ADVERTISEMENT

ಗಣೇಶೋತ್ಸವ, ಈದ್ ಮಿಲಾದ್‌ |ಸೌಹಾರ್ದಯುತ ಆಚರಣೆ ಮಾದರಿಯಾಗಲಿ: ತಹಶೀಲ್ದಾರ್ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 6:18 IST
Last Updated 21 ಆಗಸ್ಟ್ 2025, 6:18 IST
ಕುಷ್ಟಗಿಯಲ್ಲಿ ನಡೆದ ಶಾಂತಿಸಭೆಯಲ್ಲಿ ಸಿಪಿಐ ಯಶವಂತ ಬಿಸನಳ್ಳಿ ಮಾತನಾಡಿದರು. ತಹಶೀಲ್ದಾರ್ ಅಶೋಕ ಶಿಗ್ಗಾಂವಿ ಹಾಗೂ ಇತರರು ಇದ್ದರು
ಕುಷ್ಟಗಿಯಲ್ಲಿ ನಡೆದ ಶಾಂತಿಸಭೆಯಲ್ಲಿ ಸಿಪಿಐ ಯಶವಂತ ಬಿಸನಳ್ಳಿ ಮಾತನಾಡಿದರು. ತಹಶೀಲ್ದಾರ್ ಅಶೋಕ ಶಿಗ್ಗಾಂವಿ ಹಾಗೂ ಇತರರು ಇದ್ದರು   

ಕುಷ್ಟಗಿ: ‘ಗಣೇಶೋತ್ಸವ ಹಾಗೂ ಈದ್‌ ಮಿಲಾದ್‌ ಅನ್ನು ಶಾಂತಿ ಮತ್ತು ಸೌಹಾರ್ದದಿಂದ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು’ ಎಂದು ತಹಶೀಲ್ದಾರ್ ಅಶೋಕ ಶಿಗ್ಗಾಂವಿ ಹೇಳಿದರು.

ಗಣೇಶೋತ್ಸವ ಮತ್ತು ಈದ್‌ ಮಿಲಾದ್‌ ಆಚರಣೆಗೆ ಸಂಬಂಧಿಸಿದಂತೆ ಪಟ್ಟಣದ ಪೊಲೀಸ್‌ ಠಾಣೆ ವ್ಯಾಪ್ತಿಯ ಗಣೇಶೋತ್ಸವ ಸಮಿತಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ, ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಸಾರ್ವಜನಿಕರೊಂದಿಗೆ ನಡೆಸಿದ ಶಾಂತಿ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.

‘ಹಬ್ಬ ಎಲ್ಲ ಮನಗಳನ್ನು ಮುದಗೊಳಿಸುವಂತಿರಬೇಕೆ ಹೊರತು ಇತರರಿಗೆ ಕಿರಿಕಿರಿ ಅಥವಾ ತೊಂದರೆ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಉಂಟು ಮಾಡುವಂತಿದ್ದರೆ ಹಬ್ಬಗಳು ಅರ್ಥಹೀನ ಎನಿಸುತ್ತವೆ. ಯಾವುದೇ ಸಮುದಾಯಗಳ ಆಚರಣೆಯಲ್ಲಿ ವಿಜೃಂಭಣೆ ಇರಲಿ ಹುಮ್ಮಸ್ಸಿನಲ್ಲಿ ಅವಘಡಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಸರ್ಕಾರದ ಕಾನೂನುಗಳನ್ನು ಗೌರವಿಸಬೇಕು’ ಎಂದರು.

ADVERTISEMENT

ಸರ್ಕಲ್‌ ಇನ್‌ಸ್ಪೆಕ್ಟರ್ ಯಶವಂತ ಬಿಸನಳ್ಳಿ ಮಾತನಾಡಿ,‘ಯಾವುದೇ ಮೆರವಣಿಗೆ, ಆಚರಣೆಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಧ್ವನಿವರ್ಧಕಗಳು ನಿಗದಿತ ಡೆಸಿಬಲ್‌ದಲ್ಲಿ ಇರುವುದು ಕಡ್ಡಾಯ. ಡಿಜೆಗಳನ್ನು ಬಳಸುವುದಕ್ಕೆ ಅವಕಾಶವೇ ಇಲ್ಲ. ಅದನ್ನು ಬಳಸಿದ ಕಡೆ ಕೆಲವರಿಗೆ ಹೃದಯ ಸ್ತಂಭನ ಆಗಿರುವ ಉದಾಹರಣೆಳಿವೆ. ಇಷ್ಟಾದರೂ ಕಾನೂನು ಮೀರಿದರೆ ಕ್ರಮ ಕೈಗೊಳ್ಳುವುದು ನಮಗೂ ಅನಿವಾರ್ಯವಾಗುತ್ತದೆ’ ಎಂದು ಹೇಳಿದರು.

ಅದೇ ರೀತಿ ಸಂಬಂಧವಿಲ್ಲದ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ. ಏನೇ ಸಮಸ್ಯೆಗಳಿದ್ದರೂ ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳೋಣ. ರಾತ್ರಿ 10 ಗಂಟೆ ನಂತರ ಯಾವುದೇ ಧ್ವನಿವರ್ಧಕ ಬಳಸುವಂತಿಲ್ಲ. ಗಣೇಶ ಮೂರ್ತಿಗಳ ವಿಸರ್ಜನೆ ಸ್ಥಳಗಳಲ್ಲಿ ಮಕ್ಕಳ ಬಗ್ಗೆ ಸಂಘಟಕರು ಕಾಳಜಿ ವಹಿಸಬೇಕು. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಬೀದಿದೀಪ, ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗೆ ಹೇಳಿದರು.

ಮಲ್ಲಿಕಾರ್ಜುನ ಗುಗ್ಗರಿ, ನಜೀರಸಾಬ್ ಮೂಲಿಮನಿ, ತಾಲ್ಲೂಕು ಮುಸ್ಲಿಂ ಪಂಚ ಸಮಿತಿ ಅಧ್ಯಕ್ಷ ಅಹ್ಮದ್‌ ಹುಸೇನ್‌ ಆದೋನಿ, ಮಂಜುನಾಥ ನಾಲಗಾರ ಹಾಗೂ ಇತರರು ಮಾತನಾಡಿದರು. ಪುರಸಭೆ ಅಧ್ಯಕ್ಷ ಮಹಾಂತೇಶ ಕಲಭಾವಿ, ಮುಖ್ಯಾಧಿಕಾರಿ ವೆಂಕಟೇಶ ಬೀಳಗಿ, ಸಬ್‌ ಇನ್‌ಸ್ಪೆಕ್ಟರ್‌ಗಳಾದ ಹನುಮಂತಪ್ಪ ತಳವಾರ, ಪುಂಡಪ್ಪ ಜಾಧವ ಹಾಗೂ ಇತರರು ಇದ್ದರು.

ಪೊಲೀಸ್‌ ಸಿಬ್ಬಂದಿ ತಾಯಪ್ಪ, ಪರಸಪ್ಪ, ಶ್ರೀಧರ ದೇಶಪಾಂಡೆ, ಪರಶುರಾಮ ಸೇರಿದಂತೆ ಗಣೇಶೋತ್ಸವ ಸಮಿತಿ ಪ್ರಮುಖರು, ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು ಶಾಂತಿಸಭೆಯಲ್ಲಿ ಹಾಜರಿದ್ದರು. ಬಸವರಾಜ ಅಂಬಾಡಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.