ಪ್ರಾತಿನಿಧಿಕ ಚಿತ್ರ
ಕುಕನೂರು (ಕೊಪ್ಪಳ ಜಿಲ್ಲೆ): ಕುಕನೂರು ತಾಲ್ಲೂಕಿನ ತಳಕಲ್ ಹಾಗೂ ತಳಬಾಳ ಗ್ರಾಮಗಳಲ್ಲಿ ಶನಿವಾರ ಬೆಳಿಗ್ಗೆ ಬೀದಿ ನಾಯಿಯೊಂದು ದಾಳಿ ಮಾಡಿದ್ದರಿಂದ 30ಕ್ಕೂ ಹೆಚ್ಚು ಜನಗಾಯಗೊಂಡಿದ್ದಾರೆ. ಒಬ್ಬ ಬಾಲಕನ ಸ್ಥಿತಿ ಗಂಭೀರವಾಗಿದೆ.
ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದ ಎಂಟು ವರ್ಷದ ಯಮನೂರುಸಾಬ್ ಮಾಬುಸಾಬ್ ನದಾಫ್ ಎಂಬ ಮಗುವಿನ ಮೇಲೆ ನಾಯಿ ತೀವ್ರವಾಗಿ ದಾಳಿ ನಡೆಸಿ ಮಗುವನ್ನು ಗಂಭೀರವಾಗಿ ಗಾಯಗೊಳಿಸಿದೆ.
ದಾಳಿಯಿಂದ ಮಗುವಿನ ಕೆಳಗಿನ ತುಟಿಯು ಸಂಪೂರ್ಣವಾಗಿ ಹರಿದು ಹೋಗಿದೆ. ಮಗುವಿನ ತಲೆ, ಕೆನ್ನೆ ಮೇಲೆ ಗಂಭೀರ ಗಾಯಗಳಾಗಿವೆ.
ರಸ್ತೆಯ ಮೇಲೆ ಬೀದಿ ನಾಯಿ ಏಕಾಏಕಿಯಾಗಿ ಆಕ್ರಮಣ ನಡೆಸಿದೆ. ಕಂಡ ಕಂಡವರಿಗೆ ಕಡಿದಿದೆ. ಮಗುವಿನ ಚಿತ್ಕಾರ ಕೇಳಿದ ತಕ್ಷಣ ಅಕ್ಕಪಕ್ಕದವರು ಬಂದು ನಾಯಿಯನ್ನು ಹೊಡೆದೋಡಿಸಿದ್ದಾರೆ. ಇಲ್ಲದಿದ್ದರೆ ಬಾಲಕ ನಾಯಿಯ ದಾಳಿಗೆ ಬಲಿಯಾಗಬೇಕಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ
ಗಾಯಗೊಂಡಿದ್ದ ಬಾಲಕ ಹಾಗೂ ಸಾರ್ವಜನಿಕರನ್ನು ತಕ್ಷಣ ಸ್ಥಳಿಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಚ್ಚೆತ್ತ ಗ್ರಾಮ ಪಂಚಾಯಿತಿ ಅಧಿಕಾರಿಗಳು
ಬೀದಿನಾಯಿ ದಾಳಿಗೆ ಒಳಗಾದ ಬಾಲಕನ ಪೋಟೊ, ವಿಡಿಯೊ ಹಾಗೂ ಸುದ್ದಿ ಎಲ್ಲೆಡೆ ಹರಿದಾಡಿ, ಸಾರ್ವಜನಿಕರಿಂದ ಅಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ತಕ್ಷಣ ಕಾರ್ಯಪ್ರವೃತ್ತರಾದ ಪಿಡಿಒ ವೀರನಗೌಡ ಅವರು ತುರ್ತು ಸಭೆ ಕರೆದು ಬೀದಿನಾಯಿಗಳನ್ನು ಹಿಡಿದು, ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಚರ್ಚಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.