
ಗಂಗಾವತಿ: ಇಲ್ಲಿನ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಚೇರಿಯಿಂದ ಶುಕ್ರವಾರ ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್ ವಿತರಿಸಲಾಯಿತು.
ಸರ್ಕಾರಿ ಉಪವಿಭಾಗ ಆಸ್ಪತ್ರೆಯ ವೈದ್ಯ ಸೋಮಶೇಖರ ಕಬ್ಬೇರ್ ಮಾತನಾಡಿ, ಕ್ಷಯರೋಗ ಮುಕ್ತ ಕರ್ನಾಟಕ ಉದ್ದೇಶದಿಂದ ಕ್ಷಯರೋಗಿಗಳಿಗೆ ಚಿಕಿತ್ಸೆ ಜೊತೆಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಗುತ್ತಿದೆ. ಕ್ಷಯರೋಗ ನಿಯಂತ್ರಣಕ್ಕೆ ಸುಸಜ್ಜಿತ ಚಿಕಿತ್ಸೆ ಜೊತೆಗೆ ಸೂಕ್ತ ತಪಾಸಣೆ ಅಗತ್ಯ’ ಎಂದರು.
ಸರ್ಕಾರಿ ಆಸ್ಪತ್ರೆ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಮಲ್ಲಿಕಾರ್ಜುನ ಹ್ಯಾಟಿ ಮಾತನಾಡಿ, ‘ಕ್ಷಯರೋಗಿಗಳಿಗೆ ಚಿಕಿತ್ಸೆ ಎಷ್ಟು ಅವಶ್ಯಕವೋ, ಅಷ್ಟೇ ಪೌಷ್ಠಿಕ ಆಹಾರ ಪದಾರ್ಥಗಳ ಸೇವನೆ ಅಗತ್ಯ. ಗಂಗಾವತಿ ತಾಲ್ಲೂಕಿನಲ್ಲಿ ಸುಮಾರು 290 ಕ್ಷಯರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.
‘ಕ್ಷಯರೋಗಿಗಳಲ್ಲಿ ಶೇ.80ರಷ್ಟು ರೋಗಿಗಳು ಬಡತನದಿಂದ ಕೂಡಿದವರಿದ್ದಾರೆ. ಇವರಿಗೆ ಪೌಷ್ಠಿಕ ಆಹಾರ ಸೇವನೆ ಸಹ ಕಷ್ಟಕರವಾಗಿದ್ದು, ವಿವಿಧ ಸಂಘ ಸಂಸ್ಥೆಗಳು ಹಾಗೂ ನಿಕ್ಷಯ ಮಿತ್ರ ಯೋಜನೆಯಡಿ ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ. ಜೊತೆಗೆ ಕ್ಷಯರೋಗಿಗಳನ್ನ ದತ್ತು ನೀಡಲಾಗುತ್ತಿದೆ. ದತ್ತು ಪಡೆದು ದಾನಿಗಳು ರೋಗಿಗಳಿಗೆ ಪೌಷ್ಠಿಕ ಆಹಾರ ಕಿಟ್ ನೀಡುವ ಮೂಲಕ ಸಮಾಜ ಸೇವೆಗೆ ಮುಂದಾಗಬೇಕು’ ಎಂದರು.
ಆರೋಗ್ಯ ಇಲಾಖೆ ಸಿಬ್ಬಂದಿ ರಾಘವೇಂದ್ರ ಜೋಶಿ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.