ADVERTISEMENT

ಕೆರೆಯು ಒಡ್ಡು ಒಡೆದಿದ್ದು ಯಾರು?: ಹೇಮಲತಾ ನಾಯಕ

ಪ್ರಜಾವಾಣಿ ವರದಿ ಪ್ರಸ್ತಾಪಿಸಿ ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 6:04 IST
Last Updated 1 ಮಾರ್ಚ್ 2026, 6:04 IST
ಹೇಮಲತಾ ನಾಯಕ
ಹೇಮಲತಾ ನಾಯಕ   

ಕೊಪ್ಪಳ: ನಗರದಲ್ಲಿರುವ ಐತಿಹಾಸಿಕ ಹುಲಿಕೆರೆಯ ಒಡ್ಡು ಒಡೆದಿದ್ದು ಯಾರು?, ಅಕ್ರಮವಾಗಿ ರಸ್ತೆ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು ಯಾರು? ಎನ್ನುವುದರ ಬಗ್ಗೆ ಸಮಗ್ರ ತನಿಖೆ ನಡೆಯಲಿ ಎಂದು ವಿಧಾಪರಿಷತ್‌ ಸದಸ್ಯೆ ಹೇಮಲತಾ ನಾಯಕ ಆಗ್ರಹಿಸಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚಿಗೆ ಹುಲಿಕೆರೆಗೆ ತೆರಳುವ ಮಾರ್ಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಳ್ಳಲಾದ ಆರೋಪ ಹೊತ್ತ ಮರಂ ರಸ್ತೆ ಬಗ್ಗೆ ಪ್ರಸ್ತಾಪಿಸಿದರು.

‘ಫೆ. 18ರಂದು ಕೆರೆಗೆ ತೆರಳುವ ಮಾರ್ಗದಲ್ಲಿ ನಿರ್ಮಿಸಿದ ರಸ್ತೆ ಗಮನಕ್ಕೆ ಬಂದಿದ್ದು, ಅಧಿಕಾರಿಗಳನ್ನು ಈ ಕುರಿತು ವಿಚಾರಿಸಿದ್ದೇನೆ. ಬೆಂಗಳೂರಿನಿಂದ ಇಲ್ಲಿಗೆ ಬರುವಷ್ಟರಲ್ಲಿ ಕೆರೆಯ ಒಡ್ಡು ಒಡೆದು ನೀರು ಹರಿಸಿ ಖಾಲಿ ಮಾಡಿ 30 ಅಡಿ ರಸ್ತೆ ನಿರ್ಮಿಸಿದ್ದರು. ನಾನು ಸ್ಥಳಕ್ಕೆ ತೆರಳುವ ಮೊದಲೇ ಪೊಲೀಸರಿಗೆ ಇದನ್ನು ಗಮನಕ್ಕೆ ತಂದಿದ್ದೇನೆ. ಪರಿಸ್ಥಿತಿ ಕೈ ಮೀರಿದ್ದನ್ನು ಕಂಡು ತಕ್ಷಣ ದಿಢೀರ್ ಪ್ರತಿಭಟನೆ ನಡೆಸಿದೆವು‌’ ಎಂದು ಹೇಳಿದರು.

ADVERTISEMENT

ಹೇಮಲತಾ ನಾಯಕ ಅವರು ಶಿವರಾತ್ರಿ ಉತ್ಸವದ ಕಾರ್ಯಕ್ರಮಕ್ಕೆ ಬಂದಾಗ ನೋಡಿಯೂ ಸುಮ್ಮನಿದ್ದು ಅಭಿವೃದ್ಧಿ ಕಾರ್ಯ ಸಹಿಸದೇ ಈಗ ಆರೋಪ ಮಾಡುತ್ತಿದ್ದಾರೆ ಎಂದು ಸಂಸದ ರಾಜಶೇಖರ ಹಿಟ್ನಾಳ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.

ಈ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಓದಿ ಮಾತನಾಡಿದ ವಿಧಾನಪರಿಷತ್‌ ಸದಸ್ಯೆ ‘ನಾನು ಶಿವರಾತ್ರಿ ಉತ್ಸವದಲ್ಲಿ‌ ಭಾಗಿಯಾಗಿಲ್ಲ. ದೇವಸ್ಥಾನಕ್ಕೆ ಮಾತ್ರ ಬಂದು ಹೋಗಿದ್ದೇನೆ. ಸುಮ್ಮನೇ ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ. ಇವರದೇ ಸರ್ಕಾರ‌ ಕೆರೆ ಸಂರಕ್ಷಣೆ ಕಾಯ್ದೆ ಜಾರಿ ಮಾಡಿದೆ. ಅದರಲ್ಲಿ ಮೂಲ ಕೆರೆ ಹೊರತುಪಡಿಸಿ 24 ಮೀಟರ್ ಬಫರ್ ಜೋನ್ ಇರಬೇಕು. ಈ ನಿಯಮ ಪಾಲಿಸಿಲ್ಲ’ ಎಂದರು.

‘ಬಿಜೆಪಿ ಅಭಿವೃದ್ಧಿ ವಿರೋಧಿ ಎಂದು ಸಂಸದರು ಬಿಂಬಿಸುತ್ತಿದ್ದಾರೆ. ಅವರಿಗೆ ನಿಜವಾಗಿಯೂ ಕಾಳಜಿಯಿದ್ದರೆ ಹುಲಿಕೆರೆ ವಿಷಯದಲ್ಲಿ ಅಕ್ರಮ ಎಸಗಿದವ ಮೇಲೆ ಕ್ರಮ ಕೈಗೊಳ್ಳಲಿ. ಹುಲಿಗಿ, ಅಂಜನಾದ್ರಿ, ಮಾರ್ಕಂಡೇಶ್ವರ ದೇವಸ್ಥಾನ ಸೇರಿದಂತೆ ಅನೇಕ ತಾಣಗಳನ್ನು ಅಭಿವೃದ್ಧಿಪಡಿಸಲಿ’ ಎಂದು ಹೇಮಲತಾ ನಾಯಕ ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.