
ಅಳವಂಡಿ: ಬಹಳಷ್ಟು ಸರ್ಕಾರಿ ನೌಕರರು ನಿವೃತ್ತಿ ನಂತರ ಆರಾಮಾಗಿ ಕಾಲ ಕಳೆಯಬಹುದು ಎನ್ನುವವರೇ ಹೆಚ್ಚು. ಆದರೆ ಇಲ್ಲೊಬ್ಬ ಶಿಕ್ಷಕ ನಿವೃತ್ತಿ ನಂತರವೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಾಠ ಮಾಡುತ್ತಿದ್ದು, ಮಾದರಿಯೆನಿಸಿದ್ದಾರೆ.
ಕೊಪ್ಪಳ ತಾಲ್ಲೂಕಿನ ಅಳವಂಡಿ ಹೋಬಳಿಯ ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು 200 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಸೆ. 31ರಂದು ಇದೇ ಶಾಲೆಯ ಕನ್ನಡ ಶಿಕ್ಷಕ ಕಾಶೀನಾಥ್ ಹಿರೇಮಠ ನಿವೃತ್ತಿ ಹೊಂದಿದ್ದಾರೆ.
ಇದರಿಂದ ಈ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡ ವಿಷಯ ಪಾಠ ಮಾಡಲು ಅತಿಥಿ ಶಿಕ್ಷಕರ ನೇಮಕಾತಿ ಅನಿವಾರ್ಯವಾಗಿತ್ತು. ಮಕ್ಕಳ ಫಲಿತಾಂಶ ಸುಧಾರಣೆಗೆ ನಿವೃತ್ತಿ ಹೊಂದಿದ ಕಾಶೀನಾಥ್ ಹಿರೇಮಠ ಅವರಿಗೆ ಮತ್ತೆ ಶಾಲೆಗೆ ಬಂದು ಮಕ್ಕಳಿಗೆ ಪಾಠ ಬೋಧನೆ ಮಾಡುವಂತೆ ಶಿಕ್ಷಕರು ಮನವಿ ಮಾಡಿದ್ದರು.
ಗ್ರಾಮೀಣ ಭಾಗದ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಾಗೂ ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಮತ್ತೆ ಅದೇ ಶಾಲೆಗೆ ಬಂದು ಒಂದು ವಾರದಿಂದ ದಿನಕ್ಕೆ ಎರಡ್ಮೂರು ತಾಸು ತರಗತಿ ತೆಗೆದುಕೊಳ್ಳುತ್ತಿದ್ದಾರೆ.
‘ಶಿಕ್ಷಣ ಇಲಾಖೆಯಲ್ಲಿ 31 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಮೂಲತಃ ಗದಗ ಜಿಲ್ಲೆಯ ಮುಂಡರಗಿ. ಶಾಲೆ ಕೂಡ ನನ್ನ ಊರಿನಿಂದ ಸಮೀಪದ ಇದೆ. ಹಾಗಾಗಿ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು, ಕನ್ನಡ ವಿಷಯದಲ್ಲಿ ಗ್ರಾಮೀಣ ಪ್ರದೇಶದ ಯಾವ ಮಕ್ಕಳು ಕೂಡ ಹಿಂದೆ ಉಳಿಯಬಾರದು ಎಂಬ ಉದ್ದೇಶದಿಂದ ಮಕ್ಕಳಿಗೆ ಪಾಠ ಮಾಡುತ್ತಿದ್ದೇನೆ’ ಎಂದು ಕಾಶೀನಾಥ್ ಹೇಳಿದರು.
‘ನಿವೃತ್ತಗೊಂಡಿದ್ದರಿಂದ ಅತಿಥಿ ಶಿಕ್ಷಕರ ನೇಮಕ ಮಾಡಲು ತಡವಾಗುತ್ತದೆ. ಮಕ್ಕಳು ಹಳಗನ್ನಡ, ವ್ಯಾಕರಣ ಸೇರಿದಂತೆ ಒಟ್ಟಾರೆಯಾಗಿ ಕನ್ನಡ ಭಾಷೆಯ ವಿಷಯದ ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಇದರಿಂದ ಮಕ್ಕಳು ಫಲಿತಾಂಶದಲ್ಲಿ ಕೂಡ ಹಿಂದುಳಿಯಬಾರದು ಎಂಬ ನಿಟ್ಟಿನಲ್ಲಿ ಪಠ್ಯಕ್ರಮದಂತೆ ಮಕ್ಕಳಿಗೆ ಪಾಠ ಬೋಧನೆ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.
ಎಲ್ಲಾ ವೃತ್ತಿಗಿಂತ ಶಿಕ್ಷಕರ ವೃತ್ತಿ ಪವಿತ್ರ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ನಿವೃತ್ತಿಗೊಂಡರೂ ಮತ್ತೆ ಸೇವೆಯಲ್ಲಿ ತೊಡಗಿರುವೆ. ಮತ್ತೆ ಮಕ್ಕಳೊಂದಿಗೆ ಬೆರೆಯುತ್ತಿರುವುದು ಖುಷಿ ತಂದಿದೆ. ಹೆಚ್ಚಿನ ಸೇವೆ ಮಾಡಲು ಯಾವುದೇ ಹಣ ಪಡೆಯುತ್ತಿಲ್ಲ.– ಕಾಶೀನಾಥ್ ಹಿರೇಮಠ, ನಿವೃತ್ತ ಕನ್ನಡ ಶಿಕ್ಷಕ
ನಿವೃತ್ತ ಶಿಕ್ಷಕ ಕಾಶೀನಾಥ್ ಹಿರೇಮಠ ಅವರು ನಮ್ಮ ಮನವಿಗೆ ಸ್ಪಂದಿಸಿ ಶಾಲೆಗೆ ಬಂದು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಕನ್ನಡ ವಿಷಯದಲ್ಲಿ ಮಕ್ಕಳಿಗೆ ಅನುಕೂಲವಾಗಿದೆ. ಎಸ್‌ಡಿಎಂಸಿ ಹಾಗೂ ಶಿಕ್ಷಕರು ಅವರಿಗೆ ಸಾಥ್ ನೀಡುತ್ತಿದ್ದೇವೆ.– ವೀರಣ್ಣ ಮಟ್ಟಿ, ಮುಖ್ಯ ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.