
ಕಾರಟಗಿ: ‘ಮತಗಳ್ಳತನದಿಂದ ಅಧಿಕಾರ ಹಿಡಿಯುತ್ತಿರುವ ಬಿಜೆಪಿ ನಡೆಯ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ವ್ಯವಸ್ಥಿತ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮರೇಗೌಡ ಮಾಲಿಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಬ್ಲಾಕ್ ಹಾಗೂ ನಗರ ಕಾಂಗ್ರೆಸ್ ಘಟಕದಿಂದ ಶನಿವಾರ ನಡೆದ ಬಿಜೆಪಿಯ ವೋಟ್ ಚೋರಿ ವಿರೋಧಿಸಿ, ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಷ್ಟ್ರೀಯತೆ, ಧರ್ಮ, ಮೂಲಭೂತವಾದಿತನ, ಕಾರ್ಪೊರೇಟ್ ವಲಯದ ಸ್ನೇಹಿತವಾಗಿರುವ ಬಿಜೆಪಿಯು ಜನವಿರೋಧಿ ನೀತಿಯಿಂದ ಚುನಾವಣೆ ಎದುರಿಸಲಾಗದೇ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಯತ್ನಿಸುತ್ತದೆ. ಇದರ ವಿರುದ್ದ ಸಂಘಟಿತ ಹೋರಾಟ ಅನಿವಾರ್ಯ’ ಎಂದರು.
ಚುನಾವಣಾ ಆಯೋಗವನ್ನೇ ದುರ್ಬಲಗೊಳಿಸಿ, ಚುನಾವಣೆಗಳಲ್ಲಿ ಮತಗಳ್ಳತನದಿಂದ ಗೆಲುವು ಸಾಧಿಸಿ ಅಧಿಕಾರ ಪಡೆಯುತ್ತಿರುವ ಬಿಜೆಪಿ ಮುಖವಾಡವನ್ನು ನಮ್ಮ ನಾಯಕರು ಬಹಿರಂಗಪಡಿಸಿದ್ದಾರೆ. ತಮ್ಮ ಆಡಳಿತ ವೈಫಲ್ಯ, ಚುನಾವಣಾ ಅಕ್ರಮಗಳನ್ನು ಮುಚ್ಚಿ ಹಾಕಲು ಬಿಜೆಪಿ ಕಾರ್ಯನಿರತವಾಗಿದೆ. ರಾಷ್ಟ್ರೀಯ ನಾಯಕ ರಾಹುಲಗಾಂಧಿ ಹಮ್ಮಿಕೊಂಡಿರುವ ಹೋರಾಟಕ್ಕೆ ನಾವೆಲ್ಲರೂ ಕೈಜೋಡಿಸಬೇಕಿದೆ’ ಎಂದರು.
ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ನಾಗರಾಜ ಅರಳಿ ಮಾತನಾಡಿದರು.
ಪುರಸಭೆ ಸದಸ್ಯ ಹಿರೇಬಸಪ್ಪ ಸಜ್ಜನ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಯ್ಯಪ್ಪ ಉಪ್ಪಾರ, ಪ್ರಮುಖರಾದ ಚನ್ನಬಸಪ್ಪ ಸುಂಕದ, ಶರಣಯ್ಯಸ್ವಾಮಿ ಸಾಹುಕಾರ, ರವಿರಾಜ್ ಪಾಟೀಲ್ ನಂದಿಹಳ್ಳಿ, ಬಿ. ಶರಣಯ್ಯಸ್ವಾಮಿ, ಯಮನೂರಪ್ಪ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.