ಕೊಪ್ಪಳ: ಗ್ರಾಮೀಣ ಜನರ ಬದುಕು ಹಸನಾಗಿಸಲು ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದರಿಂದ ಕೊಪ್ಪಳ ಜಿಲ್ಲಾ ಪಂಚಾಯಿತಿಗೆ 2025ನೇ ಸಾಲಿನ ಸ್ಕೋಚ್ ಗ್ರೂಪ್ ನೀಡುವ ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಜಿ.ಪಂ. ಪ್ರಶಸ್ತಿ ಲಭಿಸಿದೆ.
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದ್ದರಿಂದ ಹಿಂದಿನ ಜಿ.ಪಂ. ಸಿಇಒ ರಾಹುಲ್ ರತ್ನಂ ಪಾಂಡೆಯ ಅವರು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಮಳೆ ನೀರು ಸಂಗ್ರಹಿಸಿ ಅಂತರ್ಜಲ ವೃದ್ಧಿಸುವ ಪೂರಕ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳನ್ನು ಮಾಡಲಾಗಿತ್ತು.
ಕೆರೆ, ನಾಲಾ ಹೂಳೆತ್ತುವುದು, ಬದು ನಿರ್ಮಾಣ, ಕೃಷಿ ಹೊಂಡ, ಅಮೃತ ಸರೋವರ ಕಾಮಗಾರಿಗಳು, ದಿಬ್ಬದಿಂದ ಕಣಿವೆವರೆಗೆ ನೀರು ನಿರ್ವಹಣಾ ಕಾಮಗಾರಿ ನಡೆದಿದ್ದವು. ಪ್ರತಿ ವರ್ಷ ದೇಶದಾದ್ಯಂತ ವಿಶೇಷವಾಗಿ ಅನುಷ್ಠಾನಗೊಂಡ ಯೋಜನೆಗಳ ಬಗ್ಗೆ ಸಾರ್ವಜನಿಕರು ಮತ ಹಾಕುವ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ಜಿ.ಪಂ. ಪ್ರಸ್ತುತ ಸಿಇಒ ವರ್ಣಿತ್ ನೇಗಿ ಈ ಕುರಿತು ಪ್ರತಿಕ್ರಿಯಿಸಿ ‘ಮನರೇಗಾ ಯೋಜನೆಯಡಿ ಅಕುಶಲ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದಲ್ಲದೆ, ಸುಸ್ಥಿರ ಆಸ್ತಿಗಳನ್ನು ನಿರ್ಮಿಸಲಾಗಿದೆ. ಗ್ರಾಮೀಣ ಭಾಗದ ರೈತರನ್ನು ಆರ್ಥಿಕವಾಗಿ ಸುಸ್ಥಿರ ಜೀವನ ನಡೆಸಲು ಹೆಚ್ಚು ನೈಸರ್ಗಿಕ ಸಂಪನ್ಮೂಲ ಕಾಮಗಾರಿ ಮಾಡಿದ್ದರಿಂದ ಈ ಪ್ರಶಸ್ತಿ ಲಭಿಸಿದೆ’ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.