ಬಾಲ ಕಾರ್ಮಿಕರು
(ಪ್ರಾತಿನಿಧಿಕ ಚಿತ್ರ)
ಕೊಪ್ಪಳ: ಎಲ್ಲ ಮಕ್ಕಳ ಜೊತೆ ಆಟವಾಡುತ್ತ, ಓದುತ್ತ ಬದುಕನ್ನು ಖುಷಿಯಿಂದ ಕಳೆಯಬೇಕಿದ್ದ ಕಿಶೋರ ಕಾರ್ಮಿಕರು ಹಲವು ಕಾರಣಗಳಿಂದಾಗಿ ದುಡಿಯುವ ಕೂಪಕ್ಕೆ ಬೀಳುತ್ತಿದ್ದು, ಹಿಂದಿನ ಎರಡೂವರೆ ವರ್ಷಗಳಲ್ಲಿ ಜಿಲ್ಲೆಯಲ್ಲಿ 62 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ಇಲಾಖೆಯ ಮಾಹಿತಿ ಪ್ರಕಾರ ಹಿಂದಿನ ಮೂರು ವರ್ಷಗಳ ಅಂಕಿ–ಅಂಶಗಳಿಗೆ ಹೋಲಿಸಿದರೆ ಬಾಲ ಕಾರ್ಮಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. 2023ರಲ್ಲಿ 545 ಸ್ಥಳಗಳಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಪಾಸಣೆ ನಡೆಸಿ 30 ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿದ್ದು, ಬಾಲಕರನ್ನು ಕೆಲಸಕ್ಕೆ ಸೇರಿಸಿಕೊಂಡ ಆರು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
2024ರಲ್ಲಿ 353 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು 27 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿ ಐದು ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲಾಗಿದೆ. ಈ ವರ್ಷದಲ್ಲಿ 51 ಕಡೆ ದಾಳಿ ನಡೆಸಿ ಐದು ಜನ ಮಕ್ಕಳನ್ನು ರಕ್ಷಣೆ ಮಾಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎರಡು ವರ್ಷ ಐದು ತಿಂಗಳಲ್ಲಿ ಒಟ್ಟು 949 ಕಡೆ ದಾಳಿ ನಡೆಸಿ 62 ಮಕ್ಕಳನ್ನು ರಕ್ಷಿಸಿ 13 ಪ್ರಕರಣಗಳನ್ನು ದಾಖಲಿಸಲಾಗಿದೆ.
ಇತ್ತೀಚೆಗೆ ವರ್ಷದಿಂದ ವರ್ಷಕ್ಕೆ ಬಾಲ ಕಾರ್ಮಿಕರ ಪತ್ತೆ ಪ್ರಮಾಣ ಕಡಿಮೆಯಾಗುತ್ತಿದ್ದು ಇಲಾಖೆಯ ಬೀದಿನಾಟಕ, ಗೋಡೆ ಬರಹ, ಆಟೊಗಳ ಮೂಲಕ ಪ್ರಚಾರ, ಕಾನೂನು ಅರಿವು, ತರಬೇತಿ ಸಂಸ್ಥೆಯಿಂದ ಮಾರ್ಗದರ್ಶನ, ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿ ವಿವಿಧ ಕಾರ್ಯಕ್ರಮಗಳ ಆಯೋಜನೆ, ನಿಯಮಿತವಾಗಿ ಜಿಲ್ಲಾ ಮತ್ತು ತಾಲ್ಲೂಕು ಟಾಸ್ಕ್ ಫೋರ್ಸ್ ಸಮಿತಿಗಳ ಮೂಲಕ ಸಭೆಗಳನ್ನು ನಡೆಸುವುದರಿಂದ ಬಾಲ ಕಾರ್ಮಿಕರ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
‘ಇಟ್ಟಿಗೆ ತಯಾರಿಸುವ ಭಟ್ಟಿ, ಕೋಳಿ ಫಾರ್ಮ್‌ಗಳು, ಗ್ಯಾರೇಜ್, ಕುರಿಗಳನ್ನು ಕಾಯುವ ಹಿಂಡು, ಕೃಷಿ ಚಟುವಟಿಕೆ ಇಂಥ ಪ್ರಮುಖ ಸ್ಥಳಗಳಲ್ಲಿ ಹೆಚ್ಚು ಬಾಲ ಕಾರ್ಮಿಕರು ಪತ್ತೆಯಾಗುತ್ತಿದ್ದು ಇದರ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದೆ. ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡರೆ ಕಾನೂನು ಕ್ರಮದ ಬಗ್ಗೆಯೂ ಮಾಲೀಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದರು.
ಬಾಲ ಕಾರ್ಮಿಕರು ಎಲ್ಲಿಯೇ ಕಂಡರೂ ಅವರನ್ನು ನಿಯಮಾನುಸಾರ ರಕ್ಷಣೆ ಮಾಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿವೆ.ಸುಧಾ ಗರಗ ಜಿಲ್ಲಾ ಕಾರ್ಮಿಕ ಅಧಿಕಾರಿ
‘ಪರಿಣಾಮಕಾರಿ ಕಾರ್ಯಾಚರಣೆ ಅಗತ್ಯ’
ಕೂಲಿಯ ಕೂಪದಿಂದ ಮಕ್ಕಳನ್ನು ಹೊರ ತರಲು ಕಾರ್ಮಿಕ ಇಲಾಖೆ ಕೆಲಸ ಮಾಡುತ್ತಿದ್ದರೂ ಇನ್ನಷ್ಟು ಪರಿಣಾಮಕಾರಿಯಾಗಬೇಕು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿವೆ. ‘ಕಾರ್ಖಾನೆಗಳು ಇಟ್ಟಂಗಿ ಭಟ್ಟಿಗಳಲ್ಲಿ ಬಾಲ ಕಾರ್ಮಿಕರು ಹೇರಳವಾಗಿದ್ದಾರೆ. ಅವರನ್ನು ರಕ್ಷಣೆ ಮಾಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಕಾರ್ಮಿಕ ಇಲಾಖೆ 14 ವರ್ಷದ ಒಳಗಿನ ಮಕ್ಕಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತದೆ. ಈ ಇಲಾಖೆ ಕಾರ್ಯಾಚರಣೆ ನಡೆಸುವಾಗ ಕಂದಾಯ ಶಿಕ್ಷಣ ಪೊಲೀಸ್ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳನ್ನು ಜೊತೆಗೆ ಕರೆದೊಯ್ಯಬೇಕು. ಇದರಿಂದ ಮಗುವಿನ ರಕ್ಷಣೆ ಜೊತೆಗೆ ಭವಿಷ್ಯ ಕಲ್ಪಿಸಲು ಅನುಕೂಲವಾಗುತ್ತದೆ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ಹೇಳಿದರು. ಮಕ್ಕಳು ಶಾಲೆಯಿಂದ ಹೊರಗುಳಿದರೆ ಅದು ಎಸ್‌ಎಸ್‌ಎಲ್‌ಸಿ ಫಲಿತಾಂಶದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.