ADVERTISEMENT

ಕೊಪ್ಪಳದಲ್ಲಿ ವಿಮಾನ ನಿಲ್ದಾಣ: ಗಗನಕುಸುಮವಾದ ಗಗನಯಾನ

ಪ್ರಮೋದ ಕುಲಕರ್ಣಿ
Published 21 ಜುಲೈ 2025, 7:11 IST
Last Updated 21 ಜುಲೈ 2025, 7:11 IST
   

ಕೊಪ್ಪಳ: ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಕೊಪ್ಪಳ ಜಿಲ್ಲೆ ರಾಜ್ಯದಲ್ಲಿ ಪ್ರವಾಸೋದ್ಯಮದ ಹಬ್‌ ಆಗಿ ಬೆಳೆಯುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿರುವ ಅಂಜನಾದ್ರಿಯಿದೆ. ಈ ಎಲ್ಲ ಸ್ಥಳಗಳಿಗೆ ದೇಶಿ ಹಾಗೂ ವಿದೇಶಿ ಪ್ರಯಾಣಿಕರು ಕೂಡ ಸುಲಭವಾಗಿ ಭೇಟಿ ನೀಡಲು ಅನುಕೂಲವಾಗಬೇಕಿದ್ದ ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಇನ್ನೂ ಗಗನ ಕುಸುಮವಾಗಿದೆ.

ಜಿಲ್ಲಾಡಳಿತ ಮೂರು ವರ್ಷಗಳ ಹಿಂದೆಯೇ ಕೊಪ್ಪಳ ತಾಲ್ಲೂಕಿನ ಟಣಕನಕಲ್‌ ಗ್ರಾಮದ ಬಳಿ ಮೊದಲು ಹೊಸ ವಿಮಾನ ನಿಲ್ದಾಣಕ್ಕೆ 605 ಎಕರೆ ಜಾಗ ಗುರುತಿಸಿ ಮೂಲಸೌಕರ್ಯ ಅಭಿವೃದ್ಧಿಗೆ ‘ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ’ಕ್ಕೆ ಹೇಳಿದೆ. ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ನಿಗಮವನ್ನು ನೋಡಲ್‌ ಏಜೆನ್ಸಿಯಾಗಿ ರಾಜ್ಯ ಸರ್ಕಾರ ನೇಮಿಸಿತ್ತು.  

ಭಾರತ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ತಂಡ ಕೊಪ್ಪಳ ತಾಲ್ಲೂಕಿನ ತಾಳಕನಕಪುರ, ಬುಡಶೆಟ್ನಾಳ್, ಹಟ್ಟಿ ಮತ್ತು ಕಲಕೇರಿ ಗ್ರಾಮಗಳ ವ್ಯಾಪ್ತಿಯಲ್ಲಿ 382 ಎಕರೆ, ವಗದನಾಳ ಹಾಗೂ ಕುಕನೂರು ತಾಲ್ಲೂಕಿನ ಲಕಮಾಪುರ ಗ್ರಾಮ ವ್ಯಾಪ್ತಿಯಲ್ಲಿ 352 ಎಕರೆ ಜಮೀನಿನ ಜಾಗ ಪರಿಶೀಲನೆ ನಡೆಸಿದ್ದು ಕಾರ್ಯಸಾಧ್ಯತಾ ವರದಿ ಹಂತದಲ್ಲಿವೆ. ರಾಜ್ಯದಲ್ಲಿ ವಾಯುಯಾನ ಆಧಾರಿತ ಅಭಿವೃದ್ಧಿಗೆ ಉತ್ತೇಜನ ನೀಡಲು ಸಮಗ್ರ ನಾಗರಿಕ ವಿಮಾನಯಾನ ನೀತಿ ರೂಪಿಸುವುದಾಗಿ ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರ ತನ್ನ ಬಿಜೆಟ್‌ನಲ್ಲಿ ಘೋಷಿಸಿದ್ದರಿಂದ ಕೊಪ್ಪಳದಲ್ಲಿ ವಿಮಾನಗಳ ಸದ್ದು ಬೇಗನೆ ಆರಂಭವಾಗಬಹುದು ಎನ್ನುವ ನಿರೀಕ್ಷೆ ಇಲ್ಲಿನ ಜನಗಳದ್ದಾಗಿತ್ತು.

ADVERTISEMENT

ಕೊಪ್ಪಳ ಜಿಲ್ಲೆಯ ನೆರೆಯಲ್ಲಿ ವಿಶ್ವವಿಖ್ಯಾತ ಹಂಪಿಯಿದೆ. ಜಿಲ್ಲೆಯಲ್ಲಿ ಐತಿಹಾಸಿಕ ಆನೆಗೊಂದಿ, ಅಂಜನಾದ್ರಿ ಪರ್ವತ, ಹುಲಿಗೆಮ್ಮ ದೇವಸ್ಥಾನ, ಗವಿಸಿದ್ಧೇಶ್ವರ ಮಠ, ತುಂಗಭದ್ರಾ ಜಲಾಶಯ, ಹಂಪಿಯತ್ತ ಪ್ರವಾಸಿಗರು ಬರಬಹುದು, 200ಕ್ಕೂ ಹೆಚ್ಚು ಕೈಗಾರಿಕೆಗಳು ಇವೆ. ಆಟಿಕೆ ಕ್ಲಸ್ಟರ್‌ ಅಭಿವೃದ್ಧಿ ಆಗಿ ಉದ್ಯಮ, ವಾಣಿಜ್ಯೋದ್ಯಮದ ಬೆಳವಣಿಗೆಗೆ ಗಗನಯಾನ ಅನುಕೂಲವಾಗುತ್ತದೆ. ಆದರೆ ಮೂರು ವರ್ಷಗಳಾದರೂ ಕೊಪ್ಪಳ ವಿಮಾನ ನಿಲ್ದಾಣ ಆರಂಭವೇ ’ಟೇಕಾಫ್‌’ ಆಗಿಲ್ಲ. ಜನಪ್ರತಿನಿಧಿಗಳು ಕೂಡ ಈಗ ಜಿಲ್ಲೆಯ ಬಂದರೆ ನೆರೆಯ ಬಳ್ಳಾರಿ ಅಥವಾ ತಾಲ್ಲೂಕಿನ ಬಸಾಪುರದಲ್ಲಿರುವ ಖಾಸಗಿ ಏರ್‌ಸ್ಕ್ರಿಪ್ಟ್‌ ಅವಲಂಬನೆ ಅನಿವಾರ್ಯವಾಗಿದೆ. 

ವಿಮಾನಯಾನ ತ್ವರಿತವಾಗಿ ಆರಂಭವಾದರೆ ಪ್ರವಾಸೋದ್ಯಮ, ಸರಕು ಸಾಗಣೆ, ಕೈಗಾರಿಕೆಗಳ ಅಭಿವೃದ್ಧಿಗೆ ಉತ್ತೇಜನಕ್ಕೆ ಸಹಕಾರ ಸಿಕ್ಕಂತಾಗುತ್ತದೆ. ಕೊಪ್ಪಳ ತೋಟಗಾರಿಕಾ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ವಿಮಾನಯಾನ ಆರಂಭದಿಂದ ಜಿಲ್ಲೆಯಷ್ಟೇ ಅಲ್ಲದೇ ನೆರೆಯ ವಿಜಯನಗರ, ರಾಯಚೂರು ಜಿಲ್ಲೆಗಳ ಅಭಿವೃದ್ಧಿ, ಕೃಷಿ, ತೋಟಗಾರಿಕೆ ಕ್ಷೇತ್ರಗಳ ಪ್ರಗತಿ ಸಾಧ್ಯವಾಗುತ್ತದೆ.

ಕರಡಿ ಸಂಗಣ್ಣ ಅವರು ಸಂಸದರಾಗಿದ್ದಾಗ ವಿಮಾನ ನಿಲ್ದಾಣ ಘೋಷಣೆಯಾಗಿತ್ತು. ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ವಾಯುಯಾನ ಆರಂಭಿಸವು ಉದ್ದೇಶದಿಂದ ರಾಜ್ಯ ಸರ್ಕಾರ ಕೂಡ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದರಿಂದ ಜನರ ನಿರೀಕ್ಷೆಗಳು ಕೂಡ ಹೆಚ್ಚಾಗಿದ್ದವು. ಪ್ರಾಧಿಕಾರದ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿದ ಬಳಿಕ ಮುಂದೆ ಯಾವ ಪ್ರಗತಿಯೂ ಆಗಿಲ್ಲ.

ಕಾರ್ಯಸಾಧ್ಯತಾ ವರದಿ ಪರಿಶೀಲನೆ, ಅನುಮೋದನೆ, ಜಾಗ ಅಂತಿಮಗೊಳಿಸುವುರು, ತಾಂತ್ರಿಕ ಅಡಚಣೆಗಳು, ಭೂ ಸ್ವಾಧೀನ, ಕಾಮಗಾರಿ ಹೀಗೆ ಸಾಕಷ್ಟು ಕೆಲಸಗಳು ಬಾಕಿ ಇರುವುದಿಂದ ಸದ್ಯಕ್ಕಂತೂ ಕೊಪ್ಪಳದಿಂದ ವಿಮಾನಯಾನ ಗಗನ ಕುಸುಮವೇ. ವಿಮಾನ ನಿಲ್ದಾಣಕ್ಕಾಗಿ ಒಂದಷ್ಟು ವರ್ಷ ಧ್ವನಿ ಎತ್ತಿದ್ದ ಹೋರಾಟಗಾರರು ಈಗ ಮೌನವಾಗಿದ್ದಾರೆ.

ರಾಜಶೇಖರ ಹಿಟ್ನಾಳ
ಉಡಾನ್‌ ಯೋಜನೆಯಡಿ ಮೂರು ವರ್ಷಗಳ ತನಕ ಮಾತ್ರ ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ. ಆದ್ದರಿಂದ ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಆರಂಭ ವಿಳಂಬವಾಗುತ್ತಿದೆ. ಸಬ್ಸಿಡಿ ಹತ್ತು ವರ್ಷಕ್ಕೆ ಏರಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ
ರಾಜಶೇಖರ ಹಿಟ್ನಾಳ ಸಂಸದ 
ವಿಮಾನ ನಿಲ್ದಾಣಕ್ಕೆ ಜಿಲ್ಲೆಯಲ್ಲಿ ಜಾಗ ಅಂತಿಮಗೊಳಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತ್ವರಿತವಾಗಿ ಕಾಮಗಾರಿ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಕೇಂದ್ರಕ್ಕೆ ಈ ಕುರಿತು ಪತ್ರ ಬರೆಯುವೆ  
ಅಶೋಕಸ್ವಾಮಿ ಹೇರೂರು ಅಧ್ಯಕ್ಷ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ
ವಿಮಾನ ಸೇವೆ ಎಷ್ಟು ಬೇಗ ಆರಂಭವಾಗುತ್ತದೆ ಅಷ್ಟು ವೇಗವಾಗಿ ವಾಣಿಜ್ಯ ವಹಿವಾಟು ಹಾಗೂ ಜಿಲ್ಲೆಯ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ವಿಮಾನ ನಿಲ್ದಾಣ ಆರಂಭಕ್ಕೆ ತ್ವರಿತ ಕ್ರಮವಾಗಬೇಕು
ಶ್ರೀನಿವಾಸ ಗುಪ್ತಾ ಕೂದಲೋದ್ಯಮಿ
ಉಡಾನ್‌ ಯೋಜನೆ ಹತ್ತು ವರ್ಷ ವಿಸ್ತರಣೆ
ದೇಶದ ಸಾಮಾನ್ಯ ನಾಗರಿಕನೂ ವಿಮಾನಯಾನ ಮಾಡಲಿ ಎನ್ನುವ ಮಹಾತ್ವಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರ ಈ ಸಲದ ಬಜೆಟ್‌ನಲ್ಲಿ ಉಡಾನ್‌ ಯೋಜನೆಯನ್ನು ಪರಿಷ್ಕರಣೆ ಮಾಡಿದ್ದು ಮುಂದಿನ ಹತ್ತು ವರ್ಷಗಳಿಗೆ ವಿಸ್ತರಣೆ ಮಾಡಿದೆ. 20 ಹೊಸ ಪ್ರದೇಶಗಳಿಗೆ ವಾಯುಯಾನ ಆರಂಭವಿಸುವ ಗುರಿ ಹೊಂದಿದೆ. ಆದರೆ ಈ ಯೋಜನೆಗೆ ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ. 32ರಷ್ಟು ಕಡಿಮೆಯಾಗಿದೆ. ₹540 ಕೋಟಿಯನ್ನು ಈ ಯೋಜನೆಗೆ ಮೀಸಲಿಡಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ₹800 ಕೋಟಿ ನೀಡಲಾಗಿತ್ತು. ಉಡಾನ್‌ನಿಂದ ಪ್ರಾದೇಶಿಕ ವಿಮಾನಯಾನ ಸಂಸ್ಥೆಗಳ ಹುಟ್ಟು ಮತ್ತು ಬೆಳವಣಿಗೆಗೆ ಸಾಧ್ಯವಾಗುತ್ತದೆ. ಕ್ರಮೇಣವಾಗಿ ಉದ್ಯೋಗ ಸೃಷ್ಟಿ ಮತ್ತು ಪ್ರವಾಸೋದ್ಯಮದ ಪ್ರಗತಿಗೆ ಕಾರಣವಾಗುತ್ತದೆ ಎನ್ನುವುದು ಕೇಂದ್ರದ ಉದ್ದೇಶವಾಗಿದೆ. ಈ ಯೋಜನೆಯಡಿ ಪ್ರಸ್ತುತ ದೇಶದಲ್ಲಿ 90 ವಿಮಾನ ನಿಲ್ದಾಣಗಳು 625 ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಡಾನ್‌ ಯೋಜನೆ 2016ರಲ್ಲಿ ಆರಂಭವಾಗಿತ್ತು.
ಕಾಮಗಾರಿ ಆರಂಭಕ್ಕೆ ವಿಳಂಬ: ಕಾರಣವೇನು?
ಉಡಾನ್‌ ಯೋಜನೆಯಡಿ ವಿಮಾನಯಾನ ಆರಂಭವಾದರೆ ಕೇಂದ್ರ ಸರ್ಕಾರದಿಂದ ವಿಮಾನ ಪ್ರಯಾಣ ದರಕ್ಕೆ ಸಬ್ಸಿಡಿ ನೀಡಲು ಕಾರ್ಯಸಾಧ್ಯತಾ ಅಂತರ ನಿಧಿ ಟಿಕೆಟ್‌ಗಳ ಮೇಲಿನ ಸೇವಾ ತೆರಿಗೆಯಲ್ಲಿ ರಿಯಾಯಿತಿ ಉಡಾನ್-ಆರ್‌ಸಿಎಸ್ ವಿಮಾನಗಳ ಕೋಡ್ ಹಂಚಿಕೆಗೆ ಅವಕಾಶ ರಾಜ್ಯ ಸರ್ಕಾರದಿಂದ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಉಚಿತ ಭೂಮಿ ಒದಗಿಸುವುದು ನೀರು ವಿದ್ಯುತ್ ಮತ್ತು ಇತರ ಉಪಯುಕ್ತತೆಗಳನ್ನು ಕಡಿಮೆ ದರದಲ್ಲಿ ನೀಡುವುದು ಲ್ಯಾಂಡಿಂಗ್ ಪಾರ್ಕಿಂಗ್ ಅಥವಾ ಇತರ ಶುಲ್ಕಗಳ ವಿನಾಯಿತಿ ಟರ್ಮಿನಲ್ ನ್ಯಾವಿಗೇಷನ್ ಲ್ಯಾಂಡಿಂಗ್ ಶುಲ್ಕ ವಿನಾಯಿತಿ ಹೀಗೆ ಅನೇಕ ಸೌಲಭ್ಯಗಳು ಸಿಗುತ್ತವೆ. ಪ್ರಸ್ತುತ ನಿಯಮಗಳ ಪ್ರಕಾರ ಉಡಾನ್‌ ಯೋಜನೆಗೆ ಕೇಂದ್ರದಿಂದ ಈ ಸೌಲಭ್ಯಗಳು ಮೂರು ವರ್ಷಗಳಿಗೆ ಮಾತ್ರ ಸೀಮಿತವಾಗಿವೆ. ಮೂರು ವರ್ಷ ಅವಧಿ ಮುಗಿದ ಬಳಿಕ ವಿಮಾನಯಾನ ಕಂಪನಿಗಳು ವಾಪಸ್‌ ಹೋದರೆ ನಿಲ್ದಾಣ ಇದ್ದೂ ಇಲ್ಲದಂತಾಗುತ್ತದೆ. ಆದ್ದರಿಂದ ಮೂರನೇ ದರ್ಜೆಯ ನಗರಗಳಲ್ಲಿ ಉಡಾನ್‌ ಯಶಸ್ವಿಯಾಗಲು ಸೌಲಭ್ಯಗಳ ಮೂರು ವರ್ಷದ ಗರಿಷ್ಠ ಮಿತಿಯನ್ನು ತೆಗೆದು ಹಾಕಬೇಕಿದೆ ಎನ್ನುತ್ತಾರೆ ಇಲ್ಲಿನ ಹೋರಾಟಗಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.