
ಕೊಪ್ಪಳ: ಮೂರ್ನಾಲ್ಕು ದಿನಗಳಿಂದ ಗವಿಮಠದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಲಕ್ಷಾಂತರ ಭಕ್ತರು ಕಾಯುತ್ತಿರುವ ಮಹಾರಥೋತ್ಸವ ಸೋಮವಾರ ಸಂಜೆ 5.30ಕ್ಕೆ ನೆರವೇರಲಿದೆ. ಮೇಘಾಲಯದ ರಾಜ್ಯಪಾಲರಾದ ಕನ್ನಡಿಗ ಸಿ.ಎಚ್. ವಿಜಯಶಂಕರ್ ಅವರು ಮಹಾರಥೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಇದಕ್ಕೂ ಮೊದಲು ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಸೋಮವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಗವಿಸಿದ್ಧೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, 10.30ಕ್ಕೆ ಗವಿಮಠದ ಆವರಣದಲ್ಲಿ ಪೋಲಿಸ್ ಇಲಾಖೆಯಿಂದ ಶ್ವಾನದಳ, ಕರಾಟೆ, ದಾಲಪಟ ಪ್ರದರ್ಶನ ಜರುಗಲಿವೆ.
ಸಂಜೆ 5.30ಕ್ಕೆ ಮಹಾರಥೋತ್ಸವ ನಡೆಯಲಿದೆ. ಮಹಾರಥೋತ್ಸವ ನಂತರ ಮಠದ ಕೈಲಾಸ ಮಂಟಪದಲ್ಲಿ ನಡೆಯುವ ಭಕ್ತ ಹಿತಚಿಂತನ ಸಭೆ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಮೂರುಸಾವಿರ ಮಹಾಸಂಸ್ಥಾನ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಕಾಖಂಡಕಿ ಗುರುದೇವಾಶ್ರಮದ ಯೋಗಿಶ್ವರ ಸ್ವಾಮೀಜಿ ಪಾಲ್ಗೊಳ್ಳುವರು. ಶಿವಮೊಗ್ಗದ ಹಿಂದೂಸ್ತಾನಿ ಗಾಯಕ ವಿದ್ವಾನ್ ನೌಶಾದ್, ನಿಶಾದ್ ಹರ್ಲಾಪುರ್ ಅವರಿಂದ ಸ್ವರಸಂಧ್ಯಾ ಜುಗಲ್‌ಬಂದಿ ಮತ್ತು ಗಂಗಾವತಿಯ ನರಸಿಂಹ ಜೋಶಿ ಇವರಿಂದ ಹಾಸ್ಯ ಕಾರ್ಯಕ್ರಮ ಆಯೋಜನೆಯಾಗಿದೆ.
ಜಾತ್ರಾ ಮಹೋತ್ಸವದಲ್ಲಿ ಹಿರೇಸಿಂದೋಗಿ ಕಪ್ಪತ್ತೇಶ್ವರಮಠದ ಚಿದಾನಂದ ಸ್ವಾಮೀಜಿ, ಮೈನಳ್ಳಿ–ಬಿಕನಹಳ್ಳಿ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು, ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಶಿವಬಸವ ಸ್ವಾಮೀಜಿ, ಬಿಜಕಲ್ ಶಿವಲಿಂಗ ಸ್ವಾಮೀಜಿ, ಭಾಗ್ಯನಗರದ ಶಂಕರಮಠದ ಶಿವರಾಮಕೃಷ್ಣಾನಂದ ಸ್ವಾಮೀಜಿ, ಹೂವಿನಹಡಗಲಿ ಶಾಖಾ ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಸೇರಿದಂತೆ ಅನೇಕರು ಭಾಗವಹಿಸುವರು.
ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಸಂಸದರಾದ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಭಾಗಿ | ಸಂಜೆ 5.30ಕ್ಕೆ ಮಹಾರಥೋತ್ಸವ ನಿಗದಿ | ವಿವಿಧ ಕಲಾವಿದರಿಂದ ಸಂಗೀತ ಹಾಗೂ ಹಾಸ್ಯೋತ್ಸವ
ಬಾಳೆಹಣ್ಣು ಎಸೆಯದಿರಲು ಮನವಿ
ಜಾತ್ರೆಯ ಸಮಯದಲ್ಲಿ ಲಕ್ಷಾಂತರ ಭಕ್ತರು ಸೇರುವುದರಿಂದ ಜಾತ್ರಾ ಮಹೋತ್ಸವ ಆವರಣದಲ್ಲಿ ಜೋರಾಗಿ ಶಬ್ದ ಮಾಡುವ ಪೀಪಿ ಪುಂಗಿ ಇತ್ಯಾದಿಗಳನ್ನು ಬಳಸುವುದರಿಂದ ಮಕ್ಕಳು ವಯೋವೃದ್ಧರು ಮಹಿಳೆಯರು ಸಣ್ಣ ಮಕ್ಕಳು ಜಾತ್ರೆಗೆ ಆಗಮಿಸುವ ಭಕ್ತರಿಗೆ ಕಿರಿಕಿರಿ ಉಂಟಾಗುತ್ತದೆ. ಆದ್ದರಿಂದ ಮಾರಾಟ ಮಾಡಬಾರದು ಎಂದು ಗವಿಮಠದ ವತಿಯಿಂದ ಮನವಿ ಮಾಡಲಾಗಿದೆ. ಮಹಾರಥೋತ್ಸವ ಸಾಗುವ ಸಂಧರ್ಭದಲ್ಲಿ ಭಕ್ತರು ತಮ್ಮ ಭಕ್ತಿಯಿಂದ ಉತ್ತತ್ತಿ ಅರ್ಪಿಸುವುದು ಸಂಪ್ರದಾಯ. ಆದರೆ ಕೆಲವರು ಬಾಳೆಹಣ್ಣು ಎಸೆಯುವುದು ಹೆಚ್ಚಾಗುತ್ತಿದ್ದು ಮಕ್ಕಳು ಮಹಿಳೆಯರು ವೃದ್ಧರು ಭಕ್ತರು ಕಾಲು ಜಾರಿ ಬೀಳುವ ಸಂದರ್ಭವಿರುತ್ತವೆ. ಅಲ್ಲದೆ ಮಠದ ಆವರಣದಲ್ಲಿಯೂ ಸ್ವಚ್ಚತೆ ಕಾಪಾಡಲು ತೊಂದರೆಯಾಗುತ್ತದೆ. ಆದ್ದರಿಂದ ಬಾಳೆಹಣ್ಣು ಎಸೆಯಬಾರದು ಎಂದು ಮನವಿಯಲ್ಲಿ ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.