ಕುಷ್ಟಗಿ: ಪರಿಸರ ದಿನ ಬಂತೆಂದರೆ ಸಾಕು ಪುರಸಭೆಗೆ ಎಲ್ಲಿಲ್ಲದ ಕಾಳಜಿ, ಅತಿ ಉತ್ಸಾಹ ಎಲ್ಲೆಂದರಲ್ಲಿ ಸಸಿ ನಾಟಿ ಮಾಡುವುದು, ಚಿತ್ರ ತೆಗೆಸಿಕೊಳ್ಳುವುದು ಮೇಲಧಿಕಾರಿಗಳ ಬಳಿ ಸೈ ಎನಿಸಿಕೊಳ್ಳುವುದು ಸಾಮಾನ್ಯ. ಆದರೆ ಇದು ಒಂದು ದಿನಕ್ಕೆ ಮಾತ್ರ ಸೀಮಿತ. ಪರಿಸರದ ಬಗೆಗಿನ ನಿದ್ರಾವಸ್ಥೆಯಿಂದ ಮೇಲೇಳಲು ಮತ್ತೆ ಪರಿಸರ ದಿನ ಬರಬೇಕು.
ಪಟ್ಟಣದಲ್ಲಿ ಅನೇಕ ವರ್ಷಗಳಿಂದಲೂ ಮುಂದುವರಿದಿರುವ ಪುರಸಭೆಯ ಅಧಿಕಾರಿಗಳ ಮತ್ತು ಸದಸ್ಯರ ಕಾಳಜಿ ಇದು ಎಂಬ ಬೇಸರ ಇಲ್ಲಿಯ ನಾಗರಿಕರದು. ಸಸಿ ನೆಡುವ ನೆಪದಲ್ಲಿ ಬಹಳಷ್ಟು ಹಣ ಖರ್ಚಾಗುತ್ತದೆ. ಈ ಕಾರ್ಯ ಯಶಸ್ವಿಯಾಗಿದ್ದರೆ ಈ ವೇಳೆಗೆ ಪಟ್ಟಣದಲ್ಲಿನ ವನಸಿರಿ ಹೆಚ್ಚಿ ಪರಿಸರ ಹಸಿರಿನಿಂದ ಕಂಗೊಳಿಸುತ್ತಿತ್ತು.
ಸಂಘ ಸಂಸ್ಥೆಗಳು, ಖಾಸಗಿ ಸಂಸ್ಥೆಗಳ ನೆರವಿನಿಂದ ನಾಟಿ ಮಾಡಿದ್ದ ಸಸಿಗಳೆಲ್ಲ ಹಾಳಾಗುತ್ತಿವೆ. ಇನ್ನೊಂದು ಅಚ್ಚರಿ ಸಂಗತಿ ಎಂದರೆ ಸಾಮಾಜಿಕ ಸಂಘಟನೆಯೊಂದು ಕೆಲ ವರ್ಷಗಳ ಹಿಂದೆ ನಾಟಿ ಮಾಡಿದ್ದ ಸಸಿಗಳ ಹೆಸರಿನಲ್ಲೂ ನಕಲಿ ಬಿಲ್‌ಗಳನ್ನು ಸೃಷ್ಟಿಸಿದ್ದ ಪುರಸಭೆ ಹಣ ಖರ್ಚು ತೋರಿಸಿ ಹಣ ಎತ್ತುವಳಿ ಮಾಡಿದ್ದನ್ನು ‘ಪ್ರಜಾವಾಣಿ’ ವಿಶೇಷ ವರದಿ ಮೂಲಕ ಗಮನಸೆಳೆದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಕಳೆದ ಒಂದೂವರೆ ವರ್ಷದ ಹಿಂದೆ ಪಟ್ಟಣದ ಪರಿಸರ ಪ್ರೇಮಿಗಳು ಅರಣ್ಯ ಇಲಾಖೆಯಿಂದ 105 ಸಸಿಗಳನ್ನು ಪಡೆದು ಮುಖ್ಯರಸ್ತೆಯ ವಿಭಜಕದಲ್ಲಿ ಮತ್ತು ಅಕ್ಕಪಕ್ಕದಲ್ಲಿ ನಾಟಿ ಮಾಡಿ ಅವುಗಳಿಗೆ ಖಾಸಗಿ ವಿದ್ಯುತ್ ಕಂಪೆನಿಯ ಆರ್ಥಿಕ ನೆರವಿನೊಂದಿಗೆ ರಕ್ಷಣೆಯನ್ನೂ (ಟ್ರೀಗಾರ್ಡ್) ಒದಗಿಸಲಾಗಿತ್ತು. ಆದರೆ ಬೇರೆಯವರು ನಾಟಿ ಮಾಡಿದ ಸಸಿಗಳನ್ನು ಉಳಿಸಿ ಬೆಳೆಸುವಲ್ಲಿಯೂ ಪುರಸಭೆ ಸೋತುಹೋಗಿದೆ ಎಂಬ ಆರೋಪ ಕೇಳಿಬಂದಿದೆ.
ಗಿಡಗಳಿಗೆ ಸರಿಯಾಗಿ ನೀರು ಒದಗಿಸಲಿಲ್ಲ. ರಕ್ಷಣಗೆ ಹಾಕಿದ್ದ ಕಬ್ಬಿಣದ ರಕ್ಷಣಾ ಕವಚಗಳು ಎಲ್ಲೆಂದರಲ್ಲಿ ಉರುಳಿ ಬಿದ್ದಿವೆ. ಈ ದೃಶ್ಯ ಕಂಡರೂ ಪುರಸಭೆ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಸಿಬ್ಬಂದಿ ಜಾಣ ಕುರುಡು ಪ್ರದರ್ಶಿಸಿದೆ. ಹಿಂದಿನ ಮುಖ್ಯಾಧಿಕಾರಿಗೆ ಸಂಘ ಸಂಸ್ಥೆಗಳು ಹತ್ತಾರು ಬಾರಿ ಮನವಿ ಮಾಡಿದರೂ ಗಿಡಗಳನ್ನು ಉಳಿಸಿಕೊಳ್ಳಲು, ರಕ್ಷಣೆ ಒದಗಿಸಲು ಮುಂದಾಗಲಿಲ್ಲ. ರಸ್ತೆ, ಚರಂಡಿಗಳ ನಿರ್ಮಾಣಕ್ಕೇ ಹೆಚ್ಚು ಒಲವು ತೋರುತ್ತಿರುವ ಸದಸ್ಯರಿಗೆ ಪರಿಸರ ಸಂರಕ್ಷಣೆ ವಿಷಯ ಮಾತ್ರ ಅಲರ್ಜಿ. ಏಕೆಂದರೆ ಇದರಿಂದ ವೈಯಕ್ತಿಕವಾಗಿ ಪ್ರಯೋಜನ ಇಲ್ಲ ಎಂಬುದೇ ನಿಷ್ಕಾಳಜಿಗೆ ಕಾರಣ ಎನ್ನುತ್ತಾರೆ ನಿವಾಸಿಗಳಾದ ಕೆ.ಹನುಮೇಶ, ಕೃಷ್ಣ ಇತರರು.
ಪಟ್ಟಣದಲ್ಲಿ ಗಿಡಮರಗಳಿಂದ ಹಸಿರು ಹೆಚ್ಚಿಸಲು ಆದ್ಯತೆ ನೀಡುವುದಾಗಿ ಸಸಿಗಳ ನಾಟಿ ಸಂದರ್ಭದಲ್ಲಿ ಹೇಳಿ ಅತ್ಯುತ್ಸಾಹ ತೋರಿದ್ದ ಶಾಸಕ ದೊಡ್ಡನಗೌಡ ಪಾಟೀಲ ನಂತರ ತಮ್ಮ ಮಾತನ್ನು ಮರೆತುಬಿಟ್ಟಿದ್ದಾರೆ. ಇದೇ ಮಾರ್ಗದಲ್ಲಿ ನಿತ್ಯ ಸಂಚರಿಸುತ್ತಿದ್ದರೂ ಗಿಡಗಳು ನೆರಳುತ್ತಿರುವ ದೃಶ್ಯ ಅವರಿಗೆ ಕಂಡಿರಲಿಕ್ಕಿಲ್ಲವೆ? ಎಂದೆ ಹೆಸರು ಪ್ರಕಟಿಸಲು ಇಚ್ಛಿಸದ ಇಲ್ಲಿಯ ನಾಗರಿಕು ಅಸಮಾಧಾನ ಹೊರಹಾಕಿದರು.
ರಸ್ತೆ ವಿಭಜಕಗಳಲ್ಲಿನ ಗಿಡಗಳಿಗೆ ನೀರುಣಿಸಿ ರಕ್ಷಿಸಲು ಅಗತ್ಯ ಕ್ರಮಕ್ಕೆ ಸಿಬ್ಬಂದಿಗೆ ಸೂಚಿಸುತ್ತೇನೆಮಹಾಂತೇಶ ಕಲಭಾವಿ ಪುರಸಭೆ ಅಧ್ಯಕ್ಷ
ಗಿಡಮರಗಳನ್ನು ರಸ್ತೆ ಚರಂಡಿ ಅಭಿವೃದ್ಧಿ ಕಾರಣಕ್ಕೆ ಕಡಿದುಹಾಕಿದ್ದರಿಂದ ರಸ್ತೆಗಳು ಭಣಗುಡುತ್ತಿವೆ. ಗಿಡಗಳ ಸಂರಕ್ಷಣೆಗೆ ಪುರಸಭೆ ಮುತುವರ್ಜಿ ವಹಿಸಬೇಕಿದೆ.ಪಾಂಡುರಂಗ ಆಶ್ರೀತ್ ಪರಿಸರ ಪ್ರೇಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.