
ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಈಗಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಹೊಸದಾಗಿ ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ ನಗರದಲ್ಲಿ ನಡೆಯುತ್ತಿರುವ ಹೋರಾಟ ಶನಿವಾರ ‘ಶತಕ’ದ ದಿನಕ್ಕೆ ಕಾಲಿರಿಸಲಿದೆ.
ಕೊಪ್ಪಳ ತಾಲ್ಲೂಕಿನ ಹಾಲವರ್ತಿ, ಅಲ್ಲಾನಗರ, ಗಿಣಿಗೇರಿ, ಕನಕಾಪುರ, ಬೇವಿನಹಳ್ಳಿ, ಹಿರೇಬಗನಾಳ, ಕುಣಿಕೇರಿ, ಹಿರೇಕಾಸನಕಂಡಿ, ಬೆಳವಿನಾಳ ಹೀಗೆ ಅನೇಕ ಗ್ರಾಮಗಳಲ್ಲಿ ಸುತ್ತಾಡಿ ಬಂದರೆ ಕಪ್ಪುಕಣಗಳ ದೂಳು ಮೈಗೆಲ್ಲ ರಾಚುತ್ತದೆ. ಒಮ್ಮೆ ಹೋಗಿ ಬಂದರೆ ಉಸಿರಾಡಲು ಕಷ್ಟಕರವಾದ ಪರಿಸ್ಥಿತಿಯಿದ್ದರೂ ಕಾರ್ಖಾನೆಗಳ ಮಾಲಿನ್ಯವನ್ನು ನಿತ್ಯ ಉಸಿರಾಡುತ್ತಿರುವ ಈ ಗ್ರಾಮಗಳಲ್ಲಿ ಬದುಕುವುದೇ ಕಷ್ಟವಾಗುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಈಗಿರುವ ಕಾರ್ಖಾನೆಗಳಿಂದಲೇ ವ್ಯಾಪಕ ದೂಳು, ಮನೆ, ಅಡುಗೆ ಸಾಮಗ್ರಿ, ತರಕಾರಿ, ನಿತ್ಯ ಬಳಕೆ ವಸ್ತುಗಳ ಮೇಲೆ ಕಪ್ಪು ಕಣಗಳು ಬೀಳುತ್ತಿದ್ದು ಬಾಧಿತ ಗ್ರಾಮಗಳ ಜನರಿಗೆ ನಿತ್ಯ ಪರದಾಡುವಂತಾಗಿದೆ. ಇಷ್ಟೆಲ್ಲ ಸಂಕಷ್ಟದ ನಡುವೆಯೂ ಮತ್ತೆ ಈಗಿನ ಕಾರ್ಖಾನೆಗಳನ್ನು ವಿಸ್ತರಣೆ ಮಾಡಲು ಸರ್ಕಾರ ಅನುಮತಿ ಕೊಟ್ಟಿರುವುದು ಜನರ ಆತಂಕಕ್ಕೆ ಕಾರಣವಾಗಿದ್ದು, ಒಂದು ವೇಳೆ ಕಾರ್ಖಾನೆಗಳು ವಿಸ್ತರಣೆಯಾದರೆ ಜಿಲ್ಲಾಕೇಂದ್ರವನ್ನೇ ಸ್ಥಳಾಂತರಿಸಬೇಕಾಗುತ್ತದೆ ಎನ್ನುವ ಆತಂಕ ಜನರದ್ದಾಗಿದೆ.
ಈ ಆತಂಕದ ನಡುವೆಯೂ ಕಳೆದ ವರ್ಷ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯ ಸರ್ಕಾರ ಬಲ್ಡೋಟಾ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಕಂಪನಿ ಜೊತೆ ₹54 ಸಾವಿರ ಕೋಟಿ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದೆ. ಕಿರ್ಲೋಸ್ಕರ್ ಫೆರಸ್ ಲಿಮಿಟೆಡ್ ಜೊತೆ ₹3 ಸಾವಿರ ಕೋಟಿ ಹೂಡಿಕೆಗೆ ಮತ್ತು ಸೆರೆನಾಟಿಕಾ ರಿನಿವಬಲ್ಸ್ ಇಂಡಿಯಾ ಪ್ರವೈಟ್ ಲಿಮಿಟೆಡ್ ಜೊತೆ ₹43,975 ಕೋಟಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರವೇ ಲಿಖಿತ ಉತ್ತರ ನೀಡಿದೆ.
ಈ ಕಾರ್ಖಾನೆಗಳು ವಿಸ್ತರಣೆಯಾದರೆ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕಾಗಿ ಮೊದಲು ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಪ್ರತ್ಯೇಕವಾಗಿ ಹೋರಾಟಗಳನ್ನು ನಡೆಸುತ್ತಿದ್ದವು. ಕಳೆದ ವರ್ಷ ಫೆ.25ರಂದು ಕೊಪ್ಪಳ ಬಂದ್ ಮಾಡಲಾಗಿತ್ತು. ಬಳಿಕ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ನಿಷ್ಕ್ರೀಯರಾಗಿದ್ದರಿಂದ ಬಚಾವೊ ಸಮಿತಿ ಪದಾಧಿಕಾರಿಗಳೇ ಎರಡೂ ಸಂಘಟನೆಗಳನ್ನು ಒಳಗೊಂಡ ಜಂಟಿ ಕ್ರಿಯಾ ವೇದಿಕೆ ಆರಂಭಿಸಿ ಅನಿರ್ದಿಷ್ಟ ಧರಣಿ ಆರಂಭಿಸಿದರು. ಈ ಧರಣಿ ಶುಕ್ರವಾರಕ್ಕೆ 99 ದಿನಗಳನ್ನು ಪೂರ್ಣಗೊಳಿಸಿತು. 100ನೇ ದಿನದ ಹೋರಾಟಕ್ಕೆ ವಿವಿಧ ಮಠಗಳ ಸ್ವಾಮೀಜಿಗಳು, ಸಾಹಿತಿಗಳು ಪಾಲ್ಗೊಳ್ಳುವರು.
ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಏಮ್ಸ್‌ನಿಂದ ಬಾಧಿತ ಗ್ರಾಮಗಳ ಜನರ ಆರೋಗ್ಯ ಸಮೀಕ್ಷೆಯಾಗಬೇಕು. ಯಾವುದೇ ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ಕೊಡಬಾರದು, ಮುಖ್ಯಮಂತ್ರಿ ಆದಿಯಾಗಿ ಸಂಬಂಧಿಸಿದ ಸಚಿವರು ಗ್ರಾಮಗಳಿಗೆ ಭೇಟಿ ಕೊಡಬೇಕು ಎನ್ನುವುದು ಹೋರಾಟಗಾರರ ಬೇಡಿಕೆಯಾಗಿದೆ. ಇವುಗಳಿಗೆ ಸರ್ಕಾರ ಸ್ಪಂದಿಸುವುದೇ ಕಾದು ನೋಡಬೇಕಿದೆ.
- ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹೋರಾಟ ಮಾಡಬೇಕಾಗಿದೆ. ಮಕ್ಕಳು ಗಂಭೀರ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಕಾರ್ಖಾನೆಗಳ ಮಾಲಿನ್ಯ ವ್ಯಾಪಕವಾಗಿದ್ದು ಜೀವನ ದುಸ್ತರ ಎನಿಸುತ್ತಿದೆ.ಮಹೇಶ ವದ್ನಾಳ ಹಿರೇಬಗನಾಳ ಗ್ರಾಮದ ರೈತ
ಜಿಲ್ಲಾಡಳಿತದ ದಿಢೀರ್ ಭೇಟಿಯ ಗುಟ್ಟೇನು?
ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ಧಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಅವರು ಧರಣಿ ಸ್ಥಳಕ್ಕೆ ಶುಕ್ರವಾರ ದಿಢೀರ್ ಭೇಟಿ ನೀಡಿ ಹೋರಾಟಗಾರರ ಬೇಡಿಕೆಗಳನ್ನು ಆಲಿಸಿದ್ದು ಇದರ ಗುಟ್ಟೇನು?
ಎನ್ನುವ ಚರ್ಚೆ ನಡೆಯುತ್ತಿದೆ. ಜಿಲ್ಲಾಧಿಕಾರಿ ಅವರು ಹೋರಾಟಗಾರರ ಜೊತೆ ಮಾತನಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವ ಮತ್ತು ಬಾಧಿತ ಒಂದು ಗ್ರಾಮದಲ್ಲಿ ಸ್ಥಳೀಯ ಆರೋಗ್ಯ ಸಿಬ್ಬಂದಿಯಿಂದ ಜನರ ಆರೋಗ್ಯ ತಪಾಸಣೆ ನಡೆಸುವ ಭರವಸೆ ನೀಡಿದ್ದಾರೆ. ಆದರೆ ದಿಢೀರ್ ಭೇಟಿ ನೀಡಿದ್ದು ಯಾಕೆ ಎನ್ನುವುದು ಚರ್ಚೆಗೆ ಕಾರಣವಾಗಿದೆ. ‘ಜಿಲ್ಲಾಡಳಿತದಿಂದ ಬರುವ ಬಗ್ಗೆ ಮೊದಲೇ ಮಾಹಿತಿ ಇರಲಿಲ್ಲ. ದಿಢೀರ್ ಭೇಟಿ ಯಾಕೆ ಎಂಬುದೂ ಗೊತ್ತಾಗುತ್ತಿಲ್ಲ’ ಎಂದು ಅಲ್ಲಮಪ್ರಭು ಬೆಟ್ಟದೂರು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.