ಕಾರಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ವಿವಿಧ ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರು (ಪಾಂಜಾ)ಗಳ ಮೆರವಣಿಗೆ ಹಾಗೂ ದಫನ್ (ವಿಸರ್ಜನೆ) ಕಾರ್ಯದೊಂದಿಗೆ ಮೊಹರಂಗೆ ಭಾನುವಾರ ತೆರೆ ಬಿದ್ದಿದೆ.
ಉಪ್ಪಾರ ಓಣಿಯ ಮಸೀದಿ ವ್ಯಾಪ್ತಿಯ ಭಕ್ತರು ಡಾ.ರಾಜ್‌ಕುಮಾರ್ ರಂಗಮಂದಿರದ ಬಳಿಯ ಅಲಾಯಿ ಕುಣಿ ಮುಚ್ಚಿದ ಬಳಿಕ ವೆಂಕಟೇಶ್ವರ ದೇವಾಲಯದ ಹತ್ತಿರದ ಮಸೀದಿ, ನಜೀರ್ ಕಾಲೊನಿಯ ಮಸೀದಿಯ ಅಲಾಯಿ ದೇವರುಗಳು ಇಲ್ಲಿಯ ಅಲಾಯಿ ಕುಣಿ ಹತ್ತಿರ ಏಕಕಾಲಕ್ಕೆ ಆಗಮಿಸಿದವು. ಬಳಿಕ ಪರಸ್ಪರ ಶುಭಾಶಯಗಳ ವಿನಿಮಿಯ ನಡೆಯಿತು.
ಯುವಕರು, ನಾಗಕರಿಕರು ಕಟ್ಟಿಗೆಗೆ ವಿವಿಧ ವಸ್ತುಗಳನ್ನು ಕಟ್ಟಿಕೊಂಡು, ಛತ್ರಿ ಹಿಡಿದು ಹಲಗೆ–ಜಾಂಜ್ ಮೇಳದ ನಾದಕ್ಕೆ ಮೈಮರೆತು ಹೆಜ್ಜೆ ಹಾಕುತ್ತಾ ಕುಣಿದು ಸಂಭ್ರಮಿಸಿದರು.
ಅಲಾಯಿ ದೇವರ ಸಮ್ಮುಖದಲ್ಲಿಯೇ ಅಲಾಯಿ ಕುಣಿಯನ್ನು ಮುಚ್ಚಿದ ಬಳಿಕ ಸೇರಿದ್ದ ಎಲ್ಲಾ ಅಲಾಯಿ ದೇವರ ಮೆರವಣಿಗೆ ಆರಂಭಗೊಂಡು ಶರಣಬಸವೇಶ್ವರ ದೇವಾಲಯದ ರಸ್ತೆಗೆ ಬರುತ್ತಿದ್ದಂತೆ ವಿವಿಧ ಮಸೀದಿಗಳಲ್ಲಿಯ ಅಲಾಯಿ ದೇವರುಗಳು ಒಂದೆಡೆ ಸಮಾಗಮಗೊಂಡವು. ನೆರೆದ ಭಕ್ತರು ತಮಟೆ–ಹಲಗೆ ಬಾರಿರಿಸುತ್ತಾ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಭಾವಾವೇಶದಲ್ಲಿ ಕುಣಿದು, ಜಯಘೋಷ ಹಾಕುತ್ತಾ ವಿಸರ್ಜನೆಯ ಸ್ಥಳದತ್ತ ಸಾಗಿದರು.
ಸುಂಕಲಮ್ಮ ಬೈಲ್‌ನ ಹತ್ತಿರ ಬಾವಿಯ ಬಳಿ ಅಲಾಯಿ ದೇವರ ವಿಸರ್ಜನೆ ಕಾರ್ಯ ನಡೆಯಿತು. ದಫನ್ ಕಾರ್ಯದ ಬಳಿಕ ನೆರೆದ ಭಕ್ತರು ನಿರ್ಗಮಿಸಿದರು.
ಅಲಾಯಿ ದೇವರಿಗೆ ನಾಗರಿಕರು, ಮಹಿಳೆಯರು ವಿವಿಧ ಬಗೆಯ ಹರಕೆ ತೀರಿಸುವುದು ಕಳೆದೆರಡು ದಿನಗಳಿಂದ ಕಂಡುಬಂತು.
ಸಕ್ಕರೆ, ಲಾಡಿ, ಬೆಳ್ಳಿಯ ಕುದುರೆ, ನಗದು ಸಹಿತ ವಿವಿಧ ವಸ್ತುಗಳೊಂದಿಗೆ ಹರಕೆ ತೀರಿಸಿ ಭಕ್ತಿ ಸಮರ್ಪಿಸಿ ಧನ್ಯತಾಭಾವ ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.