
ಕುಕನೂರು: ‘ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ, ಸೃಜನಾತ್ಮಕತೆ, ವೈಜ್ಞಾನಿಕ ಮನೋಭಾವ, ಕೌಶಲ ಹೊರಹೊಮ್ಮುತ್ತದೆ. ವಿಜ್ಞಾನಕ್ಕೆ ಸಂಬಂಧಿಸಿದ ಮಕ್ಕಳು ಮಾಡಿರುವ ನೂತನ ಮಾದರಿಗಳು ವೈಜ್ಞಾನಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವಲ್ಲಿ ಸಂದೇಹವಿಲ್ಲ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸೋಮಶೇಖರಗೌಡ ಪಾಟೀಲ ಹೇಳಿದರು.
ಇಲ್ಲಿನ ವಿದ್ಯಾಶ್ರೀ ಶಾಲೆಯಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
‘ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳಲ್ಲಿನ ನೈಜತೆ, ಕ್ರಿಯಾತ್ಮಕ ಚಟುವಟಿಕೆ ಹಾಗೂ ಮಕ್ಕಳ ಸುಪ್ತ ಪ್ರತಿಭೆ ಅರಳುತ್ತದೆ. ಇಂದಿನ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕಿದೆ’ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ವಿಷಯಗಳ ಜ್ಞಾನ ಬಹಳ ಅವಶ್ಯವಿದೆ. ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ನಿರ್ಲಕ್ಷ್ಯ ಮಾಡದೆ ಪ್ರತಿಯೊಂದು ವಿಷಯಗಳ ಅಧ್ಯಯನ ಮಾಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಸಾಧಿಸಬೇಕು ಅಂದರೆ ಜ್ಞಾನ ಸಂಪಾದಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಜಸ್ವಂತ್‌ರಾವ್ ಜೈನ್ ಮಾತನಾಡಿ, ‘ವಿಜ್ಞಾನ ವಿಷಯಗಳ ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರಿಂದ ವಿಷಯಗಳ ಬಗ್ಗೆ ಹೆಚ್ಚಿನ ಜ್ಞಾನ ಪಡೆದುಕೊಳ್ಳಲು ಸಾಧ್ಯ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಮುಂದೆ ಬರಬೇಕು’ ಎಂದು ಹೇಳಿದರು.
ವಸ್ತು ಪ್ರದರ್ಶನದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಪರಮಾಣುಗಳ ರಚನೆ, ವಾಯು ಮಾಲಿನ್ಯ ನಿಯಂತ್ರಣ, ರಕ್ತ ಗುಂಪುಗಳ ಮಾಹಿತಿ, ನೀರಿನ ಮಟ್ಟ ಸೂಚಕ, ನೀರಿನ ಶುದ್ಧಿಕರಣ, ಬೆಳೆ ಸಂರಕ್ಷಣಾ ಮಾದರಿ, ಸೋಲಾರ್ ಟ್ರ್ಯಾಕಿಂಗ್ ಸಿಸ್ಟಮ್, ಮಿಶ್ರ ಬೇಸಾಯ ಸೇರಿದಂತೆ ವಿವಿಧ ಬಗೆಯ ಮಾದರಿ ಪ್ರದರ್ಶನ ಆಕರ್ಷಕವಾಗಿತ್ತು.
ಪ್ರಶಸ್ತಿ ವಿವರ: ಪ್ರದರ್ಶನದಲ್ಲಿ ವೈಯಕ್ತಿಕ ಹಾಗೂ ಗುಂಪು ವಿಭಾಗವಾಗಿ ಮಾಡಲಾಗಿತ್ತು. ವೈಯಕ್ತಿಕ ವಿಭಾಗದಲ್ಲಿ 8 ತಂಡ, ಗುಂಪು ವಿಭಾಗದಲ್ಲಿ 8 ತಂಡ ಭಾಗವಹಿಸಿದ್ದವು.
ಎಲ್.ಡಿ ಜೋಶಿ, ನಾಗರಾಜ್ ಜುಮ್ಮಣ್ಣವರ್, ಸೋಮಶೇಖರ್ ಹರ್ತಿ, ಮಹೇಶ್ ಸಬರದ, ಹೇಮಣ್ಣ ಕುಕನೂರ, ಜಾಕಿರ್ ಹುಸೇನ್ ಕೊಪ್ಪಳ, ಈರಣ್ಣ ಹೆಬ್ಬಾಳ್, ಸುರೇಶ್ ಬಳೂಟಗಿ ಇದ್ದರು.
ವಿದ್ಯಾರ್ಥಿಗಳು ಮಾಡಿರುವ ಚಿಕ್ಕ ಚಿಕ್ಕ ಪ್ರಯೋಗಗಳು ಮುಂದೆ ಅದ್ಭುತವಾದಂತಹ ಸಂಶೋಧನೆಗೆ ಕಾರಣವಾಗಬಹುದು. ಪ್ರತಿಯೊಬ್ಬರೂ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು.ಸೋಮಶೇಖರಗೌಡ ಪಾಟೀಲ ಡಿಡಿಪಿಐ ಕೊಪ್ಪಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.