ಕೊಪ್ಪಳ: ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯಕ್ಕೆ ಜಿಲ್ಲಾಕೇಂದ್ರದಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಸಮ್ಮುಖದಲ್ಲಿ ಗಣತಿದಾರರು ಒಂದು ಮನೆಯ ದತ್ತಾಂಶಗಳನ್ನು ದಾಖಲಿಸಿದರು.
ಆದರೆ ಕೊಪ್ಪಳ ಗ್ರಾಮೀಣ, ಕುಷ್ಟಗಿ, ಯಲಬುರ್ಗಾ, ಗಂಗಾವತಿ, ಕಾರಟಗಿ ತಾಲ್ಲೂಕುಗಳಲ್ಲಿ ಒಟಿಪಿ ಮತ್ತು ಸರ್ವರ್ ಸಮಸ್ಯೆ ಕಾಡಿತು. ಕೈಪಿಡಿಯೇ ಬಂದಿಲ್ಲ, ಪರಿಕರ ಕೊಟ್ಟಿಲ್ಲ ಎನ್ನುವ ದೂರುಗಳು ಸಾಮಾನ್ಯವಾಗಿದ್ದವು. ‘ಪರಿಕರ ಕೊಡದ ಕಾರಣ ದಿನಪೂರ್ತಿ ಮನೆಯಲ್ಲಿಯೇ ಇರಬೇಕಾಯಿತು’ ಎಂದು ಶಿಕ್ಷಕರೊಬ್ಬರು ಹೇಳಿದರು.
ಸಮೀಕ್ಷೆಯ ಮೊದಲ ದಿನ ಪ್ರಗತಿಯ ಬಗ್ಗೆ ಜಿಲ್ಲಾಧಿಕಾರಿ ಸಂಜೆ ಅಧಿಕಾರಿಗಳ ಸಭೆ ನಡೆಸಿ ಗಣತಿದಾರರು ಎದುರಿಸಿದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಹೀಗಾಗಿ ಮೊದಲ ದಿನ ಗಣತಿ ಕಾರ್ಯ ಮಂದಗತಿಯಲ್ಲಿತ್ತು.
ಮಾಹಿತಿ ನೀಡಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಳ್ಳಲಾಗುತ್ತಿರುವ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಗಾಗಿ ಗಣತಿದಾರರು ತಮ್ಮ ಮನೆಗೆ ಬಂದಾಗ ಕುಟುಂಬದ ಮುಖ್ಯಸ್ಥರು ಎಲ್ಲಾ ಮಾಹಿತಿ ನೀಡಿ ಸಮೀಕ್ಷೆಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹೇಳಿದರು.
ಇಲ್ಲಿನ ವಾರ್ಡ್ ಸಂಖ್ಯೆ 29ರಲ್ಲಿ ಶಶಿಧರ್ ಸವಡಿ ಅವರ ಮನೆಯಿಂದ ಸಮೀಕ್ಷೆಗೆ ಮೊಬೈಲ್ ಆ್ಯಪ್ ಮೂಲಕ ಚಾಲನೆ ನೀಡಿ ಮಾಧ್ಯಮದವರ ಜೊತೆ ಮಾತನಾಡಿ ‘ಗಣತಿದಾರರು ಸಮೀಕ್ಷೆಯಲ್ಲಿ ವೈಯಕ್ತಿಕವಾಗಿ 30 ಪ್ರಶ್ನೆ ಮತ್ತು ಕುಟುಂಬಕ್ಕೆ 30 ಸೇರಿ ಒಟ್ಟು 60 ಪ್ರಶ್ನೆಗಳನ್ನು ಪ್ರತಿ ಮನೆಯಲ್ಲಿ ಕೇಳಿ, ದಾಖಲಿಸುವರು. ಸಮೀಕ್ಷೆ ಸಂದರ್ಭದಲ್ಲಿ ಸಾರ್ವಜನಿಕರು ಮುಖ್ಯವಾಗಿ ಆಧಾರ್ ಕಾರ್ಡ್, ಎಪಿಕ್ ಕಾರ್ಡ್, ಪಡಿತರ ಕಾರ್ಡ್ ಮತ್ತು ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು’ ಎಂದು ತಿಳಿಸಿದರು.
‘ಇದರ ಜೊತೆ ಜಾತಿ ಮತ್ತು ಆಧಾಯ ಪ್ರಮಾಣ ಪತ್ರ, 371(ಜೆ) ಪ್ರಮಾಣ ಪತ್ರ, ಕೌಶಲ್ಯ ಪ್ರಮಾಣ ಪತ್ರ ಅಥವಾ ಇನ್ನಿತರೆ ದಾಖಲೆಗಳಿದ್ದರೆ ಅವುಗಳನ್ನು ಮಾಹಿತಿಗಾಗಿ ಇಟ್ಟುಕೊಳ್ಳಬಹುದಾಗಿದೆ. ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಗಣತಿ ಮಾಡುವಂತೆ ಹಿಂದುಳಿದ ವರ್ಗಗಳ ಆಯೋಗವು ನಿರ್ದೇಶನ ನೀಡಿದೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ನಾಗಮಣಿ ಹೊಸಮನಿ, ಕೊಪ್ಪಳ ತಹಶೀಲ್ದಾರ್ ವಿಠ್ಠಲ ಚೌಗುಲಾ, ಗಣತಿದಾರರಾದ ಪೂರ್ಣಿಮಾ ಇದ್ದರು.
ಮಧ್ಯಾಹ್ನದ ಬಳಿಕ ಜಿಲ್ಲಾಕೇಂದ್ರದಲ್ಲಿ ದಾಖಲೆ ಸಂಗ್ರಹ ಆರಂಭ ಪರಿಕರಕ್ಕಾಗಿ ಮನೆಯಲ್ಲಿಯೇ ಕಾದುಕುಳಿತ ಸಿಬ್ಬಂದಿ ಸೋಮವಾರ ಸಂಜೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಜಿಲ್ಲಾಧಿಕಾರಿ
- ಸಮೀಕ್ಷೆಯ ಮೊದಲ ದಿನ ಸಣ್ಣ ಸಮಸ್ಯೆಗಳು ಕಾಣಿಸಿಕೊಂಡಿದ್ದು ಒಂದೆರೆಡು ದಿನಗಳಲ್ಲಿ ಸಮೀಕ್ಷಾ ಕಾರ್ಯ ಚುರುಕಾಗಲಿದೆ. ಸಿಬ್ಬಂದಿಗೆ ಸೂಕ್ತ ತರಬೇತಿಯೂ ನೀಡಲಾಗಿದೆ.ಸುರೇಶ ಇಟ್ನಾಳ ಜಿಲ್ಲಾಧಿಕಾರಿ
321980 ಮನೆಗಳಿಗೆ ಜಿಯೊ ಟ್ಯಾಗಿಂಗ್
ಕೊಪ್ಪಳ: ಜಿಲ್ಲೆಯಲ್ಲಿ ಅಕ್ಟೋಬರ್ 7ರ ತನಕ ಸಮೀಕ್ಷೆ ನಡೆಯಲಿದ್ದು ಇದಕ್ಕಾಗಿ ಜಿಲ್ಲೆಯಲ್ಲಿ 2969 ಗಣಿತಿದಾರರನ್ನು ಈಗಾಗಲೇ ನೇಮಕ ಮಾಡಿ ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ ಅಂದಾಜು 355361 ಮನೆಗಳಿದ್ದು 321980 ಮನೆಗಳಿಗೆ ಜೆಸ್ಕಾಂ ಸಿಬ್ಬಂದಿ ಜಿಯೊ ಟ್ಯಾಗ್ ಇನ್ ಮಾಡಿದ್ದಾರೆ. ಒಬ್ಬ ಗಣತಿದಾರರಿಗೆ ನಿರ್ದಿಷ್ಟವಾಗಿ ಇಂತಿಷ್ಟೇ ಮನೆಗಳು ಎಂದು ನಿಗದಿ ಮಾಡಿಲ್ಲ. ಆದರೆ 150ಕ್ಕಿಂತಲೂ ಕಡಿಮೆ ಮನೆಗಳಲ್ಲಿ ಸಮೀಕ್ಷೆ ಮಾಡಬೇಕು. ಬ್ಲ್ಯಾಕ್‌ವಾರು ಕೆಲವರಿಗೆ 90ರಿಂದ 100 ಮನೆಗಳು ಬಂದರೆ ಇನ್ನೂ ಕೆಲವರಿಗೆ ಕೆಲವು ಕಡಿಮೆ ಮನೆಗಳ ಸಮೀಕ್ಷೆ ಕಾರ್ಯ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.