ಕೊಪ್ಪಳ: ‘ಪ್ರೇರಣಾ ಸಂಸ್ಥೆಯ ಮೂಲಕ ಸಂಸದ ರಾಜಶೇಖರ ಹಿಟ್ನಾಳ ಕ್ರಷರ್ ಉದ್ಯಮ ಹಿಡಿತಕ್ಕೆ ತೆಗೆದುಕೊಂಡು ಜನಸಾಮಾನ್ಯರು ಹಾಗೂ ಗುತ್ತಿಗೆದಾರರಿಗೆ ಸಮಸ್ಯೆ ಮಾಡುತ್ತಿದ್ದಾರೆ. ಅವರ ಈ ನಡೆ ಸರಿಯಲ್ಲ’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ‘ಜನ ಮತ ಚಲಾಯಿಸಿ, ತಮಗೆ ನೀಡಿರುವ ಅಧಿಕಾರವನ್ನು ಜನರ ಏಳಿಗೆಗೆ ಜನಪ್ರತಿನಿಧಿಯಾದವರು ಬಳಸಬೇಕು. ಆದರೆ, ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಸದ ರಾಜಶೇಖರ ಹಿಟ್ನಾಳ ಅವರು ಗ್ರಾಹಕರ ವಿರೋಧಿ ನೀತಿ ಆರಂಭಿಸುವ ಮೂಲಕ ಪ್ರಮುಖವಾಗಿ ಜನಸಾಮಾನ್ಯರಿಗೆ ಹೊರೆಯಾಗಿಸುವ ಕೆಲಸ ಮಾಡುತ್ತಿದ್ದಾರೆ’ ಎಂದಿದ್ದಾರೆ.
‘ಈವರೆಗೆ ₹600ರಿಂದ ₹700ಕ್ಕೆ ದೊರೆಯುತ್ತಿದ್ದ ಜಲ್ಲಿ ಕಲ್ಲು ಸಂಸದರ ನಡೆಯಿಂದ ಇನ್ನು ಮುಂದೆ ₹1400ರಿಂದ ₹1500 ದುಬಾರಿ ಬೆಲೆ ತೆರಬೇಕಾಗಿದೆ. ಇದರಿಂದ ನೇರ ಪರಿಣಾಮ ಈ ಭಾಗದ ಬಡವರು, ಮಧ್ಯಮ ವರ್ಗದವರಿಗೆ ತಟ್ಟಲಿದೆ. ತಮ್ಮದೇ ಒಡೆತನದ ಪ್ರೇರಣಾ ಎನ್ನುವ ಸಂಸ್ಥೆ ಸ್ಥಾಪಿಸಿ, ಅದರ ಮೂಲಕ ಕ್ರಷರ್ ಉದ್ಯಮಿದಲ್ಲಿನ ಜಲ್ಲಿಕಲ್ಲು ಸೇರಿ ಪ್ರಮುಖ 8 ವಸ್ತುಗಳನ್ನು ಖರೀದಿ ಮಾಡುವ ನಿಯಮ ಹೇಳಿರುವುದು ಎಷ್ಟರ ಮಟ್ಟಿಗೆ ಸರಿ?’ ಎಂದು ಪ್ರಶ್ನಿಸಿದ್ದಾರೆ. ಇದನ್ನು ಸರಿಪಡಿಸಬೇಕು ಇಲ್ಲವಾದರೆ ಪಕ್ಷದ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.