ADVERTISEMENT

ಭ್ರಷ್ಟ ಅಧಿಕಾರಿಗಳ ವರ್ಗಾಯಿಸಿ: ಮುಖ್ಯಮಂತ್ರಿಗೆ ಪತ್ರ ಬರೆದ ಬಸವರಾಜ ರಾಯರಡ್ಡಿ

ಕೊಪ್ಪಳದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 20:01 IST
Last Updated 19 ಅಕ್ಟೋಬರ್ 2025, 20:01 IST
ಬಸವರಾಜ ರಾಯರಡ್ಡಿ
ಬಸವರಾಜ ರಾಯರಡ್ಡಿ   

ಕೊಪ್ಪಳ: ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ನಿರಂತರವಾಗಿ ನಷ್ಟವಾಗುತ್ತಿದೆ. ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಆದ ಶಾಸಕ ಬಸವರಾಜ ರಾಯರಡ್ಡಿ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

‘ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 85 ಕಿ.ಮೀ. ಗೂ ಹೆಚ್ಚು ತುಂಗಭದ್ರಾ ನದಿಯ ತಟವಿದ್ದು ನೈಸರ್ಗಿಕವಾಗಿ ಸಾಕಷ್ಟು ಮಣ್ಣು ಶೇಖರಣೆಯಾಗುತ್ತದೆ. ಪ್ರತಿದಿನ ಸುಮಾರು 100ರಿಂದ 150 ಟ್ರಕ್‌ ಮರಳು ಹಾಗೂ ಜಲ್ಲಿ ಗದಗ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಚಿತ್ರದುರ್ಗ ಹಾಗೂ ಬೆಂಗಳೂರು ನಗರಗಳಿಗೆ ಅನಧಿಕೃತವಾಗಿ ಸಾಗಣೆ ಮಾಡುತ್ತಿರುವುದರಿಂದ ರಾಜ್ಯ ಸರ್ಕಾರಕ್ಕೆ ಅಪಾರ ಪ್ರಮಾಣದಲ್ಲಿ ರಾಜಧನ ನಷ್ಟವಾಗುತ್ತಿದೆ. ಇದಕ್ಕೆ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರಣ ಎಂದು ಸಾರ್ವಜನಿಕರಿಂದ ದೂರು ಬಂದಿದೆ’ ಎಂದು ಪತ್ರದಲ್ಲಿ ರಾಯರಡ್ಡಿ ತಿಳಿಸಿದ್ದಾರೆ.

ಹಿರಿಯ ಭೂ ವಿಜ್ಞಾನಿಯಾಗಿರುವ ಪುಷ್ಪಲತಾ ಎಸ್‌. ಕವಲೂರು ಐದು ತಿಂಗಳಿಂದ ಕೆಲಸ ಮಾಡುತ್ತಿದ್ದು, ಇವರಿಗೆ ಕಾನೂನಿನ ಅರಿವು ಇಲ್ಲ, ಭೂ ವಿಜ್ಞಾನಿ ಸನತ್‌ ಸಿ., ಭ್ರಷ್ಟಾಚಾರದ ಕಿಂಗ್‌ಪಿನ್‌ ಎನ್ನುವ ದೂರು ಇದೆ. ಇನ್ನೊಬ್ಬ ಭೂವಿಜ್ಞಾನಿ ನಾಗರಾಜು ಎರಡು ವರ್ಷಗಳಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಭೂ ವಿಜ್ಞಾನಿ ಸೈಯುದ್ ಪಾಜಿಲ್‌ ಅವರನ್ನು ಜೂನ್‌ 30ರಂದು ವಿಜಯನಗರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದ್ದು ಅವರನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆ ಮಾಡಬೇಕು, ಸಹಾಯಕ ಎಂಜಿನಿಯರ್‌ ನವೀನ್ ಕುಮಾರ್‌ 2012–13ರಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಅಧೀಕ್ಷಕ ಮಲ್ಲಿಕಾರ್ಜುನ ಕಮ್ಮಾರ್ ಒಂಬತ್ತು ವರ್ಷಗಳಿಂದ,  ಕಿರಿಯ ಎಂಜಿನಿಯರ್ ಸಂಪ್ರೀತಾ ಹಿರೇಮಠ ಮೂರು ವರ್ಷಗಳಿಂದ, ಪ್ರಥಮ ದರ್ಜೆ ಸಹಾಯಕ ಹರೀಶ್‌ 18 ವರ್ಷಗಳಿಂದ ತ್ರಿವೇಣಿ ಒಡೆಯರ್ ಆರು ವರ್ಷಗಳಿಂದ ಹಾಗೂ ದ್ವಿತೀಯ ದರ್ಜೆ ಸಹಾಯಕಿ ಸುಕನ್ಯಾ ಹೊಸಮನಿ ಐದು ವರ್ಷಗಳಿಂದ ಜಿಲ್ಲೆಯಲ್ಲಿಯೇ ಇದ್ದಾರೆ. ಇವರೆಲ್ಲರನ್ನೂ ವರ್ಗಾವಣೆ ಮಾಡಬೇಕು’ ಎಂದು ಹೇಳಿದ್ದಾರೆ.

ADVERTISEMENT
ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕೆಲ ಸಿಬ್ಬಂದಿ ಅನೇಕ ವರ್ಷಗಳಿಂದ ಒಂದೆಡೆಯೇ ಉಳಿದಿದ್ದಾರೆ. ಅವರನ್ನು ವರ್ಗಾವಣೆ ಮಾಡುವಂತೆ ಪತ್ರ ಬರೆದಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕೂಡ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಸವರಾಜ ರಾಯರಡ್ಡಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ

ಇಲಾಖೆ ನಿರ್ದೇಶಕರಿಗೆ ಪತ್ರ

ಕೊಪ್ಪಳ: ಬಸವರಾಜ ರಾಯರಡ್ಡಿ ಪತ್ರ ಬರೆದ ದಿನವೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಬಳ್ಳಾರಿಯ ಉತ್ತರ ವಲಯದ ಅಧಿಕಾರಿಗಳು ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದು ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಾವಣೆಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಕುಕನೂರು ತಾಲ್ಲೂಕಿನ ತಳಕಲ್‌ ಗ್ರಾಮದ ಬೆಣ್ಣೆಕೆರೆಯ ಸರ್ವೆ ಸಂಖ್ಯೆ 277ರ 9.07 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಸಂದರ್ಭದಲ್ಲಿ ಉತ್ಪಾದನೆಯಾಗುವ ಮರಂ ಸಾಗಾಣಿಕೆ ಮಾಡಲು ರಾಜ್ಯ ಉಪಖನಿಜ ರಿಯಾಯಿತಿ ತಿದ್ದುಪಡಿ ನಿಮಯವಾಳಿ–2025ರ ಅಡಿ ಕಾರ್ಯಾನುಮತಿ ಕೊಟ್ಟಿದ್ದು ನಂತರ ಈ ಆದೇಶವನ್ನು ಮಾರ್ಪಾಡಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಈ ಮರಂ ಮಾರಾಟ ಮಾಡದೆ ಬಳಕೆ ಮಾಡುವ ಷರತ್ತಿಗೆ ಒಳಪಟ್ಟು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಕೊಪ್ಪಳ ಉಪವಿಭಾಗಕ್ಕೆ ಹಿಂಬರಹ ಜಾರಿ ಮಾಡಲಾಗಿದೆ.

ಆದರೆ ತಿದ್ದುಪಡಿ ನಿಯಮಾವಳಿಯಲ್ಲಿನ ಅಂಶಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಬೇಜಾವಾಬ್ದಾರಿಯಿಂದ ಕೆಲಸಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಕಂಡುಬಂದಿದೆ. ಆದ್ದರಿಂದ ಪುಷ್ಪಲತಾ ಕವಲೂರು ಹಾಗೂ ಇತರ ಕೆಲ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು ಎಂದು ಉತ್ತರ ವಲಯದ ಅಧಿಕಾರಿಗಳು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.