ಕೊಪ್ಪಳದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ ರಸಗೊಬ್ಬರ ಖರೀದಿಸಲು ಸರತಿಯಲ್ಲಿ ನಿಂತಿದ್ದ ರೈತರು
–ಪ್ರಜಾವಾಣಿ ಚಿತ್ರ
ಕೊಪ್ಪಳ: ಮತ್ತೆ ಮಳೆ ಆರಂಭವಾಗಿರುವುದರಿಂದ ಯೂರಿಯಾ ರಸಗೊಬ್ಬರ ಖರೀದಿಸಲು ರೈತರು ಇಲ್ಲಿನ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ ಸಾಕಷ್ಟು ಸಂಖ್ಯೆಯಲ್ಲಿ ನಿಂತಿದ್ದರು. ಇದಕ್ಕೂ ಮೊದಲು ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ಸಕಾಲದಲ್ಲಿ ಗೊಬ್ಬರ ಪೂರೈಸಬೇಕು ಎಂದು ಆಗ್ರಹಿಸಿದರು.
ಗಂಜ್ ವೃತ್ತದ ಬಳಿ ದಿಢೀರನೆ ವಾಹನಗಳನ್ನು ತಡಿದು ಪ್ರತಿಭಟನೆ ನಡೆಸಿದ್ದರಿಂದ ಪೊಲೀಸರು ಹಾಗೂ ರೈತರ ನಡುವೆ ಮಾತಿಕ ಚಕಮಕಿ ನಡೆಯಿತು. ಬಳಿಕ ಪೊಲೀಸರು ಸಮಾಧಾನಪಡಿಸಿದರು. ಜುಲೈ ಎರಡನೇ ವಾರದಲ್ಲಿ ಉತ್ತಮ ಮಳೆಯಾಗಿದ್ದರಿಂದ ಈಗ ಎರಡನೇ ಬಾರಿ ರಸಗೊಬ್ಬರ ಹಾಕಬೇಕಾಗಿದೆ. ಆದ್ದರಿಂದ ಸಂಘ ಆವರಣದಿಂದ ರಸ್ತೆಯ ತನಕ ಜನ ಸರತಿಯಲ್ಲಿ ನಿಂತಿದ್ದರು.
ಪ್ರತಿ ಆಧಾರ್ ಕಾರ್ಡ್‌ಗೆ ಎರಡು ಚೀಲ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದ್ದರೂ, ಕೆಲವು ಹಮಾಲರು ಹಲವು ಚೀಲಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ರೈತರು ಆರೋಪಿಸಿದರು. ಇದರ ಬಗ್ಗೆ ನಿಗಾ ವಹಿಸುವಂತೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಪೊಲೀಸರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಆಗಿನಿಂದ ಪ್ರತಿಯೊಬ್ಬರಿಗೆ ಪೊಲೀಸ್ ಕಣ್ಗಾವಲಿಯಲ್ಲಿ ರಸಗೊಬ್ಬರ ವಿತರಣೆ ಮಾಡಲಾಯಿತು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಜಿಲ್ಲಾಧಿಕಾರಿ ‘ಜಿಲ್ಲೆಗೆ ಇದುವರೆಗೆ ಒಟ್ಟು 40 ಸಾವಿರ ಮೆಟ್ರಿಕ್ ಟನ್‌ನಷ್ಟು ರಸಗೊಬ್ಬರ ಬಂದಿದೆ. ಶುಕ್ರವಾರದ ಬೆಳಿಗ್ಗೆ ವೇಳೆಗೆ ನಮ್ಮ ಬಳಿ 600 ಮೆಟ್ರಿಕ್ ಟನ್ ದಾಸ್ತಾನು ಇತ್ತು. ಮತ್ತೆ 900 ಮೆಟ್ರಿಕ್ ಟನ್‌ನಷ್ಟು ಬಂದಿದೆ. ಮಳೆಯಾದಾಗ ಜಾಸ್ತಿಯಾದಾಗ ಸಹಜವಾಗಿ ಬೇಡಿಕೆ ಇರುತ್ತದೆ. ಜುಲೈನಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ರಸಗೊಬ್ಬರ ಬಂದಿದೆ. ಕೆಲವು ರೈತರು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಯಾರೂ ಆ ರೀತಿ ಮಾಡಬಾರದು’ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತು, ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಯಪ್ರಕಾಶ ಸೇರಿದಂತೆ ಅನೇಕರು ಇದ್ದರು.
ರಸಗೊಬ್ಬರ ಪಡೆಯಲು ತಂದಿದ್ದ ಪಹಣಿ ತೋರಿಸಿದ ರೈತರು
ರಸಗೊಬ್ಬರ ಪಡೆಯಲು ಆಧಾರ್ ಕಾರ್ಡ್ ಕೂಡ ತರುವಂತೆ ರೈತರಿಗೆ ತಿಳಿಸಲಾಗಿದೆ. ಎಲ್ಲರಿಗೂ ಗೊಬ್ಬರ ಸಿಗುತ್ತದೆ. ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲರುದ್ರೇಶಪ್ಪ ಟಿ.ಎಸ್. ಕೃಷಿ ಇಲಾಖೆಯ ಜಂಟಿ ನಿರ್ದೇಶಕ
ಊರಿನಲ್ಲಿ ಸಿಗದಕ್ಕೆ ಕೊಪ್ಪಳಕ್ಕೆ ಬಂದರು:
ರಸಗೊಬ್ಬರ ತಮ್ಮೂರಿನ ವ್ಯಾಪ್ತಿಯ ಸೊಸೈಟಿಗಳಲ್ಲಿ ಹಾಗೂ ಅಂಗಡಿಗಳಲ್ಲಿ ಸಿಗದ ಕಾರಣಕ್ಕೆ ಅನೇಕ ರೈತರು ಜಿಲ್ಲಾಕೇಂದ್ರಕ್ಕೆ ಬಂದಿದ್ದರಿಂದ ಸರತಿ ಸಾಲು ದೊಡ್ಡದಾಯಿತು. 'ಎರಡು ತಾಸಿನಿಂದ ಸರತಿಯಲ್ಲಿ ನಿಂತ ಬಳಿಕ ರಸಗೊಬ್ಬರ ಸಿಕ್ಕಿದೆ. ನಮ್ಮೂರಿನಲ್ಲಿ ತಡವಾಗುತ್ತಿತ್ತು. ಅಲ್ಲಿ ಸಿಗದಿದ್ದರೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ಇಲ್ಲಿಗೆ ಬಂದಿದ್ದೇನೆ’ ಎಂದು ತಾಲ್ಲೂಕಿನ ಓಜನಹಳ್ಳಿ ಗ್ರಾಮದ ರೈತ ಮಲ್ಲಪ್ಪ ಹೇಳಿದರು. 10 20 ಎಕರೆಯಷ್ಟು ಜಮೀನು ಇದ್ದವರು ರಸಗೊಬ್ಬರಕ್ಕಾಗಿ ಮನೆಯ ಮಂದಿಯಲ್ಲಿ ಆಧಾರ್ ಕಾರ್ಡ್ ತೆಗೆದುಕೊಂಡು ಸರತಿಯಲ್ಲಿ ನಿಂತಿದ್ದರು. ‘ಆಯಾ ಸೊಸೈಟಿಗಳಿಗೆ ಮತ್ತು ಅಂಗಡಿಗಳಿಗೆ ಕಳುಹಿಸಲಾಗಿತ್ತುದೆ. ಆದರೆ ಕೆಲವು ರೈತರು ಇಲ್ಲಿಯೇ ಬೇಕು ಎಂದು ಬಂದಿದ್ದಾರೆ. ಅವರಿಗೂ ಕೊಪ್ಪಳದಲ್ಲಿಯೇ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.