ADVERTISEMENT

ಕೊಪ್ಪಳ | ಗವಿಸಿದ್ಧೇಶ್ವರ ಮಠದ ಜಾತ್ರೆ: ಮಹಾರಥೋತ್ಸವ, ಮಹಾಸಂಗಮ

ಗವಿಮಠದ ಜಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿ, ಎಲ್ಲರಿಗೂ ಅಚ್ಚುಕಟ್ಟು ದಾಸೋಹ ವ್ಯವಸ್ಥೆ, ಬೆಳಿಗ್ಗೆಯಿಂದಲೇ ಜನಸಾಗರ

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 4:50 IST
Last Updated 16 ಜನವರಿ 2025, 4:50 IST
<div class="paragraphs"><p>ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ ಹಿಂದೂಸ್ತಾನ ಗಾಯಕ ಪಂಡಿತ್‌ ವೆಂಕಟೇಶ ಕುಮಾರ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು –ಪ್ರಜಾವಾಣಿ ಚಿತ್ರಗಳು</p></div>

ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ ಹಿಂದೂಸ್ತಾನ ಗಾಯಕ ಪಂಡಿತ್‌ ವೆಂಕಟೇಶ ಕುಮಾರ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು –ಪ್ರಜಾವಾಣಿ ಚಿತ್ರಗಳು

   

ಕೊಪ್ಪಳ: ಸೂರ್ಯ ತನ್ನ ನಿತ್ಯದ ಕೆಲಸ ಮುಗಿಸಿ ಮರೆಯಾಗುತ್ತಿದ್ದಂತೆ ಅಪಾರ ಸಂಖ್ಯೆಯ ಜನರ ಬದುಕಿಗೆ ಬೆಳಕು ನೀಡಿದ ಗವಿಸಿದ್ಧೇಶ್ವರರು ಎನ್ನುವ ಸೂರ್ಯ ಕೂಡ ಕೆಂಬಣ್ಣದ ಹೊಳಪಿನಲ್ಲಿ ರಥೋತ್ಸವದ ಹಿರಿಮೆಯಲ್ಲಿ ತೇರಿನಲ್ಲಿ ಸಾಗುತ್ತಿದ್ದ ಚಿತ್ರಣ ಕಂಡುಬಂದಿತು.

ಕೆಂಬಣ್ಣದ ಹೊಳಪು, ಜನರ ಸಂಗಮ, ಸಂಭ್ರಮ, ಗವಿಸಿದ್ಧೇಶ್ವರ ಮಹಾರಥೋತ್ಸವವನ್ನು ಕಣ್ತುಂಬಿಕೊಳ್ಳುವ ಖುಷಿಯಲ್ಲಿ ಮಿಂದೆದ್ದ ಲಕ್ಷಾಂತರ ಜನ ಬುಧವಾರ ನಡೆದ ಜಾತ್ರೆಯ ಸಡಗರದಲ್ಲಿ ಪಾಲ್ಗೊಂಡರು. ಉತ್ತರ ಭಾರತದ ಪ್ರಯಾಗರಾಜ್‌ನಲ್ಲಿ ಕುಂಭಮೇಳ ನಡೆಯುತ್ತಿದ್ದು ದಕ್ಷಿಣ ಭಾರತದ ಕುಂಭಮೇಳ ಎಂದು ಹೆಸರಾದ ಗವಿಸಿದ್ಧೇಶ್ವರ ಜಾತ್ರೆಯ ಮಹಾರಥೋತ್ಸವವೂ ವಿಜೃಂಭಣೆಯಿಂದ ನೆರವೇರಿತು. ಹೆಸರಾಂತ ಹಿಂದೂಸ್ತಾನಿ ಗಾಯಕ ಧಾರವಾಡದ ಪಂಡಿತ್ ಎಂ. ವೆಂಕಟೇಶ ಕುಮಾರ್ ಚಾಲನೆ ನೀಡಿದ ಬಳಿಕ ಗವಿಮಠದ ಮುಂಭಾಗದಲ್ಲಿರುವ ಆವರಣದಿಂದ ಪಾದಗಟ್ಟೆ ತನಕ ತೇರು ಎಳೆಯಲಾಯಿತು.

ADVERTISEMENT

ಗವಿಮಠದ ಆವರಣ ಹಾಗೂ ಸುತ್ತಮುತ್ತಲು ಹಲವು ದಿನಗಳಿಂದ ಜಾತ್ರೆಯ ಸಂಭ್ರಮ ಮನೆ ಮಾಡಿದೆ. ಬೆಳಗಿನ ಜಾವದಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಬಂದು ಕರ್ತೃ ಗದ್ದುಗೆಯ ದರ್ಶನ ಪಡೆದರು. ಗದ್ದುಗೆಗೆ ತರಹೇವಾರಿ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿದ್ದು ಭಕ್ತರು ಸರತಿಯಲ್ಲಿ ನಿಂತು ದರ್ಶನ ಪಡೆದರು. ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದಲೂ ಭಕ್ತರು ಬಂದಿದ್ದು, ಅನೇಕರು ಜಿಲ್ಲೆಯ ವಿವಿಧ ಭಾಗಗಳಿಂದ ಪಾದಯಾತ್ರೆ ಮೂಲಕವೂ ಬಂದಿದ್ದರು. ಮಾರ್ಗದುದ್ದಕ್ಕೂ ಅವರಿಗೆ ಭಕ್ತರು ನೀರು, ಊಟದ ವ್ಯವಸ್ಥೆ ಮಾಡಿದ್ದರು.

ಮಠಕ್ಕೆ ಅನೇಕ ವಯಸ್ಸಾದವರು, ಅನಾರೋಗ್ಯ ಸಮಸ್ಯೆ ಇರುವವರು ಬಂದಿದ್ದರು. ಅವರಿಗೆ ಗವಿಸಿದ್ಧೇಶ್ವರ ಮಠದ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು, ಸ್ವಯಂ ಸೇವಕರು ಕೈ ಹಿಡಿದು ಕರೆದುಕೊಂಡು ಹೋಗಿ ದರ್ಶನ ಮಾಡಿಸುತ್ತಿದ್ದ ಚಿತ್ರಣ ಕಂಡುಬಂದಿತು.

ವಿದ್ಯುತ್‌ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿರುವ ಮಠದ ಆವರಣ ನೋಡುವುದೇ ಕಣ್ಣಿಗೆ ಹಬ್ಬದಂತಿದೆ. ವಿದ್ಯುತ್‌ ದೀಪಗಳ ಬೆಳಕಿನಲ್ಲಿ ಭಕ್ತರು ಸೆಲ್ಫಿ ತೆಗೆದುಕೊಳ್ಳುತ್ತಿರುವುದು, ಕೈಲಾಸ ಮಂಟಪಕ್ಕೆ ತೆರಳುತ್ತಿರುವುದು, ತಂಡೋಪತಂಡವಾಗಿ ಬಂದು ಭಕ್ತಿ ಸಮರ್ಪಿಸುತ್ತಿರುವ ಚಿತ್ರಣ ಸಾಮಾನ್ಯವಾಗಿತ್ತು.

ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ವಿಜಯಪುರದ ಹುಬ್ಬಳ್ಳಿ ಷಣ್ಮುಖಾರೂಢಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ, ಮುಖ್ಯ ಅತಿಥಿಗಳಾಗಿ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಇದೆಲ್ಲವೂ ಮಹಾರಥೋತ್ಸವ ಭಾಗವಾದರೆ ಜಾತ್ರೆಗೆ ಬಂದವರಿಗೆ ಮಾಡಲಾಗಿದ್ದ ದಾಸೋಹದ ವ್ಯವಸ್ಥೆ ಜನರ ಮೆಚ್ಚುಗೆಗೆ ಕಾರಣವಾಯಿತು. ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಅನ್ನ, ಸಾಂಬಾರು, ಪಲ್ಲೆ, ಸಾವಯವ ಬೆಲ್ಲದ ಜಿಲೇಬಿ, ಮಾದಲಿ, ಖರ್ಚಿಕಾಯಿ ಹೀಗೆ ಅನೇಕ ಸಿಹಿ ತಿನಿಸುಗಳನ್ನು ಮಾಡಲಾಗಿತ್ತು. ಇನ್ನೊಂದೆಡೆ ಸ್ವಯಂ ಸೇವಕರು ತರಕಾರಿ ಹೆಚ್ಚುವ ಸೇವೆ ಮಾಡಿದರು. ಲಕ್ಷಾಂತರ ಸಂಖ್ಯೆಯಲ್ಲಿರುವ ಜೋಳದ ರೊಟ್ಟಿಗಳು ಗವಿಮಠದ ಜಾತ್ರೆಯ ದಾಸೋಹದ ವಿಶೇಷ. ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸ್ವಸಹಾಯ ಮಹಿಳಾ ಸಂಘದವರು ತಂಡ ರಚಿಸಿಕೊಂಡು ಬಂದು ದಾಸೋಹ ಸೇವೆ ಮಾಡಿದರು. ರೊಟ್ಟಿ ಹಾಗೂ ಸಿಹಿ ಪದಾರ್ಥ ಇರಿಸಲು ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಲಕ್ಷಾಂತರ ಭಕ್ತರು ಬಂದರೂ ಎಲ್ಲ ಕಡೆಯೂ ಸ್ವಚ್ಛತೆ ಕಾಪಾಡಿದ್ದು ವಿಶೇಷವಾಗಿತ್ತು.

ಶಾಸಕರಾದ ದೊಡ್ಡನಗೌಡ ಪಾಟೀಲ, ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಚಿವ ಹಾಲಪ್ಪ‌ ಆಚಾರ್‌ ಮಾಜಿ ಶಾಸಕ ಬಸವರಾಜ ದಢೇಸೂಗೂರು, ಜೆಡಿಎಸ್‌ ರಾಜ್ಯ ಕೋರ್‌ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್‌, ಜಿಲ್ಲಾಧಿಕಾರಿ ನಲಿನ್‌ ಅತುಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್.ಎಲ್.ಅರಸಿದ್ದಿ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆಯ, ಕಾರಾಗೃಹ ಇಲಾಖೆಯ ಎಸ್.ಪಿ. ಯಶೋದಾ ವಂಟಗೋಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗವಿಮಠ ಜಾತ್ರೆಯಲ್ಲಿ ಪಲ್ಲಕ್ಕಿ ಹೊತ್ತರು
ಗವಿಮಠಕ್ಕೆ ಬಂದ ಭಕ್ತರಿಗೆ ಮಾಡಲಾಗಿದ್ದು ಪ್ರಸಾದದ ವ್ಯವಸ್ಥೆ
ಕುಂಭಮೇಳವನ್ನೂ ಮೀರಿಸುವಂತೆ ಕೊಪ್ಪಳದ ಜಾತ್ರೆ ನಡೆಯುತ್ತದೆ. ಇಲ್ಲಿನ ಭಕ್ತರು ಗವಿಸಿದ್ಧೇಶ್ವರ ಪ್ರತಿರೂಪ. ಈಗಿನ ಸ್ವಾಮೀಜಿಯ ಸರಳತೆ ನಮ್ಮಲ್ಲಿ ಆಧ್ಯಾತ್ಮದ ಸಂಚಾರ ಮೂಡಿಸುತ್ತದೆ.
ಸಿದ್ಧಲಿಂಗ ಸ್ವಾಮೀಜಿ ತುಮಕೂರಿನ ಸಿದ್ಧಗಂಗಾ ಮಠ
12 ವರ್ಷಗಳಿಗೆಒಮ್ಮ ಕುಂಭಮೇಳ ನಡೆದರೆ ಕೊಪ್ಪಳದಲ್ಲಿ ಪ್ರತಿವರ್ಷವೂ ದಕ್ಷಿಣ ಭಾರತದ ಕುಂಭಮೇಳ ನಡೆಯುತ್ತದೆ. ಇಲ್ಲಿ ಅರಿವಿನ ಜಾತ್ರೆ ಸಮಾನತೆ ಸಹಬಾಳ್ವೆ ಕಾಣುತ್ತಿದ್ದೇವೆ.
ರಾಜಶೇಖರ ಹಿಟ್ನಾಳ ಸಂಸದ
ಗವಿಮಠ ಉತ್ತರ ಕರ್ನಾಟಕದಲ್ಲಿ ವಿಶೇಷವಾದ ಪುಣ್ಯಸ್ಥಳವಾಗಿದೆ. ಗವಿಸಿದ್ಧೇಶ್ವರರ ಆದರ್ಶ ಎಲ್ಲರೂ ಪಾಲಿಸಬೇಕು. ಈಗಿನ ಸ್ವಾಮೀಜಿ ಎಲ್ಲರ ಬದುಕಿಗೂ ಮಾದರಿ.
ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ
ವರ್ಷದಿಂದ ವರ್ಷಕ್ಕೆ ಜಾತ್ರೆಯ ವೈವಿಧ್ಯಮಯ ಬದಲಾವಣೆ ಕಾಡುತ್ತೇವೆ. ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತರು ಭಕ್ತಿ ಭಾವ ಮೆರೆದ ಎಲ್ಲರಿಗೂ ಒಳ್ಳೆಯದಾಗಲಿ.
ಅಮರೇಗೌಡ ಬಯ್ಯಾಪುರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ
ಅನೇಕ ಕಡೆ ಬಹಳಷ್ಟು ಜಾತ್ರೆಗಳು ನಡೆಯುತ್ತವೆ. ಅಲ್ಲಿ ವಿಐಪಿಗಳನ್ನು ನೋಡಲು ಜನ ಬರುತ್ತಾರೆ. ಆದರೆ ಇಲ್ಲಿ ಅತಿ ಗಣ್ಯ ವ್ಯಕ್ತಿಗಳು ಜನರನ್ನೇ ನೋಡಲು ಬರುತ್ತಾರಲ್ಲ ಅದೇ ವಿಶೇಷ.
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಮಠ
ಲಕ್ಷಾಂತರ ಜನ ಸಂಗಮ; ಗಾಢ ಮೌನ!
ರಥೋತ್ಸವ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರೂ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ‘ನಾನು ಒಂದೆರೆಡು ಮಾತುಗಳನ್ನಾಡಲೇ’ ಎಂದಾಗ ಜನ ಗಾಢ ಮೌನಕ್ಕೆ ಜಾರಿದರು. ‘ಬದುಕು ದೇವರು ನಮಗೆ ಕೊಟ್ಟ ಉಡುಗೊರೆಯಾಗಿದ್ದು ಈಗಿನ ಉಡುಗೊರೆಯನ್ನು ಚೆನ್ನಾಗಿ ಬಳಸಿಕೊಂಡರೆ ಮಾತ್ರ ಮತ್ತೊಂದು ಬದುಕಿನ ಉಡುಗೊರೆ ನೀಡುತ್ತಾನೆ. ಮನುಷ್ಯನಿಗೆ ಜೀವನ ಕೊಟ್ಟಿದ್ದಕ್ಕೆ ನಾವು ಬದುಕುವ ರೀತಿ ಕಂಡು ದೇವರೇ ಸಂತೋಷಪಡುವ ರೀತಿಯಲ್ಲಿ ಇರಬೇಕು’ ಎಂದರು. ’ಮನೆ ಕಟ್ಟುವಾಗ ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಬ್ಯಾಂಕ್‌ನವರು ಸಾಲ ಕೊಡುತ್ತಾರೆ. ಆದರೆ ನಿಮ್ಮಿಂದ ಯಾವ ಗ್ಯಾರಂಟಿಯನ್ನೂ ಪಡೆದುಕೊಳ್ಳದೇ ದೇವರು ಬದುಕು ಕೊಟ್ಟಿದ್ದಾರೆ. ಸೂರ್ಯ ಚಂದ್ರ ಎಂದೂ ವಿದ್ಯುತ್‌ ಬಿಲ್‌ ಕೇಳಿಲ್ಲ. ಸೈಕಲ್‌ ಗಾಲಿ ಪಂಚರ್‌ ಆದರೆ ಗಾಳಿ ತುಂಬಿಸುತ್ತೀರಿ. ದೇಹಕ್ಕೆ ನವರಂಧ್ರಗಳು ಇದ್ದರೂ ನೀವು ಪಂಚರ್‌ ಆಗುತ್ತೀರಿ. ನಿಸರ್ಗ ಸಂತೋಷವಾಗಿದ್ದರೂ ಮನುಷ್ಯ ಮಾತ್ರ ಅಳುವುದು ಬಿಟ್ಟಿಲ್ಲ. ಎಷ್ಟೇ ಸಂಕಷ್ಟ ಎದುರಾದರೂ ಕೊರಗಬಾರದು. ಭರವಸೆಯೇ ಬದುಕು ಆಗಬೇಕು’ ಎಂದು ಹೇಳಿದರು.
ಪಲ್ಲಕ್ಕಿ ಹೊತ್ತು ವಿಜಯೇಂದ್ರ ಭಕ್ತಿ ಅರ್ಪಣೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಲಕ್ಷಾಂತರ ಜನರ ನಡುವೆ ಮಹಾರಥೋತ್ಸವದ ವೇಳೆ ಪಲ್ಲಕ್ಕಿ ಹೊತ್ತು ಭಕ್ತಿ ಸಮರ್ಪಿಸಿದರು. ಈ ವೇಳೆ ಮಾತನಾಡಿ ‘ಗವಿಸಿದ್ದೇಶ್ವರ ಜಾತ್ರೆಗೆ ಬರಬೇಕು ಎನ್ನುವ ಅಪೇಕ್ಷೆಯಿತ್ತು. ಅದು ಈಗ ಈಡೇರಿದೆ. ಜಗತ್ತಿನ ಯಾವುದೇ ಪವಿತ್ರ ಸ್ಥಳದಲ್ಲಿ ಇಂತಹ ದೃಶ್ಯ ನೋಡಲು ಸಾಧ್ಯವಿಲ್ಲ. ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸೌಭಾಗ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.