ADVERTISEMENT

ಕೊಪ್ಪಳ: ಉಪಾಹಾರ ತ್ಯಜಿಸಿ ಮಠಕ್ಕೆ ಧಾನ್ಯ ಸಮರ್ಪಣೆ ಮಾಡಿದ ಕೈದಿಗಳು

ಪ್ರಮೋದ ಕುಲಕರ್ಣಿ
Published 4 ಜನವರಿ 2026, 7:03 IST
Last Updated 4 ಜನವರಿ 2026, 7:03 IST
<div class="paragraphs"><p>ಕೊಪ್ಪಳದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಗವಿಮಠದ ಜಾತ್ರೆಗೆ ಧಾನ್ಯ ಅರ್ಪಿಸಿದ ಕ್ಷಣ&nbsp;&nbsp;</p></div>

ಕೊಪ್ಪಳದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಗವಿಮಠದ ಜಾತ್ರೆಗೆ ಧಾನ್ಯ ಅರ್ಪಿಸಿದ ಕ್ಷಣ  

   

ಕೊಪ್ಪಳ: ಗವಿಮಠದ ಜಾತ್ರೆಯ ಮಹಾದಾಸೋಹಕ್ಕೆ ಬಡವರು, ಶ್ರೀಮಂತರು, ರೈತರು, ಕೂಲಿ ಕಾರ್ಮಿಕರು ಹೀಗೆ ಎಲ್ಲ ವರ್ಗದ ಜನರೂ ತಮ್ಮ ಕೈಲಾದಷ್ಟು ಧನ, ಧಾನ್ಯ, ಕಟ್ಟಿಗೆ, ತರಕಾರಿ ಅರ್ಪಣೆ ಮಾಡುತ್ತಿದ್ದಾರೆ. ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾ ಕೈದಿಗಳು ಕೂಡ ಸ್ವಯಂಪ್ರೇರಿತವಾಗಿ ಒಪ್ಪೊತ್ತಿನ ಉಪಾಹಾರ ತ್ಯಾಗ ಮಾಡಿ ಜಾತ್ರೆಗೆ ದವಸ, ಧಾನ್ಯ ನೀಡಿದ್ದಾರೆ.      

ಅಕ್ಟೋಬರ್‌ನಲ್ಲಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ವಿಚಾರಣಾಧೀನ ಕೈದಿಗಳ ಮನಪರಿವರ್ತನೆ ವಿಚಾರವಾಗಿ ಮಾತನಾಡಿ ಸಾಂತ್ವನ ಹೇಳಿದ್ದರು. ಸ್ವಾಮೀಜಿಯ ಮಾತುಗಳಿಂದ ಪ್ರೇರಿತರಾಗಿದ್ದ ಅವರು ಮನಪರಿವರ್ತನೆ ಹೊಂದಿ ನಾವು ಕೂಡ ಮಠಕ್ಕೆ ಸಾಧ್ಯವಾದಷ್ಟು ಏನನ್ನಾದರೂ ನೀಡಬೇಕೆಂದು ಪರಸ್ಪರ ಚರ್ಚಿಸಿ ಅಕ್ಕಿ ಮತ್ತು ಗೋಧಿ ಹಿಟ್ಟನ್ನು ನೀಡುವ ತೀರ್ಮಾನ ಮಾಡಿದ್ದಾರೆ.

ADVERTISEMENT

ಜಿಲ್ಲಾ ಕಾರಾಗೃಹದಲ್ಲಿ ಅಕ್ಕಿ ಮತ್ತು ಗೋಧಿ ಹಿಟ್ಟಿಗೆ ಪೂಜೆ ಸಲ್ಲಿಸಿ ನಂತರ ಕಾರಾಗೃಹದ ಅಧೀಕ್ಷಕರು ಹಾಗೂ ಸಿಬ್ಬಂದಿಗೆ ಸಲ್ಲಿಕೆ ಮಾಡಿದ್ದು, ಇದನ್ನು ಗವಿಮಠಕ್ಕೆ ಕಿರುಕಾಣಿಕೆಯಾಗಿ ಸಮರ್ಪಣೆ ಮಾಡುವಂತೆ ಕೋರಿಕೊಂಡಿದ್ದಾರೆ. ಇದಕ್ಕಾಗಿ ಅವರು ತಮ್ಮ ಬೆಳಗಿನ ಉಪಾಹಾರ ತ್ಯಾಗ ಮಾಡಿ ಅದನ್ನು ಮಠಕ್ಕೆ ಅರ್ಪಿಸಿದ್ದಾರೆ ಎನ್ನುವುದು ವಿಶೇಷ.

ಕಾರಾಗೃಹದ ಜೈಲರ್ ರಾಮುಲು, ಸಹಾಯಕ ಜೈಲರ್ ಎಫ್.ಜಿ.ಬಾರೀಕೆರ್, ಸಿಬ್ಬಂದಿ ಎ.ಕೆ.ಹಾವೋಜಿ, ಎಸ್‌.ಆರ್‌. ರಾಠೋಡ, ಬಸವರಾಜ, ಸತೀಶ್ , ರಮೇಶ, ಉಮೇಶ್, ಶಿರಿನಾಬಾನು, ಶ್ರೀದೇವಿ ಜ್ಯೋತಿ, ಶ್ವೇತಾ, ನಿರ್ಮಲಾ, ನೇತ್ರಾವತಿ ಸೇರಿದಂತೆ ಅನೇಕರು ಇದ್ದರು.

ಹರಿದು ಬರುತ್ತಿದೆ ಧಾನ್ಯ: ಜಾತ್ರೆಯ ಮಹಾರಥೋತ್ಸವ ಜನವರಿ 5ರಂದು ನಡೆಯಲಿದ್ದು, ಮೇಘಾಲಯದ ರಾಜ್ಯಪಾಲರಾದ ಸಿ.ಎಚ್‌. ವಿಜಯಶಂಕರ ಅವರು ಉದ್ಘಾಟನೆ ನೆರವೇರಿಸುವರು. ಇದಕ್ಕೂ ಪೂರ್ವದಲ್ಲಿ ಮಠಕ್ಕೆ ಭಕ್ತರಿಂದ ಅಪಾರ ಪ್ರಮಾಣದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶೇಂಗಾ ಹೋಳಿಗೆ, ಮಾದಲಿ, ಜೋಳದ ರೊಟ್ಟಿಗಳು ಬರುತ್ತಿವೆ. ಭಕ್ತರು ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಚಕ್ಕಡಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಮೆರವಣಿಗೆ ಮೂಲಕ ಬಂದು ತಂದುಕೊಡುತ್ತಿದ್ದಾರೆ.

ಜಿಲ್ಲಾ ಕಾರಾಗೃಹದ ವಿಚಾರಣಾಧೀನ ಕೈದಿಗಳು ಸ್ವ ಇಚ್ಛೆಯಿಂದ ಉಪಹಾರ ಮಾಡದೆ ಉಪಹಾರಕ್ಕಾಗಿ ಬಳಸುತ್ತಿದ್ದ ಅಕ್ಕಿಯನ್ನು ಉಳಿಸಿ ಮಠಕ್ಕೆ ದೇಣಿಗೆ ನೀಡಿದ್ದಾರೆ. ಅವರು ಮಾಡಿದ ಅಳಿಲು ಸೇವೆ ಮನಪರಿವರ್ತನೆ ಹೊಂದಿದ್ದಕ್ಕೆ ಸಾಕ್ಷಿಯಂತಿದೆ.
ಅಂಬರೀಷ್ ಎಸ್. ಪೂಜಾರಿ ಅಧೀಕ್ಷಕರು ಜಿಲ್ಲಾ ಕಾರಾಗೃಹ

ಲಘು ರಥೋತ್ಸವ ಇಂದು

ಗವಿಮಠದ ಆವರಣದಲ್ಲಿ ಭಾನುವಾರ ಸಂಜೆ 5.30ಕ್ಕೆ ಉಚ್ಛಾಯಿ (ಲಘು ರಥೋತ್ಸವ) ನಡೆಯಲಿದೆ. ಮಹಾರಥೋತ್ಸವದ ಹಿಂದಿನ ದಿನ ಲಘು ರಥವನ್ನು ಎಳೆಯುವುದು ಸಂಪ್ರದಾಯ. ರಥೋತ್ಸವಕ್ಕೆ ಪೂಜೆ ಸಲ್ಲಿಸಿದ ನಂತರ ವಿಜೃಂಭಣೆಯಿಂದ ಆಕರ್ಷಕ ನಂದಿಕೋಲು ಪಂಜು ಇಲಾಲುಗಳು ವಾದ್ಯಗಳು ಲಘು ರಥೋತ್ಸವಕ್ಕೆ ಮೆರಗು ತಂದು ಕೊಡುತ್ತವೆ. ಮಹಾರಥೋತ್ಸವು ಸಾಂಗತ್ಯವಾಗಿ ಜರುಗಲಿ ಎನ್ನುವ ಕಾರಣಕ್ಕೆ ಇದನ್ನು ಆಚರಣೆ ಮಾಡಲಾಗುತ್ತದೆ. ಸಂಗೀತ ಕಾರ್ಯಕ್ರಮ: ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಇತರ ಕಲಾವಿದರಿಂದ ಭಾನುವಾರ ಸಂಜೆ 6 ಗಂಟೆಗೆ ಕೈಲಾಸ ಮಂಟಪದಲ್ಲಿಸಂಗೀತ ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.