ಕೊಪ್ಪಳ: ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜೋಳದ ರೊಟ್ಟಿ ತಯಾರಿ ಕಾರ್ಯ ಭರದಿಂದ ಸಾಗಿದ್ದು, ಈಗಾಗಲೇ ಅಂದಾಜು 15 ಲಕ್ಷ ರೊಟ್ಟಿ ಸಂಗ್ರಹವಾಗಿವೆ. ಇನ್ನೂ ಐದು ಲಕ್ಷ ರೊಟ್ಟಿ ಬರುವ ನಿರೀಕ್ಷೆಯಿದೆ. ಇದಕ್ಕಾಗಿ ಈಗ ಕೊಪ್ಪಳ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ನಿತ್ಯ ರಾತ್ರಿ ರೊಟ್ಟಿ ತಟ್ಟುವ ಸಂಭ್ರಮ ಕಂಡುಬರುತ್ತಿದೆ.
ರೊಟ್ಟಿ ತಟ್ಟುವ ಮಹಿಳೆಯರಲ್ಲಿ ಬಹುತೇಕರು ಹಗಲು ಹೊತ್ತಿನಲ್ಲಿ ಹೊಲಗಳಲ್ಲಿ ಕೆಲಸ ಮಾಡುವ ಹಾಗೂ ಒಪ್ಪೊತ್ತಿನ ಊಟಕ್ಕಾಗಿ ಅಂದಿನ ಅನ್ನವನ್ನು ಅಂದೇ ದುಡಿದು ದಣಿದು ಬರುವ ಶ್ರಮಜೀವಿಗಳು. ಆಯಾ ಗ್ರಾಮಗಳಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಒಂದೆಡೆ ಸೇರಿ ಬೆಳಗಿನ ಜಾವದ ತನಕ ಸಾವಿರಾರು ರೊಟ್ಟಿಗಳನ್ನು ತಟ್ಟುತ್ತಾರೆ. ಗವಿಮಠದ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರ ದಾಸೋಹಕ್ಕೆ ಈ ರೊಟ್ಟಿಗಳನ್ನು ನೀಡಲಾಗುತ್ತದೆ.
ರೊಟ್ಟಿ ತಯಾರಿಕೆಗೆ ಆಯಾ ಊರಿನ ಯುವಕರು ಹಣ ಸಂಗ್ರಹಿಸಿ ಹಿಟ್ಟು ತರುತ್ತಾರೆ. ಊರಿನ ದೇವಸ್ಥಾನ, ಕ್ರೀಡಾಂಗಣ ಅಥವಾ ವಿಶಾಲವಾದ ಜಾಗದಲ್ಲಿ ನೂರಾರು ಒಲೆಗಳನ್ನು ನಿರ್ಮಿಸಿ ಒಂದೇ ಕಡೆ ಮಹಿಳೆಯರು ಕುಳಿತು ರೊಟ್ಟಿ ಮಾಡಲು ವ್ಯವಸ್ಥೆ ಮಾಡಲಾಗಿರುತ್ತದೆ. ದುಡಿದು ದಣಿದು ಬಂದರೂ ಒಂದಿಷ್ಟೂ ಬೇಸರಿಸಿಕೊಳ್ಳದೆ ಮಹಿಳೆಯರು ಪರಸ್ಪರ ಮಾತನಾಡುತ್ತ, ಗವಿಸಿದ್ಧೇಶ್ವರನ ಹಾಡುಗಳ ಧ್ಯಾನ ಮಾಡುತ್ತ ರೊಟ್ಟಿ ತಯಾರಿಸುವ ಚಿತ್ರಣ ರಾತ್ರಿ ಹೊತ್ತಿನಲ್ಲಿಯೂ ಈಗ ಸಾಮಾನ್ಯವಾಗಿದೆ.
ಜಾತ್ರೆ ಆರಂಭವಾಗುವ 15 ದಿನಗಳ ಮೊದಲು ಈ ಕೆಲಸ ನಡೆಯುತ್ತದೆ. ಎಲ್ಲ ಧರ್ಮಗಳ ಹಾಗೂ ಜಾತಿಗಳ ಜನ ರೊಟ್ಟಿ ತಟ್ಟಿ ತಮ್ಮ ಕೈಲಾದಷ್ಟು ಸೇವೆ ಸಲ್ಲಿಸುತ್ತಾರೆ. ಇನ್ನೂ ಕೆಲವರು ತಮ್ಮ ಮನೆಗಳಲ್ಲಿ ಸಾಧ್ಯವಾದಷ್ಟು ರೊಟ್ಟಿಗಳನ್ನು ತಯಾರಿಸಿ ಗ್ರಾಮದ ದೇವಸ್ಥಾನದಲ್ಲಿ ಸಂಗ್ರಹಿಸಿ ಅದ್ದೂರಿ ಮೆರವಣಿಗೆ ಮೂಲಕ ಬಂದು ಗವಿಮಠಕ್ಕೆ ಅರ್ಪಿಸುತ್ತಾರೆ. ಹೀಗೆ ಹಳ್ಳಿಗಳ ಯುವಕರ ಮತ್ತು ಮಹಿಳೆಯರ ಶ್ರಮದಿಂದ ತಯಾರಾಗುವ ರೊಟ್ಟಿಗಳು ಸೇರಿ ಪ್ರತಿವರ್ಷವೂ ಲಕ್ಷಾಂತರ ರೊಟ್ಟಿಗಳಾಗುತ್ತವೆ.
ರೊಟ್ಟಿ ತಯಾರಿಸಲು ವ್ಯವಸ್ಥೆ ಮಾಡುವ ಯುವಕರಲ್ಲಿ ಬಡವರೇ ಹೆಚ್ಚು. ಕಡು ಬರಗಾಲದ ಸಂಕಷ್ಟದ ಸಮಯದಲ್ಲಿಯೂ ತಮ್ಮ ಮನೆಯಲ್ಲಿ ಊಟಕ್ಕೆ ತೊಂದರೆಯಾದರೂ ಗವಿಮಠಕ್ಕೆ ರೊಟ್ಟಿ ಅರ್ಪಿಸುವ ಸಂಪ್ರದಾಯವನ್ನು ಮಾತ್ರ ಗ್ರಾಮಸ್ಥರು ಬಿಡುವುದಿಲ್ಲ. ಗವಿಮಠದ ಜಾತ್ರೆಯ ಮಹಾರಥೋತ್ಸವ ಜ. 15ರಂದು ನಡೆಯಲಿದ್ದು, ಇದಕ್ಕೂ ಹಲವು ದಿನಗಳ ಮೊದಲೇ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಲ್ಲಿ ಬೆಳಗಿನ ಜಾವದ ತನಕ ರೊಟ್ಟಿ ತಟ್ಟುವ ’ಜಾತ್ರೆ‘ ನಡೆಯುತ್ತಲೇ ಇದೆ. ಇದು ಹಳ್ಳಿಗಳ ಜನರ ನಡುವಿನ ಬಾಂಧವ್ಯವನ್ನೂ ಬೆಸೆದಿದೆ.
ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ಇನ್ನೂ ಎರಡು ದಿನ ಸಮಯವಿದೆ. ಆಗಲೇ 15 ಲಕ್ಷದಷ್ಟು ಜೋಳದ ರೊಟ್ಟಿಗಳು ಸಂಗ್ರಹವಾಗಿವೆ. ನಿತ್ಯ ರೊಟ್ಟಿ ಬರುತ್ತಲೇ ಇವೆರಾಮನಗೌಡ ಗವಿಮಠದ ದಾಸೋಹ ವಿಭಾಗದ ಉಸ್ತುವಾರಿ
ನಮಗೆ ಎಷ್ಟೇ ಕಷ್ಟವಾದರೂ ಪ್ರತಿವರ್ಷ ಹಳ್ಳಿಹಳ್ಳಿಗಳಲ್ಲಿ ರೊಟ್ಟಿಗಳನ್ನು ತಯಾರಿಸಿ ಗವಿಮಠಕ್ಕೆ ಅರ್ಪಿಸುವುದು ವಾಡಿಕೆ. ಎಲ್ಲ ಧರ್ಮ ಜಾತಿಗಳ ಮಹಿಳೆಯರೂ ರೊಟ್ಟಿ ತಟ್ಟುತ್ತಾರೆಶಿವಕುಮಾರ ಚರಾರಿ ರೊಟ್ಟಿ ತಯಾರಿಸಲು ವ್ಯವಸ್ಥೆ ಮಾಡಿದ್ದ ಮುಖಂಡ ಕೊಪ್ಪಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.