ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಬುಧವಾರ ನಡೆಯಲಿದ್ದು, ಅದಕ್ಕೂ ಮೊದಲು ಜಿಲ್ಲೆಯಾದ್ಯಂತ ಸಂಭ್ರಮ ಮನೆ ಮಾಡಿದೆ. ಭಕ್ತಿಯಿಂದ ತಯಾರಿಸಿದ ತರಹೇವಾರಿ ತಿನಿಸುಗಳು ಹಾಗೂ ಅಡುಗೆ ಸಾಮಗ್ರಿಗಳನ್ನು ಮೆರವಣಿಗೆ ಮೂಲಕ ತಂದು ಜನ ಮಠಕ್ಕೆ ಅರ್ಪಿಸುತ್ತಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿ ಎಲ್ಲಿ ನೋಡಿದರೂ ಚಕ್ಕಡಿ, ಟ್ರಾಕ್ಟರ್‌ಗಳ ಸದ್ದು. ತೆಂಗಿನ ಗರಿಗಳಿಂದ ವಾಹನಗಳನ್ನು ಶೃಂಗರಿಸಿದ ಗವಿಸಿದ್ಧೇಶ್ವರ ಸ್ಮರಣೆಯ ಹಾಡುಗಳನ್ನು ಹಾಕುತ್ತ ಭಕ್ತಿಯಿಂದ ಭಜನೆ ಮಾಡುತ್ತ ಪಾದಯಾತ್ರೆ ಮೂಲಕ ಗವಿಮಠಕ್ಕೆ ಬರುವ ಭಕ್ತರ ಸಂಖ್ಯೆ ಅಪಾರ. ಮುಂದೆ ಮೆರವಣಿಗೆ ಸಾಗುತ್ತಿದ್ದರೆ ಹಿಂದೆ ವಾಹನಗಳಲ್ಲಿ ಜೋಳದ ರೊಟ್ಟಿ, ಶೇಂಗಾ ಹೋಳಿಗೆ ಸೇರಿದಂತೆ ಅನೇಕ ಸಿಹಿ ತಿನಿಸು, ಅಕ್ಕಿ, ಬೇಳೆ, ಕಾಯಿಪಲ್ಲೆಗಳನ್ನು ಸಮರ್ಪಿಸುತ್ತಿದ್ದಾರೆ.
ಜಿಲ್ಲೆಯ ವಿವಿಧ ಭಾಗಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮೂಲಕವೇ ಬಂದು ಗವಿಮಠಕ್ಕೆ ತಮ್ಮ ಸೇವೆ ಸಮರ್ಪಿಸುತ್ತಿರುವುದು ವಿಶೇಷ. ಗವಿಮಠದ ದಾಸೋಹ ಭವನದ ವಿಶಾಲವಾದ ಜಾಗದಲ್ಲಿ ಸಿಹಿ ಪದಾರ್ಥ, ಜೋಳದ ರೊಟ್ಟಿ, ತರಕಾರಿ, ಉಪ್ಪಿನಕಾಯಿ ಈಗ ಪ್ರತಿ ವಸ್ತುಗಳನ್ನು ಸಂಗ್ರಹಿಸಿಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಪಾದಯಾತ್ರೆ ಮೂಲಕ ಬರುವ ಅನೇಕ ಭಕ್ತರು ದ್ಯಕೀಯ ಹಾಗೂ ವಿಶ್ರಾಂತಿ ಸ್ಥಳದ ವ್ಯವಸ್ಥೆ ಮಾಡಿದ್ದಾರೆ. ಕುಷ್ಟಗಿ ರಸ್ತೆಯ ಮಾರ್ಗದಿಂದ ಪಾದಯಾತ್ರೆ ಮೂಲಕ ಬರುವ ಭಕ್ತರಿಗೆ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಪಾದಯಾತ್ರೆ ಸೇವಾ ಸಮಿತಿ ಭಾನಾಪುರ, ಗೌರಾ ಸಿಮೆಂಟ್ ಫ್ಯಾಕ್ಟರಿ, ಕಿನ್ನಾಳ ರಸ್ತೆ, ಕುಷ್ಟಗಿ ರಸ್ತೆ, ಸಿಂಧೋಗಿ ರಸ್ತೆ, ಗಂಗಾವತಿ ರಸ್ತೆಗಳಲ್ಲಿ ಸೌಲಭ್ಯ ಕಲ್ಪಿಸಿದ್ದಾರೆ.
ದಾಸೋಹದ ಮಹಾಪೂರ: ಮಹಾರಥೋತ್ಸವ ಸಮೀಪಿಸುತ್ತಿದ್ದಂತೆ ಮಠಕ್ಕೆ ಅಪಾರ ಪ್ರಮಾಣದಲ್ಲಿ ಆಹಾರ ಸಾಮಗ್ರಿ ಹಾಗೂ ತಿನಿಸುಗಳು ಹರಿದುಬರುತ್ತಿವೆ.
ಕುಷ್ಟಗಿ ತಾಲ್ಲೂಕಿನ ಹನುಮನಾಳ ಗ್ರಾಮ ಪಂಚಾಯಿತಿ ನರೇಗಾ ಕೂಲಿ ಕಾರ್ಮಿಕರು ಹತ್ತು ಸಾವಿರ ರೊಟ್ಟಿ, ಎರಡು ಕ್ವಿಂಟಲ್ ಕರ್ಚಿಕಾಯಿ, ಹನುಮನಾಳದ ಹಾಗೂ ತುಗ್ಗಲದೋಣಿಯ ಕ್ತರು 50 ಕೆ.ಜಿ. ಬರಲಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಹಾಗರಗುಂಡಿ ಗ್ರಾಮದಿಂದ 20 ಕ್ವಿಂಟಲ್ ಶೇಂಗಾ ಚಟ್ನಿಯನ್ನು ಕೈಯಿಂದ ಕುಟ್ಟಿ ಪುಡಿ ಮಾಡಿ ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ. ರೋಣ ತಾಲ್ಲೂಕಿನ ಇಟಗಿ ಗ್ರಾಮದ ಗವಿಸಿದ್ದೇಶ್ವರ ಶಾಖಾಮಠದ ಭಕ್ತರು 11 ಕ್ವಿಂಟಲ್ ಲಾಡು ನೀಡಿದ್ದಾರೆ.
ಜಾತ್ರೆಯಲ್ಲಿ ಇಂದಿನ ಕಾರ್ಯಕ್ರಮಗಳು
* ಮಂಗಳವಾರ ಸಂಜೆ 5 ಗಂಟೆಗೆ ಗವಿಮಠದ ಕೈಲಾಸಮಂಟಪದಲ್ಲಿರುವ ಅನ್ನಪೂರ್ಣೇಶ್ವರಿ ಗುಡಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ.
* ಜಾತ್ರೆಯ ಅಂಗವಾಗಿ ಜರುಗುವ ಮಹಾರಥೋತ್ಸವದ ಹಿಂದಿನ ದಿನ ಲಘು ರಥವನ್ನು ಎಳೆಯುವುದು ಸಂಪ್ರದಾಯವಾಗಿದ್ದು ಸಂಜೆ 5 ಗಂಟೆಗೆ ಮಠದ ಎದುರಿನ ಆವರಣದಲ್ಲಿ ಉಚ್ಛಾಯ ಎಳೆಯಲಾಗುತ್ತದೆ. ಆಕರ್ಷಕ ನಂದಿಕೋಲು ಪಂಜು ಇಲಾಲುಗಳು ವಾದ್ಯಗಳು ಸದ್ದು ಇರಲಿದೆ.
* ಸಂಜೆ 6 ಗಂಟೆಗೆ ಗವಿಮಠದ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಕೈಲಾಸ ಮಂಟಪದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಹೂವಿನಹಡಗಲಿಯ ಹಿರಿಶಾಂತವೀರ ಸ್ವಾಮೀಜಿ ಸಿದ್ದೇಶ್ವರ ಶಿವಾಚಾರ್ಯರು ಕುಕನೂರಿನ ಚನ್ನಮಲ್ಲ ಸ್ವಾಮೀಜಿ ಚಿಕ್ಕಮ್ಯಾಗೇರಿಯ ಗುರು ಶಾಂತವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು.
* ಬೆಂಗಳೂರಿನ ಶ್ರೀದೇವಿ ಪಾಟೀಲ್ ಅರ್ಪಿತ ಮತ್ತು ಅರ್ಚನ ಕುಂಬಾರ್ ಗಂಗಾವತಿಯ ಅಭಿನಯ ಬಳ್ಳಾರಿಯ ಭೂಮಿಕ ಜೆ.ಎಂ. ಶಿವಪುರದ ಲೇಖನಾ ಕಲ್ಗುಡಿ ಹರಪನಹಳ್ಳಿಯ ಅಮೃತ ಹಿರೇಸಿಂದೋಗಿಯ ಸುದೀಕ್ಷಾ ಯರಾಸಿ ಹೊಗರನಾಳದ ಸುಕೃತ ಅವರಿಂದ ಭರತನಾಟ್ಯ.
* ಹುಬ್ಬಳ್ಳಿಯ ಅವನೇಶ ನೀಲಗುಂದ ಇವರಿಂದ ಅಭಿನಯ ಕೊಪ್ಪಳದ ವಿಎಂಪಿ ಅವರಿಂದ ಸುಗಮ ಸಂಗೀತ ಸೊಲ್ಲಾಪುರದ ಶಿವಪೂಜಿ ಗಾಯನ ಕಾರ್ಯಕ್ರಮ ಜರುಗಲಿವೆ.
* ಗವಿಶ್ರೀ ಕ್ರೀಡಾಕೂಟದ ಅಂಗವಾಗಿ ಪುರುಷರು ಹಾಗೂ ಮಹಿಳೆಯರಿಗೆ ಬೆಳಿಗ್ಗೆ 6 ಗಂಟೆಗೆ ಕಿತ್ತೂರು ಚನ್ನಮ್ಮ ವೃತ್ತದಿಂದ ಗಡಿಯಾರ ಕಂಬದ ಮಾರ್ಗವಾಗಿ ಗವಿಮಠದವರೆಗೆ ಓಟದ ಸ್ಪರ್ಧೆ ನಡೆಯಲಿದೆ.
15 ಕೇಂದ್ರಗಳಲ್ಲಿ ವಸತಿ ವ್ಯವಸ್ಥೆ
ಭಕ್ತರ ವಾಸ್ತವ್ಯಕ್ಕಾಗಿ ಗವಿಮಠದ ಶಾಲಾ ಕಾಲೇಜು ಹಾಗೂ ವಿವಿಧ ಶಾಲಾ ಕಾಲೇಜು ಸಂಘ ಸಂಸ್ಥೆಗಳ ಕಲ್ಯಾಣ ಮಂಟಪ ಸಭಾಭವನಗಳಲ್ಲಿ ಒಟ್ಟು 15 ಕೇಂದ್ರಗಳಲ್ಲಿ ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚು ಭಕ್ತರಿಗೆ ವಸತಿ ಕಲ್ಪಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ವಸತಿ ಕೇಂದ್ರಗಳಲ್ಲಿ ಸ್ನಾನ ಶೌಚಾಲಯ ವ್ಯವಸ್ಥೆಯ ಜೊತೆಗೆ ಸೊಳ್ಳೆಬತ್ತಿ ಮೇಣದ ಬತ್ತಿ ಜಮಖಾನ ಹಾಗೂ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ವಸತಿ ನೀಡುವ ಪ್ರತಿಯೊಂದು ಸ್ಥಳ ಮತ್ತು ಕೊಠಡಿಗಳಲ್ಲಿ ಸಮರ್ಪಕ ವಿದ್ಯುತ್ ಸುರಕ್ಷತೆ ಮತ್ತು ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಗವಿಮಠದ ಆವರಣದಲ್ಲಿ ಉಚಿತ ವಸತಿ ನೋಂದಣಿ ಕೇಂದ್ರದ ವ್ಯವಸ್ಥೆಯಿದೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ. ಸಾರ್ವಜನಿಕರು ವಸತಿ ಸ್ಥಳಗಳಲ್ಲಿ ಹೆಚ್ಚಿನ ಮಾಹಿತಿಗೆ 9242181322 8310525457 9980288871 ಸಂಪರ್ಕಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.