
ಕುಕನೂರು: ಇಲ್ಲಿನ ಎಪಿಎಂಸಿ ಹೆಸರಿಗೆ ಮಾತ್ರವಿದ್ದು, ದಲ್ಲಾಳಿಗಳ ಹಾವಳಿ ವಿಪರೀತವಾಗಿದೆ. ಕುಡಿಯುವ ನೀರು, ಶೌಚಾಲಯ ಮರೀಚಿಕೆಯಾಗಿದ್ದು, ಮಳೆ ನೀರಿನೊಂದಿಗೆ ಚರಂಡಿ ನೀರೂ ಹರಿದು ರೋಗ ಭೀತಿ ಎದುರಾಗಿದ್ದು, ಇದು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ದುಸ್ಥಿತಿಯಾಗಿದೆ.
ಎಪಿಎಂಸಿ ಮೂಲಸೌಕರ್ಯಕ್ಕೆ ಒತ್ತು ನೀಡುವಂತೆ ಅಧಿಕಾರಿಗಳನ್ನು ಪದೇ ಪದೇ ಒತ್ತಾಯಿಸಿದರೂ ಇಲ್ಲಿನ ಸ್ಥಿತಿ ಮಾತ್ರ ಸುಧಾರಣೆ ಕಂಡಿಲ್ಲ ಎನ್ನುತ್ತಾರೆ ರೈತರು ಹಾಗೂ ವ್ಯಾಪಾರಿಗಳು.
ಎಪಿಎಂಸಿ ಪ್ರಾಂಗಣದೊಳಗಿನ ಜಾಗವನ್ನು ಮಾರಾಟ (ಲೀಸ್ ಕಂ ಸೇಲ್) ಮಾಡಿರುವುದು ವಿವಾದದ ರೂಪ ಪಡೆದಿದ್ದು, ಈ ಜಾಗವನ್ನು ಅನರ್ಹರಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ವರ್ತಕರು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಅದು ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ವರ್ತಕರು ದೂರಿದ್ದಾರೆ.
ಸ್ಥಗಿತ: ಸುತ್ತಲಿನ ವಿವಿಧ ಗ್ರಾಮಗಳಿಂದ ಬರುವ ಗ್ರಾಹಕರಿಗೆ ಅನುಕೂಲವಾಗಲೆಂದು ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿತ್ತು. ಆದರೆ ಕೆಲ ದಿನಗಳಲ್ಲಿ ನೀರಿನ ಘಟಕ ಸ್ಥಗಿತಗೊಂಡಿದ್ದು, ಅಧಿಕಾರಿಗಳು ದುರಸ್ತಿ ಮಾಡದೆ ನಿರ್ಲಕ್ಷ ವಹಿಸಿದ್ದಾರೆ ಎನ್ನುವ ದೂರು ಇದೆ.
ಪಟ್ಟಣದಲ್ಲಿ ರೈತರಿಗೆ ಅನುಕೂಲವಾಗಲಿ ಎನ್ನುವ ಸದುದ್ದೇಶದಿಂದ ಎಪಿಎಂಸಿ ಸ್ಥಾಪಿಸಲಾಗಿದೆ. ಆದರೆ ಇಲ್ಲಿ ವ್ಯಾಪಾರ ವಹಿವಾಟುಗಳು ಇಲ್ಲದೆ ಹೊರಗಡೆ ದಲ್ಲಾಳಿಗಳ ಹಾವಳಿ ಹೆಚ್ಚಳವಾಗಿದೆ. ಇಲ್ಲಿನ ಪ್ರಾಂಗಣದಲ್ಲಿ ಕೆಲವರು ಮನೆಗಳನ್ನು ನಿರ್ಮಾಣ ಮಾಡಿ ವಾಸ ಮಾಡುತ್ತಿದ್ದಾರೆ. ಇವೆಲ್ಲವನ್ನೂ ನೋಡಿಯೂ ಅಧಿಕಾರಿಗಳು ಏಕೆ ಕ್ರಮ ಜರುಗಿಸುತ್ತಿಲ್ಲ? ಎಂಬುದೇ ಯಕ್ಷ ಪ್ರಶ್ನೆ ಎನ್ನುತ್ತಾರೆ ಸ್ಥಳೀಯರು.
ರಾಜಕೀಯ ಪಕ್ಷದ ಕಚೇರಿ: ಇಲ್ಲಿನ ಎಪಿಎಂಸಿ ರಾಜಕೀಯ ಪಕ್ಷಗಳ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿ ಒಂದು ಪಕ್ಷದ ಕಾರ್ಯ ಚಟುವಟಿಕೆಗಳು, ಸಭೆಗಳು ನಡೆಯುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ಇದನ್ನು ನೋಡಿಯು ನೋಡದಂತೆ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಗ್ರಾಹಕರಿಗೆ ಹಾಗೂ ಕಾರ್ಮಿಕರಿಗೆ ಕಲ್ಪಿಸಬೇಕಾದ ಮೂಲ ಸೌಕರ್ಯಗಳಲ್ಲಿ ಒಂದಾದ ಶೌಚಾಲಯವೇ ಇಲ್ಲಿ ಇಲ್ಲ. ಎಪಿಎಂಸಿಗೆ ಬರುವ ಗ್ರಾಹಕರು ಹೊರಗಡೆ ಮುಳ್ಳುಕಂಟಿಗಳಲ್ಲಿ ಮಲಮೂತ್ರ ವಿಸರ್ಜನೆ ಹೋಗುವ ಪ್ರಸಂಗ ಎದುರಾಗಿದೆ.
ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣ: ಶಾಸಕ ಬಸವರಾಜ ರಾಯರಡ್ಡಿ ಅವರು ಪ್ರಸಕ್ತ ವರ್ಷದಲ್ಲಿ ರೈತರಿಗೆ ಅನುಕೂಲವಾಗಲೆಂದು ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣ ಮಾಡಿದ್ದು, ಇನ್ನೇನು ಕೆಲವು ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದರಂತೆ ರೈತರಿಗೆ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಬೇಕಿದ್ದು, ಇನ್ನಷ್ಟು ಮೂಲ ಸೌಕರ್ಯಗಳನ್ನು ಸರಿಪಡಿಸಬೇಕಾದ ಕೆಲಸವಾಗಬೇಕಾಗಿದೆ.
ಎಪಿಎಂಸಿ ಪ್ರಾಂಗಣದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕಾರ್ಯಗಳು ಹಂತ ಹಂತವಾಗಿ ನಡೆಯುತ್ತಿದೆ. ಪ್ರಾಂಗಣದೊಳಗಿನ ನಿವೇಶನವನ್ನು ಎಪಿಎಂಸಿ ಕಾಯ್ದೆ ಅನ್ವಯವೇ ಲೀಸ್ ಕಂ ಸೇಲ್‌ಗೆ ನೀಡಲಾಗಿದೆಗುರುಸ್ವಾಮಿ ಎಪಿಎಂಸಿಯ ಅಧಿಕಾರಿ