ADVERTISEMENT

ಕೊಪ್ಪಳ: ಶಿಕ್ಷಕರು 10, ಮಕ್ಕಳು 22, ಇದ್ದೂ ಇಲ್ಲದ ಉರ್ದು ಶಾಲೆ

ನಾರಾಯಣರಾವ ಕುಲಕರ್ಣಿ
Published 28 ಜನವರಿ 2026, 6:50 IST
Last Updated 28 ಜನವರಿ 2026, 6:50 IST
ಕುಷ್ಟಗಿಯ 4ನೇ ವಾರ್ಡ್‌ನಲ್ಲಿರುವ ಉರ್ದು ಮಾಧ್ಯಮದ ಸರ್ಕಾರಿ ಪ್ರೌಢಶಾಲೆ
ಕುಷ್ಟಗಿಯ 4ನೇ ವಾರ್ಡ್‌ನಲ್ಲಿರುವ ಉರ್ದು ಮಾಧ್ಯಮದ ಸರ್ಕಾರಿ ಪ್ರೌಢಶಾಲೆ   

ಕುಷ್ಟಗಿ: ಅಲ್ಲಿ ಮಂಜೂರಾಗಿದ್ದು 10 ಶಿಕ್ಷಕರ ಹುದ್ದೆಗಳು. ಮೂರೂ ತರಗತಿ ಸೇರಿ ಕೇವಲ 22 ವಿದ್ಯಾರ್ಥಿಗಳು. ಎಸ್‌ಎಸ್‌ಎಲ್‌ಸಿಗೆ ಕೇವಲ 4 ವಿದ್ಯಾರ್ಥಿನಿಯರು ಮಾತ್ರ. ಗಣಿತ ಪಾಠ ಮಾಡಬೇಕಿದ್ದ ಶಿಕ್ಷಕ ಬಿಇಒ ಕಚೇರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನೋಡಲ್‌ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ. ಉರ್ದು ಶಾಲೆಯಾಗಿದ್ದರೂ ಉರ್ದು ಶಿಕ್ಷಕರ ಹುದ್ದೆಯೇ ಖಾಲಿ. ಹೀಗಿರುವಾಗ ಈ ಶಾಲೆಯ ಅಗತ್ಯವಿದೆಯೆ? ಎಂಬ ಪ್ರಶ್ನೆ ಕೇಳಿಬಂದಿದೆ.

ಪಟ್ಟಣದ 4ನೇ ವಾರ್ಡ್‌ನಲ್ಲಿರುವ ಉರ್ದು ಮಾಧ್ಯಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಂಡುಬರುವ ಚಿತ್ರಣ ಇದು.

ಉರ್ದು ಮಾಧ್ಯಮ ಸರ್ಕಾರಿ ಪ್ರೌಢಶಾಲೆ ಮಕ್ಕಳ ಸಂಖ್ಯೆ ಕೊರತೆಯಿಂದ ಸೊರಗುತ್ತಿದೆ. ಗುಣಮಟ್ಟದ ಬೋಧನೆ ಇಲ್ಲದೆ ಮಕ್ಕಳ ಶೈಕ್ಷಣಿಕ ಭವಿಷ್ಯವೂ ಹಾಳಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಇದನ್ನು ಚುನಾಯಿತ ಪ್ರತಿನಿಧಿಗಳು, ಮೇಲಧಿಕಾರಿಗಳು ಗಮನಹರಿಸದಿರುವುದು ಅಚ್ಚರಿ ಮೂಡಿಸಿದೆ.

ADVERTISEMENT

ಕೆಲ ವರ್ಷಗಳ ಹಿಂದೆ 100ರ ಗಡಿ ದಾಟಿದ್ದ ಮಕ್ಕಳ ದಾಖಲಾತಿ ಸಂಖ್ಯೆ ಈಗ 22ಕ್ಕೆ ಇಳಿದಿದೆ. ಸದ್ಯ 8ನೇ ತರಗತಿಗೆ 6, 9ನೇ ತರಗತಿಯಲ್ಲಿ 12 ಮತ್ತು 10ನೇ ತರಗತಿಗೆ ಕೇವಲ 4 ಮಕ್ಕಳು ಮಾತ್ರ ಇದ್ದಾರೆ. ಹಾಜರಾತಿಯೂ ಅಷ್ಟಕ್ಕಷ್ಟೆ. ಶಿಕ್ಷಕರು ಇಲ್ಲಿ ಪಾಠ ಮಾಡಿದರೂ ನಡೆಯುತ್ತೆ, ಬಿಟ್ಟರೂ ಸರಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ ಎಂಬ ಅಸಮಾಧಾನ ಕೆಲ ಪಾಲಕರದ್ದು.

ಮಕ್ಕಳೇಕೆ ಬರುತ್ತಿಲ್ಲ. ತಾಲ್ಲೂಕಿನಲ್ಲಿ ಹನುಮಸಾಗರ ಮತ್ತು ಕುಷ್ಟಗಿಯಲ್ಲಿ ಮಾತ್ರ ಉರ್ದು ಪ್ರೌಢಶಾಲೆಗಳಿದ್ದು ಅವುಗಳಿಗೆ ಉರ್ದು ಮಾಧ್ಯಮ ಪ್ರಾಥಮಿಕ ಶಾಲೆಗಳ ಮಕ್ಕಳೇ ಆಸರೆ. ಹಿಂದೆ ಕುಷ್ಟಗಿ ಪ್ರೌಢಶಾಲೆಗೆ ಬರುತ್ತಿದ್ದ ತಾಲ್ಲೂಕಿನ ಬಹುತೇಕ ಮಕ್ಕಳು ಹನುಮಸಾಗರ ಶಾಲೆಗೆ ಹೋಗುತ್ತಿದ್ದಾರೆ. ಪಟ್ಟಣದಲ್ಲಿ ಬಹು ಮಾಧ್ಯಮ ಉರ್ದು ಮಾಧ್ಯಮ ಪ್ರಾಥಮಿಕ ಶಾಲೆ ಇದ್ದರೂ ಆಂಗ್ಲ ಮಾಧ್ಯವನ್ನೂ ಬೋಧಿಸುತ್ತಿರುವುದರಿಂದ ಮಕ್ಕಳು ಉರ್ದು ಮಾಧ್ಯಮದ ಹೊರತಾಗಿ ಆಂಗ್ಲ ಮಾಧ್ಯಮ ಖಾಸಗಿ ಅಥವಾ 6ನೇ ತರಗತಿಯಿಂದ 12ನೇ ತರಗತಿವರೆಗಿನ ಅಲ್ಲದೆ ಎಲ್ಲ ಅನುಕೂಲಗಳೂ ಇರುವ ಆಂಗ್ಲ ಮಾಧ್ಯಮದ ಮೌಲಾನಾ ಅಬ್ದುಲ್‌ ಆಜಾದ್ ಕಲಾಂ ಮಾದರಿ ಶಾಲೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಉರ್ದು ಸರ್ಕಾರಿ ಪ್ರೌಢಶಾಲೆಯತ್ತ ಮಕ್ಕಳು, ಪಾಲಕರು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲದೆ ಪಟ್ಟಣದ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸದ್ಯ 7ನೇ ತರಗತಿ ಒಂದು ಬ್ಯಾಚ್‌ ಮಾತ್ರ ಇದ್ದು ನಂತರದ ವರ್ಷ ಈ ಪ್ರೌಢಶಾಲೆಗೆ ಮಕ್ಕಳ ಕೊರತೆ ಇನ್ನೂ ಹೆಚ್ಚುತ್ತದೆ ಎಂದು ಮೂಲಗಳು ತಿಳಿಸಿವೆ.

ಪಟ್ಟಣದ ಅಲ್ಪಸಂಖ್ಯಾತ ಜನಸಂಖ್ಯೆಗೆ ಅನುಪಾತದ ಆಧಾರ ಗಮನಿಸುವುದಾದರೆ ಉರ್ದು ಮಾಧ್ಯಮದ ಆಯ್ಕೆ ಹೆಚ್ಚಾಗಬೇಕಿತ್ತು. ಆದರೆ ಬೇರೆ ಬೇರೆ ಕಡೆ ವಲಸೆ ಹೋಗುವುದು, ಕನ್ನಡ, ಆಂಗ್ಲ ಮಾಧ್ಯಮದತ್ತ ಆಸಕ್ತಿ ತೋರುತ್ತಿರುವುದೂ ಒಂದು ಕಾರಣ ಎಂದು ತಿಳಿಸಲಾಗಿದೆ.

ಮುಂದಿನ ವರ್ಷ ಮಕ್ಕಳ ಸಂಖ್ಯೆ ಹೆಚ್ಚಿಸಲು ಶಿಕ್ಷಕರೆಲ್ಲ ಸೇರಿ ಪಾಲಕರ ಮನ ಒಲಿಸಲು ಪ್ರಯತ್ನಿಸುತ್ತೇವೆ.
– ಯಮನಪ್ಪ ಚೂರಿ, ಮುಖ್ಯಶಿಕ್ಷಕ 
ಮಕ್ಕಳ ಸಂಖ್ಯೆ ಎಷ್ಟೇ ಇರಲಿ ಪಾಠದಿಂದ ವಂಚಿತರಾಗಬಾರದು. ಅಲ್ಲದೆ ಗಣಿತದ ವಿಷಯ ಶಿಕ್ಷಕಗೆ ತಾಕೀತು ಮಾಡುತ್ತೇವೆ.
– ಉಮಾದೇವಿ ಬಸಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ 

ಅಸಮರ್ಪಕ ಪಾಠ ಗುಣಮಟ್ಟ ಅಲಭ್ಯ

10ನೇ ತರಗತಿಗೆ ಕೇವಲ ನಾಲ್ಕೇ ಮಕ್ಕಳಿದ್ದರೂ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತಿಲ್ಲ ಶಿಕ್ಷಕರು ಕಾಟಾಚಾರಕ್ಕೆ ಕೆಲಸ ನಿರ್ವಹಿಸುತ್ತಿದ್ದಾರೆ. ಗಣಿತ ಶಿಕ್ಷಕರು ಪಾಠ ಮಾಡುವುದೇ ಅಪರೂಪ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೇವಲ ಎರಡು ತಿಂಗಳು ಉಳಿದಿದೆ. ಈ ಶಾಲೆಯಲ್ಲಿ ಬಡವರ ಮಕ್ಕಳು ಮಾತ್ರ ಇದ್ದು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಪಾಲಕರು ನೋವು ತೋಡಿಕೊಂಡರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಇಒ ಉಮಾದೇವಿ ಬಸಾಪುರ ಮಕ್ಕಳು ಬೇರೆ ಬೇರೆ ಮಾಧ್ಯಮದ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಮಕ್ಕಳ ಕೊರತೆಯಾಗಿದೆ. ಎಷ್ಟೇ ಮಕ್ಕಳಿದ್ದರೂ ಶಿಕ್ಷಕರು ಪಾಠ ಮಾಡಬೇಕು. ಬಿಇಒ ಕಚೇರಿಯಲ್ಲಿ ಪ್ರೌಢಶಾಲೆ ವಿಷಯ ಪರಿವೀಕ್ಷಕ (ಇಸಿಒ) ಹುದ್ದೆ ಖಾಲಿ ಇರುವುದರಿಂದ ಗಣಿತ ಶಿಕ್ಷಕರನ್ನು ಈ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಪಾಠದ ಜತೆ ಈ ಕೆಲಸವನ್ನೂ ನಿರ್ವಹಿಸುವುದು ಕಡ್ಡಾಯ. ಈ ಬಗ್ಗೆ ಆ ಶಿಕ್ಷಕರಿಗೆ ತಾಕೀತು ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.