ   

ಗಂಗಾವತಿ: ನಗರದಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಯಾವುದೇ ಮೂಲ ಸೌಕರ್ಯ ಇಲ್ಲದಿರುವ ಪರಿಣಾಮ ಕ್ರೀಡೆಗಳು ನಡೆಯದೆ, ಅಕ್ರಮಗಳ ಚಟುವಟಿಕೆಗಳ ತಾಣವಾಗಿದೆ.

ಗಂಗಾವತಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಕೂಡ ಮಾಡಿದ್ದಾರೆ. ಆದರೆ, ನಗರದಲ್ಲಿ ಕ್ರೀಡಾಭ್ಯಾಸಕ್ಕೆ ಸೂಕ್ತ ವ್ಯವಸ್ಥೆ ಇಲ್ಲದೇ ಕ್ರೀಡಾಪಟುಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ.

ನಗರದ ಎಂಪಿಎಂಸಿ ಪಕ್ಕದಲ್ಲೇ ನಿರ್ಮಾಣಗೊಂಡಿರುವ ವಿಶಾಲವಾದ ತಾಲ್ಲೂಕು ಕ್ರೀಡಾಂಗಣ ಕಾಟಾಚಾರಕ್ಕೆ ಮಾತ್ರ ನಿರ್ಮಿಸಲಾಗಿದೆ ಎಂಬಂತಾಗಿದೆ. ಇಲ್ಲಿಗೆ ಬರುವ ಕ್ರೀಡಾಪಟುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ , ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯೇ ಇಲ್ಲ.

ADVERTISEMENT

ಕ್ರೀಡಾಂಗಣದಲ್ಲಿ ವೀಕ್ಷಣೆ ಮಾಡಲು ಗ್ಯಾಲರಿ ಹೊರತುಪಡಿಸಿದರೆ, ಬೇರೆ ಯಾವುದೇ ಸೌಲಭ್ಯಗಳಿಲ್ಲ. ಪ್ರತಿನಿತ್ಯ ವಾಯುವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಒಂದಷ್ಟು ಅನುಕೂಲವಾಗಿದೆ. ಪಾಳುಬಿದ್ದಂತೆ ಇರುವ ಈ ಕ್ರೀಡಾಂಗಣದಲ್ಲಿ ಸಂಜೆ ವೇಳೆ ಕೆಲ ಮಂದಿ ಕ್ರಿಕೆಟ್ ಆಟವಾಡುವುದನ್ನು ಬಿಟ್ಟರೆ ಬೇರೆ ಕ್ರೀಡೆಗಳು ಇಲ್ಲಿ ನಡೆಯುತ್ತಿಲ್ಲ.

ಈಜುಕೊಳ ಒಂದೇ ಸೌಲಭ್ಯ : ಕ್ರೀಡಾಂಗಣದಲ್ಲಿ ಕಳೆದ ವರ್ಷ ಆರಂಭವಾಗಿರುವ ಈಜುಕೊಳ ಸಾರ್ವಜನಿಕರಿಗೆ ಮುಕ್ತವಾಗಿದೆ. ಹಾಗಾಗಿ ರಜೆ ದಿನಗಳಲ್ಲಿ ಮಕ್ಕಳು ಈಜುಕೊಳಕ್ಕೆ ಬಂದು ಈಜಾಡಿ ಹೋಗುತ್ತಾರೆ. ಆದರೆ, ಈಜುಕೊಳದ ಹಿಂಭಾಗದಲ್ಲಿ ಸಾರ್ವಜನಿಕರು ಕಸವನ್ನು ತಂದು ಸುರಿಯುತ್ತಿರುವುದರಿಂದ ಗಬ್ಬು ವಾಸನೆ ಬರುತ್ತಿದೆ ಎಂದು ಈಜುಪ್ರಿಯರು ಆರೋಪಿಸುತ್ತಿದ್ದಾರೆ.

‘ಸದ್ಯ ದೊಡ್ಡವರ ಈಜುಕೊಳವೊಂದೆ ಇದೆ. ಮಕ್ಕಳ ಈಜುಕೊಳ ನಿರ್ಮಾಣ, ಕಾಂಪೌಂಡ್‌ ಎತ್ತರ ಹೆಚ್ಚಿಸಲು ಹಾಗೂ ಈಜುಕೊಳದ ನಿರ್ವಹಣೆಗೆ ಒಟ್ಟು ₹ 45 ಲಕ್ಷ ಅನುದಾನ ನೀಡುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಬಾಗಿಲು ತೆರೆಯದ ವ್ಯಾಯಾಮ ಶಾಲೆ :ಕ್ರೀಡಾಂಗಣದಲ್ಲಿ ವ್ಯಾಯಾಮ ಶಾಲೆಯನ್ನು ನಿರ್ಮಿಸಲಾಗಿದೆ. ಇದುವರೆಗೂ ಅದರ ಬಾಗಿಲು ತೆರೆದಿದ್ದನ್ನು ಯಾರು ನೋಡಿಯೇ ಇಲ್ಲ. ಅಲ್ಲದೇ ವ್ಯಾಯಾಮ ಶಾಲೆಯಲ್ಲಿ ಯಾವುದೇ ರೀತಿಯ ಜಿಮ್ ಉಪಕರಣಗಳು ಇಲ್ಲ. ಹಾಗಾಗಿ ಬಾಗಿಲು ಹಾಕಲಾಗಿದೆ ಎಂದು ಕ್ರೀಡಾಪಟುಗಳು ಹೇಳುತ್ತಿದ್ದಾರೆ.

ಕುಡುಕರ ಹಾವಳಿ:ಕ್ರೀಡಾಂಗಣದಲ್ಲಿ ವಿದ್ಯುತ್ ದೀಪಗಳು ಇಲ್ಲದೆ ಇರುವುದರಿಂದ ರಾತ್ರಿಯಾದರೆ ಸಾಕು, ಕ್ರೀಡಾಂಗಣದಲ್ಲಿ ಮದ್ಯಪ್ರಿಯರ ದಂಡೇ ಇಲ್ಲಿ ಸೇರಿರುತ್ತದೆ. ಮೈದಾನದ ಸುತ್ತಲೂ ಅಲ್ಲಲ್ಲಿ ಮದ್ಯದ ಬಾಟಲಿ, ಪ್ಯಾಕೆಟ್‌ಗಳನ್ನು ಹಾಕಲಾಗಿದೆ.

ಧ್ವಜಾರೋಹಣಕ್ಕೆ ಸೀಮಿತ: ವರ್ಷದಲ್ಲಿ ನಾಲ್ಕು ಬಾರಿ ಇದೇ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನಡೆಸಲು ಹಾಗೂ ಇತರೆ ಖಾಸಗಿ ಕಾರ್ಯಕ್ರಮ ನಡೆಸಲು ಕ್ರೀಡಾಂಗಣ ಬಳಕೆಯಾಗುತ್ತಿದೆ‌. ಕ್ರೀಡಾ ಚಟುವಟಿಕೆಗಳಿಗೆ ಬಳಕೆಯಾಗುತ್ತಿಲ್ಲ. ಕಾರ್ಯಕ್ರಮಗಳ ಆಯೋಜನೆ ವೇಳೆ ಕ್ರೀಡಾಂಗಣದಲ್ಲಿ ಸ್ವಚ್ಛತೆ ಕಾಪಾಡಲಾಗುತ್ತದೆ. ಉಳಿದ ದಿನಗಳಲ್ಲಿ ಕ್ರೀಡಾಂಗಣದ ಕಾಳಜಿ ವಹಿಸುವರೇ ಇಲ್ಲ.

ಸಿಬ್ಬಂದಿ ಕೊರತೆ: ಕ್ರೀಡಾಂಗಣವನ್ನು ನೋಡಿಕೊಳ್ಳಲು ಗುತ್ತಿಗೆ ಆಧಾರದ ಮೇಲೆ ಮೂವರು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಆದರೆ, ಒಬ್ಬರು ಈಜುಕೊಳದ ಮೇಲುಸ್ತುವಾರಿ ನೋಡಿಕೊಂಡರೆ, ಇನ್ನಿಬ್ಬರು ಹಗಲು ಮತ್ತು ರಾತ್ರಿ ಕ್ರೀಡಾಂಗಣದ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಕಾರ್ಯಾಲಯ ಮತ್ತು ಜಿಮ್ ಸ್ಕೂಲ್ ಯಾವಾಗಲೂ ಬಂದ್ ಆಗಿರುತ್ತದೆ.

ರೆಡಿಯಾಗದ ಒಳಾಂಗಣ ಕ್ರೀಡಾಂಗಣ: ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಲು ಈಗಾಗಲೇ ಎಚ್‌ಕೆಆರ್‌ಡಿಬಿ ಯಿಂದ ₹ 1.50 ಲಕ್ಷ ಅನುದಾನ ಕೂಡ ಬಿಡುಗಡೆಯಾಗಿದೆ. ಆದರೆ, ಕಾಮಗಾರಿ ಕೆಲಸ ಮಾತ್ರ ಶುರುವಾಗದೇ ಇರುವುದರಿಂದ ಕ್ರೀಡಾಪಟುಗಳು ವಂಚಿತರಾಗಿದ್ದು, ಖಾಸಗಿ ಕ್ರೀಡಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುವಂತಾಗಿದೆ.

ಕೊಕ್ಕೊ, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಉದ್ದಜಿಗಿತ, ಎತ್ತರ ಜಿಗಿತ, ಪುಟ್ಬಾಲ್ ಮತ್ತಿತ್ತರ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕಿದ್ದ ಯುವಜನ ಕ್ರೀಡಾ ಇಲಾಖೆ ಸಂಪೂರ್ಣ ವಿಫಲವಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.